ಗ್ರಾಮಕ್ಕೆ ನುಗ್ಗಿ ವೃದ್ಧನ ಮೇಲೆ ದಾಳಿ ಮಾಡಿದ ಒಂಟಿ ಸಲಗ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ಮಾ.9- ಬೆಳ್ಳಂಬೆಳಗ್ಗೆ ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗವೊಂದು ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿರುವ ಘಟನೆ ಹಿರೇಹಳ್ಳಿ ಸಮೀಪದ ಕೋಳಿಹಳ್ಳಿಯಲ್ಲಿ ನಡೆದಿದೆ. ಕೇಶವಮೂರ್ತಿ(60) ಆನೆದಾಳಿಗೆ ಒಳಗಾದ ವ್ಯಕ್ತಿ. ಇಂದು ಬೆಳಗ್ಗೆ ಮನೆಯ ಸಮೀಪ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ನುಗ್ಗಿದ ಕಾಡಾನೆ ದಂತದಿಂದ ತಿವಿದಿದು ಮೇಲೆತ್ತಿ ಎಸೆದಿದೆ.

ಎರಡೂ ಕಾಲುಗಳು ಮುರಿದಿದ್ದು, ಕೂಡಲೇ ಗ್ರಾಮಸ್ಥರು ಗದ್ದಲ ಎಬ್ಬಿಸಿ ಆನೆಯನ್ನು ಓಡಿಸಿ, ಕೂಡಲೇ ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆಲವು ತಿಂಗಳ ಹಿಂದೆ ಚಿಕ್ಕನಾಯಕನಹಳ್ಳಿ, ಬುಕ್ಕಾಪಟ್ಟಣ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದ್ದ ಒಂಟಿ ಸಲಗವನ್ನು ನೆಲಮಂಗಲದ ಕಡೆ ಓಡಿಸಲಾಗಿತ್ತು. ಈಗ ಮತ್ತೆ ತುಮಕೂರಿಗೆ ವಾಪಸ್ ಬಂದಿದೆ.
ಆನೆ ಹಿಡಿಯೋದ, ಚಿರತೆ ಹಿಡಿಯೋದ:

ನರಭಕ್ಷಕ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿರುವ ಬೆನ್ನಲ್ಲೇ ಈಗ ಆನೆ ದಾಳಿ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ನಾವು ಆನೆ ಹಿಡಿಯೋದ ಅಥವಾ ಚಿರತೆ ಹಿಡಿಯೋದ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ.

ಮೇಲಿಂದ ಮೇಲೆ ಕಾಡಪ್ರಾಣಿಗಳ ದಾಳಿಗೆ ಅಮಾಯಕ ಜೀವಗಳು ಬಲಿಯಾಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಒಟ್ಟಿನಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ಜಿಲ್ಲೆಯ ರೈತರು, ಗ್ರಾಮಸ್ಥರು, ಸಾರ್ವಜನಿಕರು ಮನೆಯಿಂದ ಹೊರಬರಲು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವ ಸಮಯದಲ್ಲಿ ಯಾವ ಪ್ರಾಣಿಗಳು ದಾಳಿ ಮಾಡುತ್ತವೆಯೋ ಎಂಬ ಆತಂಕ ಮನೆ ಮಾಡಿದೆ.

Facebook Comments

Sri Raghav

Admin