‘ಎಲ್ಲಿದ್ದೆ ಇಲ್ಲಿ ತನಕ’ ಚಿತ್ರ ಈ ವಾರ ರಿಲೀಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಳ್ಳಿ ಪರದೆ ಮೇಲೆ ನಟನೆ ಮೂಲಕ ತಮ್ಮದೇ ಆದ ಛಾಪು ಮೂಡಿಸಿದಂತಹ ನಾಯಕ ಸುಬ್ಬಯ್ಯನಾಯ್ಡು. ಅವರ ಮಗ ಲೋಕೇಶ್ ಕೂಡ ವಿಭಿನ್ನ ಚಿತ್ರಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆದವರು. ಈಗ ಅವರ ಸುಪುತ್ರ ಸೃಜನ್ ಲೋಕೇಶ್ ಕೂಡ ಸಿನಿಮಾ ಹಾಗೂ ಕಿರುತೆರೆ ಎರಡರಲ್ಲೂ ಪ್ರೇಕ್ಷಕರ ಮೆಚ್ಚುಗೆ ಪಡೆದು ಟಾಕಿಂಗ್ ಸ್ಟಾರ್ ಎಂದು ಗುರುತಿಸಿಕೊಂಡು ತಮ್ಮದೇ ಲೋಕೇಶ್ ಪ್ರೊಡಕ್ಷನ್ಸ್ ಎಂಬ ಬ್ಯಾನರ್‍ನಡಿ ಪ್ರಥಮ ಬಾರಿಗೆ ಎಲ್ಲಿದ್ದೆ ಇಲ್ಲಿ ತನಕ ಎಂಬ ಚಿತ್ರವನ್ನು ನಿರ್ಮಾಣ ಮಾಡಿ ತೆರೆಗೆ ತರುತ್ತಿದ್ದಾರೆ.

ಇದು ಲೋಕೇಶ್ ಅಭಿನಯದ ಎಲ್ಲಿಂದಲೋ ಬಂದವರು ಚಿತ್ರದ ಜನಪ್ರಿಯ ಗೀತೆಯ ಮೊದಲ ಸಾಲಾಗಿದ್ದು, ಎಲ್ಲಿದ್ದೆ ಇಲ್ಲಿ ತನಕ ಚಿತ್ರವನ್ನು ಯುವ ನಿರ್ದೇಶಕ ತೇಜಸ್ವಿ ನಿರ್ದೇಶನ ಮಾಡಿದ್ದಾರೆ. ಮೊದಲ ಬಾರಿಗೆ ನಟ ಸೃಜನ್ ಹಾಗೂ ಹರಿಪ್ರಿಯಾ ಒಟ್ಟಿಗೆ ಜೋಡಿಯಾಗಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ತಾರಾ ನಾಯಕನ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ. ಮೊನ್ನೆ ನಡೆದ ಈ ಚಿತ್ರದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಹಾಜರಿದ್ದು ತಮ್ಮ ಅನುಭವಗಳನ್ನು ಹಂಚಿಕೊಂಡಿತು.

ಆರಂಭದಲ್ಲಿ ಶ್ರೀಮತಿ ಗಿರಿಜಾ ಲೋಕೇಶ್ ಮಾತನಾಡಿ, ನನ್ನ ಮಗ ಕಲಾವಿದ ಆಗ್ತಾನೆ ಅಂತ ನಾವ್ಯಾರೂ ಅಂದುಕೊಂಡಿರಲಿಲ್ಲ. ಈಗ ಸಿನಿಮಾ ಮಾಡಿರುವುದು ತುಂಬಾ ಖುಷಿಯಾಗಿದೆ. ಗೆದ್ದೇ ಗೆಲ್ತಾನೆ ಎನ್ನುವ ನಂಬಿಕೆಯಿದೆ ಎಂದು ಹೇಳಿದರು. ಹಿರಿಯ ನಟ ಎಂ.ಎಸ್.ಉಮೇಶ್ ಮಾತನಾಡಿ, ಸೃಜನ್ ಅವರ ತಂದೆ, ತಾತ ಇಬ್ಬರ ಜೊತೆಗೂ ನಾನು ಕೆಲಸ ಮಾಡಿದ್ದೇನೆ. ಈಗ ಸೃಜನ್ ಹಾಗೂ ಆತನ ಮಗ ಕೂಡ ಈ ಚಿತ್ರದಲ್ಲಿ ಅಭಿನಯಿಸಿರುವುದರಿಂದ 4 ತಲೆಮಾರುಗಳ ಜೊತೆಯೂ ಆ್ಯಕ್ಟ್ ಮಾಡಿರುವ ಹೆಮ್ಮೆ ನನಗಿದೆ ಎಂದು ಹೇಳಿದರು.

