ಕಾಫಿ ತೋಟಗಳಲ್ಲೇ ಗಡದ್ ನಿದ್ದೆಗೆ ಜಾರಿದ ಆನೆಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಸೆ.16- ಮಲೆನಾಡು ಭಾಗದ ಸಕಲೇಶಪುರದ ಕಾಫಿ ತೋಟಗಳನ್ನೆ ಆನೆಗಳ ಹಿಂಡು ತಮ್ಮ ಮನೆ ಮಾಡಿಕೊಂಡಿವೆ. ಇಲ್ಲಿನ ಕಾಫಿ ತೋಟಗಳಲ್ಲಿ 20 ಕ್ಕು ಹೆಚ್ಚು ಆನೆಗಳು ಕುಟುಂಬ ಸಮೇತ ನೆಲೆಸಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ.

ಆನೆಗಳ ಹಿಂಡು ಸಂತಾನೋತ್ಪತ್ತಿಗೆ ಈ ಪ್ರದೇಶವನ್ನು ಗುರುತಿಸಿಕೊಂಡಿದ್ದು ಆನೆ ತನ್ನ ಮರಿಗೆ ಜನ್ಮ ನೀಡಿದ ಬಳಿಕ ಹೆಚ್ಚುಕಾಲ ಒಂದೇ ಸ್ಥಳದಲ್ಲಿ ನೆಲೆಸಲು ಇಷ್ಟಪಡುತ್ತದೆ. ಇದರಿಂದ ಈ ಭಾಗದಲ್ಲಿ ಹೆಚ್ಚು ಸಂಚಾರ ಮಾಡುವ ಆನೆಗಳು ಬೆಳೆ ಹಾಗೂ ಪ್ರಾಣಹಾನಿಗೆ ಕಾರಣವಾಗಬಹುದೆಂಬ ಆತಂಕ ಇಲ್ಲಿನ ಗ್ರಾಮಸ್ಥರಲ್ಲಿ ಮನೆ ಮಾಡಿದೆ.

ಸಕಲೇಶಪುರ ತಾಲೂಕಿನ ಮಠಸಾಗರ ಗ್ರಾಮದಲ್ಲಿ ಕಳೆದ ಒಂದು ವಾರಗಳಿಂದ ಆನೆಗಳ ಹಿಂಡು ನೆಲೆಸಿದೆ. ಎರಡು ದಿನದ ಹಿಂದೆಯಷ್ಟೇ ಒಂಟಿ ಸಲಗವು ಗ್ರಾಮವನ್ನು ಹಗಲಿನಲ್ಲಿ ಸುತ್ತಾಡಿದ್ದು ಇಲ್ಲಿನ ಜನರ ನಿದ್ದಾಗೆಡಿಸಿದೆ.

ಇದೀಗ ಗ್ರಾಮದ ಕಾಫಿ ತೋಟದಲ್ಲಿ ತನ್ನ ಮರಿಗಳೊಂದಿಗೆ ಸುಖ ನಿದ್ರೆಗೆ ಜಾರಿರುವ ಆನೆಗಳು ಮತ್ತಷ್ಟು ಬೆಳೆ ಹಾನಿ ಮಾಡುವ ಸಂಭವ ಇದೆ ಎಂಬ ಆತಂಕವನ್ನು ಗ್ರಾಮಸ್ಥರು ಹೊರಹಾಕಿದ್ದಾರೆ .ಇನ್ನು ಈ ವಿಷಯವಾಗಿ ಅರಣ್ಯ ಇಲಾಖೆಗೆ ದೂರು ನೀಡಿದರೆ ಯಾವುದೇ ಪ್ರಯೋಜನವಾಗುತ್ತಿಲ್ಲ, ಆನೆಗಳ ಸ್ಥಳಾಂತರಕ್ಕೆ ಸರ್ಕಾರದಿಂದ ನಿರ್ದೇಶನ ಬೇಕಾಗಿದೆ ಆದರೆ ಒಂದೆರಡು ಆನೆಗಳನ್ನು ಹಿಡಿದು ಬೇರೆಡೆ ಸ್ಥಳಾಂತರಿಸಿದರೆ ಯಾವುದೇ ಪ್ರಯೋಜನವಾಗುವುದಿಲ್ಲ.

ಆನೆ ಕಾಡಿನ ಕಾರಿಡಾರ್‍ಯೋಜನೆ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ ಇದರ ಅನುಷ್ಠಾನಕ್ಕೆ ಯಾವುದೇ ಸರ್ಕಾರ ಮುಂದೆ ಬಾರದಿರುವುದು ಹಾಗೂ ಮಲೆನಾಡು ಭಾಗದಲ್ಲಿ ಆನೆ ಹಾವಳಿಗೆ ಸೂಕ್ತ ಕ್ರಮ ಹಾಗೂ ಪರಿಹಾರ ಕ್ರಮಗಳನ್ನು ಕೈಗೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಇನ್ನಾದರೂ ಸರ್ಕಾರ ಸೂಕ್ತ ಕ್ರಮ ಕೈಗೊಂಡು ಈ ಭಾಗದಲ್ಲಿ ಆನೆ ಹಾವಳಿ ನಿಯಂತ್ರಣಕ್ಕೆ ಮಾರ್ಗೋಪಾಯಗಳನ್ನು ಅನುಷ್ಠಾನ ಗೊಳಿಸಬೇಕೆಂದು ಗ್ರಾಮಸ್ಥರ ಬೇಡಿಕೆಯಾಗಿದೆ.

Facebook Comments