ಮಾವಿನ ತೋಟದಲ್ಲಿ ಅನುಮಾನಾಸ್ಪವಾಗಿ ಆನೆ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

elephantಚನ್ನಪಟ್ಟಣ,ಡಿ.12-ಸುಮಾರು 40 ವರ್ಷದ ಆನೆಯೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತೆಂಗಿನಕಲ್ಲು ಅರಣ್ಯ ಇಲಾಖೆ ಒಳಪಡುವ ಬೈರಶಟ್ಟಿಹಳ್ಳಿಯ ರೈತರೊಬ್ಬರ ಮಾವಿನ ತೋಟದಲ್ಲಿ ಪತ್ತೆಯಾಗಿದ್ದು, ಆತಂಕಕ್ಕೆ ಎಡೆಮಾಡಿದೆ. ಭಾರಿಗಾತ್ರದ ಆನೆ ಗುಡ್ಡದಿಂದ ಕುಸಿದು ಬಿದ್ದ ರೀತಿಯಲ್ಲಿರುವುದರಿಂದ ಮೇಲಿನಿಂದ ಕುಸಿದು ಗಾಯವಾಗಿ ಸಾವನ್ನಪ್ಪಿರಬಹುದೆಂದು ಹೇಳಲಾಗುತ್ತಿದೆ. ಆದರೆ ಆನೆ ಕೆಲ ದಿನಗಳಿಂದ ಬೇಧಿಯಿಂದ ಅಸ್ವಸ್ಥಗೊಂಡು ಕೆಳಗೆ ಬಿದ್ದು ಸಾವನಪ್ಪಿರಬಹುದೆಂದು ಹೇಳಲಾಗುತ್ತಿದೆ.

ಆನೆ ನಿತ್ರಾಣಗೊಂಡು ಕುಸಿದಾಗ ಸಹಪಾಠಿ ಆನೆಗಳು ಕೆಳಗೆ ಬಿದ್ದ ಆನೆಯನ್ನು ಮೇಲೆಳಿಸಲು ಪ್ರಯತ್ನಿಸಿವೆ. ಆನೆಯ ದೇಹ ಸವೆದಿರುವುದು ಇದಕ್ಕೆ ಸಾಕ್ಷಿಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೋದ ಅರಣ್ಯ ಇಲಾಖೆಯ ಡಿ.ಎಫ್. ಕ್ರಾಂತಿ, ಎ.ಸಿ.ಎಫ್.ರಾಮಕೃಷ್ಣಪ್ಪ, ವಲಯ ಅರಣ್ಯಾಧಿಕಾರಿ ಕುಮಾರ್ ಹಾಗೂ ಅಧಿಕಾರಿ ವರ್ಗ ಸ್ಥಳದಲ್ಲೇ ಬೀಡು ಬಿಟ್ಟಿದ್ದು ಆನೆ ಸಾವಿನ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ, ವನ್ಯಜೀವಿ ವೈದ್ಯಾಧಿಕಾರಿಗಳನ್ನು ಬರ ಮಾಡಿಕೊಂಡು ಮರಣೋತ್ತರ ಪರೀಕ್ಷೆ ನಡೆಸಿದರು.

ಆನೆ ಯಾವ ಕಾರಣದಿಂದ ಸಾವನಪ್ಪಿದೆ ಎಂಬುದು ವೈದ್ಯರ ಮರಣೋತ್ತರ ಪರೀಕ್ಷೆಯಿಂದ ಹೊರಬರಬೇಕಾಗಿದ್ದು, ಕಾಡಿನಂಚಿನಲ್ಲಿ ಕೆಲ ರೈತರು ತಮ್ಮ ಬೇಸಾಯವನ್ನು ರಕ್ಷಣೆ ಮಾಡಲು ಜಮೀನಿನ ಸುತ್ತ ಅಳವಡಿಸುವ ತಂತಿ ಬೇಲಿಗಳಿಗೆ ವಿದ್ಯುತ್ ಹರಿಸುವುದರಿಂದಲೂ ಕೂಡ ರಾತ್ರಿ ಸಂಚಾರ ಮಾಡುವ ಅನೆಗಳಿಗೆ ಇಂತಹ ಗಂಡಾಂತರ ಎದುರಾಗಿರಬಹುದೆಂದು ಕೆಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆ ಆನೆ ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಆತಂಕವೂ ಸೃಷ್ಟಿಯಾಗಿದೆ.

Facebook Comments