ನಟಿ ತಾರಾ ಮಾತನಾಡಿ, ಈ ಪ್ರೊಡಕ್ಷನ್ ಹೌಸ್ ನನಗೆ ಮನೆ ಥರ ಇತ್ತು. ಫೀಲ್ ಗುಡ್ ಸಿನಿಮಾ. ಮನಸ್ಸಿಗೆ ಸಂತೋಷ ಕೊಡುವ ಸಿನಿಮಾ ಶೂಟಿಂಗ್ ಜೊತೆಗೆ ನಾವು ಸಂಬಂಧಗಳನ್ನು ಬೆಳೆಸಿಕೊಂಡು ಬಂದೆವು ಎಂದು ಹೇಳಿದರು. ನಾಯಕ, ನಿರ್ಮಾಪಕ ಸೃಜನ್ ಮಾತನಾಡಿ, ಹರಿಪ್ರಿಯಾ, ತಾರಾ ಈ ಚಿತ್ರದ ನಾಯಕಿಯರಾದರೆ ನಾನು ಹಾಗೂ ವೇಣು ನಾಯಕರು.

ಸಿನಿಮಾ ಮಾಡುವುದು ನನಗೆ ಅಷ್ಟು ಕಷ್ಟ ಎನಿಸಲಿಲ್ಲ. ರಿಲೀಸ್ ಮಾಡಲಿಕ್ಕೆ ತುಂಬಾ ಹೆಣಗಾಡಬೇಕಾಗಿದೆ. ಸಿನಿಮಾದ ಪ್ರತಿ ಫ್ರೇಮ್‍ನ್ನು ವೇಣು ಅವರು ಪೇಂಟಿಂಗ್ ಥರ ಮಾಡಿಸಿದ್ದಾರೆ ಎಂದು ಹೇಳಿದರು. ನಾಯಕಿ ಹರಿಪ್ರಿಯ ಮಾತನಾಡಿ, ಈ ಚಿತ್ರದಲ್ಲಿ ಅಭಿನಯಿಸಿದ್ದು ನನ್ನ ಪುಣ್ಯ. ಈ ಚಿತ್ರವನ್ನು ಅದ್ಧೂರಿಯಾಗಿ ತರಬೇಕೆಂದು ಸೃಜನ್ ಹಾಗೂ ಅವರ ತಂಡ ಬಹಳಷ್ಟು ಶ್ರಮ ವಹಿಸಿದ್ದಾರೆ.

ನಿರೀಕ್ಷೆಯಂತೆ ಚಿತ್ರ ಉತ್ತಮವಾಗಿ ಬಂದಿದೆ. ನನ್ನನ್ನು ಬಹಳ ಸೊಗಸಾಗಿ ತೆರೆ ಮೇಲೆ ಛಾಯಾಗ್ರಾಹಕರು ತೋರಿಸಿದ್ದಾರೆ. ಚಿತ್ರ ಎಲ್ಲರನ್ನೂ ಸೆಳೆಯಲಿದೆ ಎಂದು ಹೇಳಿಕೊಂಡರು.
ನಂತರ ಹಾಸ್ಯನಟ ತಬಲ ನಾಣಿ ಮಾತನಾಡಿ, ಇದು ಒಂದು ಕಂಪನಿ. ನಮ್ಮೆಲ್ಲರನ್ನೂ ಸಾಕಿದೆ. ಈ ಚಿತ್ರ ಯಶಸ್ಸು ಕಾಣಬೇಕೆಂದು ಹೇಳಿದರು. ಮತ್ತೊಬ್ಬ ಹಾಸ್ಯನಟ ಗಿರಿ ಮಾತನಾಡಿ, ಈ ಚಿತ್ರದಲ್ಲಿ ವಿಶೇಷವಾದ ಪಾತ್ರ ಕೊಟ್ಟಿದ್ದಾರೆ. ಖಂಡಿತ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂಬ ನಂಬಿಕೆ ಇದೆ ಎಂದರು.

ಉಳಿದಂತೆ ಛಾಯಾಗ್ರಾಹಕ ಎಚ್.ಸಿ.ವೇಣು ಹಾಗೂ ಗಾಯಕ ಅನಿರುದ್ಧ್ ಶಾಸ್ತ್ರಿ ಚಿತ್ರದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.  ಈ ಚಿತ್ರ ಇದೇ ವಾರ ರಾಜ್ಯಾದ್ಯಂತ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಗೊಳ್ಳುತ್ತಿದೆ. ಸೃಜನ್ ಅವರ ಮೊದಲ ನಿರ್ಮಾಣದ ಈ ಚಿತ್ರಕ್ಕೆ ಪ್ರೇಕ್ಷಕ ಮಹಾಪ್ರಭುಗಳು ಯಾವ ರೀತಿ ಪ್ರೀತಿ ತೋರಿಸುತ್ತಾರೋ ಎಂಬುದನ್ನು ನೋಡಬೇಕು.

Facebook Comments