ಇಂದು ಮತ್ತೆ ತುರ್ತು ಸಚಿವ ಸಂಪುಟ ಸಭೆ ಕರೆದ ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಅಬ್ಬರ ಹೆಚ್ಚಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಕ್ಸಿಜನ್ ಕೊರತೆ, ಔಷಧ ಹಾಗೂ ಲಸಿಕೆ ಕೊರತೆ ಬಗ್ಗೆ ಚರ್ಚಿಸಲು ಇಂದು ಸಂಜೆ ತುರ್ತು ವಿಶೇಷ ಸಚಿವ ಸಂಪುಟ ಸಭೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆದಿದ್ದಾರೆ.

ಕೋಲಾರ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಿಂದ ಸೋಂಕಿತರು ಮೃತಪಟ್ಟ ಘಟನೆ ಮಾಸುವ ಮುನ್ನವೇ ಚಾಮರಾಜನಗರದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಇದು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಾದಾತ್ಮಕ ಘಟನೆಯಾಗಿ ಬದಲಾಗಿದ್ದು, ರಾಹುಲ್ ಗಾಂಧಿ ಕೂಡ ಘಟನೆ ಬಗ್ಗೆ ಕಿಡಿಕಾರಿದ್ದಾರೆ.

ಹೀಗಾಗಿ ಇಂದು ನಡೆಯುವ ಸಭೆಯಲ್ಲಿ ಇಂತಹ ದುರಂತಗಳು ಮರುಕಳಿಸದಂತೆ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದರ ಕುರಿತು ಸರ್ಕಾರ ಚರ್ಚೆ ನಡೆಸುವ ಸಾಧ್ಯತೆಗಳಿವೆ.

ಈ ನಡುವೆ ರಾಜ್ಯದಲ್ಲಿ ಪ್ರಸ್ತುತ ಜಾರಿಗೆ ತಂದಿರುವ ಜನತಾ ಕರ್ಫ್ಯೂ ನಿಯಮಗಳ ಪಾಲನೆ ಸಮರ್ಪಕವಾಗಿ ಆಗದೇ ಇರುವುದರಿಂದ ಎರಡು ವಾರಗಳ ಸಂಪೂರ್ಣ ಲಾಕ್ಡೌನ್ ಮಾಡಬೇಕೆಂದು ಕೆಲವು ಸಚಿವರು ಸರ್ಕಾರಕ್ಕೆ ಸಲಹೆ ನೀಡುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಕೊರೋನಾ ಕರ್ಫ್ಯೂ ಜಾರಿ ಮಾಡಿರುವ ರಾಜ್ಯ ಸರ್ಕಾರ ಕೈಗಾರಿಕೆಗಳು, ಕಟ್ಟಣ ನಿರ್ಮಾಣ ಕಾರ್ಯಗಳು, ಶೇ.50 ರಷ್ಟು ನೌಕರರೊಂದಿಗೆ ಗಾರ್ಮೆಂಟ್ಸ್ ಗಳು ಕಾರ್ಯನಿರ್ವಹಿಸಲು ಅವಕಾಶ ನೀಡಿದೆ.

ಇನ್ನು ಚಾಮರಾಜನಗರದಲ್ಲಿ ಸಂಭವಿಸಿದ ದುರಂತದಿಂದ ಯಡಿಯೂರಪ್ಪ ಅವರು ತೀವ್ರವಾಗಿ ಬೇಸರಗೊಂಡಿದ್ದು, ಸಭೆಯಲ್ಲಿ ಆರೋಗ್ಯ ಸಚಿವಾಲಯದ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಸಚಿವ ಸುರೇಶ್ ಕುಮಾರ್ ಅವರಿಂದ ಸ್ಪಷ್ಟನೆಗಳನ್ನು ಕೇಳಿದ್ದು, ಸಭೆಯಲ್ಲಿ ಅಧಿಕಾರಿಗಳು ಸ್ಪಷ್ಟನೆ ನೀಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

Facebook Comments

Sri Raghav

Admin