ಒಂಟಿ ಸಲಗದ ಹಾವಳಿಗೆ ಎರಡು ರಾಸುಗಳು ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

ಕನಕಪುರ, ಮಾ.7-ಒಂಟಿ ಸಲಗದ ದಾಳಿಗೆ ಎರಡು ರಾಸುಗಳು ಬಲಿಯಾಗಿದ್ದು, ಹತ್ತಾರು ದನ-ಕರುಗಳು ಗಾಯಗೊಂಡಿರುವ ಘಟನೆ ತಾಲೂಕಿನ ಸಾತನೂರು ಹೋಬಳಿ ಸಾಸಲಾಪುರ ಮತ್ತು ಹಲಸಿನಮರದೊಡ್ಡಿ ಗ್ರಾಮಗಳಲ್ಲಿ ಜರುಗಿದೆ. ಕಬ್ಬಾಳು ಅರಣ್ಯ ಪ್ರದೇಶದಿಂದ ಬಂದಿದ್ದ ಒಂಟಿ ಸಲಗ ಗ್ರಾಮಕ್ಕೆ ನುಗ್ಗಿತು. ತಕ್ಷಣ ಗ್ರಾಮಸ್ಥರು ಪ್ರಾಣಾಪಾಯದಿಂದ ಬಚಾವಾಗಲು ಮನೆಗಳಿಗೆ ಹೋಗಿ ಬಾಗಿಲು ಹಾಕಿಕೊಂಡರು.

ಆದರೆ ಸಲಗ ಸಾಸಲಪುರದಲ್ಲಿ ಎರಡು ರಾಸುಗಳ ಮೇಲೆ ದಾಳಿ ನಡೆಸಿದ್ದರಿಂದ ಒಂದು ಹಸು ಸ್ಥಳದಲ್ಲೇ ಮೃತಪಟ್ಟಿದೆ. ನಂತರ ಹಲಸಿನಮರ ದೊಡ್ಡಿಗೆ ನುಗ್ಗಿ ಅಲ್ಲೂ ಸಹ ಸಿಕ್ಕ ಸಿಕ್ಕ ದನಗಳ ಮೇಲೆ ದಾಳಿ ಮಾಡಿದಾಗ ಎಮ್ಮೆಯೊಂದು ಮೃತಪಟ್ಟಿದೆ. ಇದಕ್ಕೂ ಮುನ್ನ ಮಲ್ಲೇಗೌಡನ ದೊಡ್ಡಿ ಗ್ರಾಮದಲ್ಲಿ ನಡೆದು ಬರುವಾಗ ರಸ್ತೆಯಲ್ಲಿ ನಿಂತಿದ್ದ ಬೈಕೊಂದನ್ನು ತುಳಿದು ಜಖಂಗೊಳಿಸಿದೆ.

ಕಾಡಾನೆ ನಾಡಿಗೆ ನುಗ್ಗಿರುವ ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಪಟಾಕಿ ಸಿಡಿಸಿ ಕಾಡಾನೆಯನ್ನು ಮತ್ತೆ ಕಬ್ಬಾಳು ಅರಣ್ಯ ಪ್ರದೇಶಕ್ಕೆ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments