ಆನೆಗಳ ದಾಳಿ : ಬಾಳೆ, ಮಾವು, ಆಡಿಕೆ ಬೆಳೆ ಹಾನಿ

ಈ ಸುದ್ದಿಯನ್ನು ಶೇರ್ ಮಾಡಿ

ಚನ್ನಪಟ್ಟಣ, ಜೂ.18- ಕಾಡಾನೆಗಳ ಗುಂಪು ದಾಳಿ ಮಾಡಿ ಬೆಳೆಗಳನ್ನು ನಾಶಪಡಿಸಿರುವ ಘಟನೆ ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯ ತಾಲ್ಲೂಕಿನ ವಿರುಪಾಕ್ಷಿಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಲೇಟ್ ನಾಥೇಗೌಡ ಎಂಬುವರ ಮಗ ಶಿವಲಿಂಗಯ್ಯ, ತಮ್ಮಣ್ಣಗೌಡ ಎಂಬುವರ ಮಗ ಶ್ರೀನಿವಾಸ್, ತಿಮ್ಮೇಗೌಡ ಎಂಬುವರ ಮಗ ಗೋವಿಂದೇಗೌಡ ಎಂಬುವರ ಬಾಳೆ ತೋಟ, ಮಾವು, ಅಡಿಕೆ, ತೆಂಗನ್ನು ನಾಶಪಡಿಸಿವೆ.

ಸುಮಾರು 7 ಆನೆಗಳಿದ್ದ ಗುಂಪು ಸ್ಥಳೀಯ ಕರಿಕಲ್‍ದೊಡ್ಡಿಯ ಅರಣ್ಯ ಪ್ರದೇಶದಿಂದ ಬಂದಿರುವೆನ್ನಲಾಗಿದ್ದು, ಕೆಲ ದಿನಗಳಲ್ಲಿ ಗೊನೆ ಬಿಡಲಿದ್ದ ಸಾವಿರಾರು ಬಾಳೆ ಗಿಡಗಳನ್ನು ಕಿತ್ತು ತಿಂದು ನಂತರ ತುಳಿದು ನಾಶಪಡಿಸಿವೆ. ಮಾವಿನ ಮರದ ರೆಂಬೆಗಳು ಹಾಗೂ ಮಾವಿನ ಗಿಡಗಳನ್ನು ಬುಡ ಸಹಿತ ಕಿತ್ತಿರುವ ಆನೆಗಳು ಹತ್ತಾರು ತೆಂಗಿನ ಮರಗಳನ್ನು ಉರುಳಿಸಿ ತಮ್ಮ ಇಚ್ಛೆಯಂತೆ ರೈತರ ಬೇಸಾಯದಲ್ಲಿ ಪುಂಡಾಟಿಕೆ ನಡೆಸಿವೆ.

ಲಕ್ಷಾಂತರ ನಷ್ಟ: ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಕಷ್ಟಪಟ್ಟು ಬೆಳೆದ ಬಾಳೆ, ಅಡಿಕೆ, ಮಾವು ಫಸಲನ್ನು ಕಾಡಾನೆಗಳ ಗುಂಪು ಈ ರೀತಿ ದಾಳಿ ಮಾಡಿ ಅಪಾರ ಪ್ರಮಾಣದ ಬೆಳೆ ನಷ್ಟ ಮಾಡಿರುವುದರಿಂದ ಲಕ್ಷಾಂತರ ರೂ. ಮೌಲ್ಯ ರೈತರಿಗೆ ನಷ್ಟವಾಗಿದೆ.

ಕಳೆದ ವಾರದಿಂದಲೂ ಈ ಜಾಗದಲ್ಲಿ ಆನೆಗಳ ಕಾಟ ಹೇಳತೀರದ್ದಾಗಿದ್ದು, ರೈತರು ಬೆಳೆದ ಫಸಲನ್ನು ರಕ್ಷಣೆ ಮಾಡಿಕೊಳ್ಳುವುದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ತಮ್ಮ ಬೇಸಾಯವನ್ನು ರಕ್ಷಣೆ ಮಾಡುವುದರ ಜೊತೆಗೆ ತಮ್ಮ ಪ್ರಾಣಗಳನ್ನು ಪಣಕ್ಕಿಡುವ ಶೋಚನೀಯ ಸ್ಥಿತಿ ಎದುರಾಗಿದೆ.

ದಿನದಿನಕ್ಕೂ ತನ್ನ ಉಪಟಳವನ್ನು ದ್ವಿಗುಣಗೊಳಿಸುತ್ತಿರು ವುದರಿಂದ ಹತ್ತಾರು ಗ್ರಾಮದ ಜನರು ಮನೆಯಿಂದ ತಮ್ಮ ತೋಟ ತುಡಿಕೆಗಳಿಗೆ ತೆರಳಲು ಭಯ ಪಡುತ್ತಿದ್ದಾರೆ. ಕಾಡಾನೆಗಳು ಸ್ಥಳೀಯ ಅರಣ್ಯ ಪ್ರದೇಶದಲ್ಲಿಯೇ ವಾಸವಿದ್ದು, ರಾತ್ರಿಯ ಸಂದರ್ಭದಲ್ಲಿ ಈ ರೀತಿ ದಾಳಿ ಮಾಡುತ್ತಿವೆ ಎಂದಿರುವ ರೈತರು ಅರಣ್ಯ ಇಲಾಖೆಯವರು ಇತ್ತ ಕಡೆ ಗಮನ ಹರಿಸಿ ಆನೆಗಳ ಹಾವಳಿಯನ್ನು ನಿಯಂತ್ರಣ ಮಾಡಬೇಕೆಂದು ಮನವಿ ಮಾಡಿದ್ದಾರೆ.

Facebook Comments