ಇಎಂಐ ಕಟ್ಟುವ ವಿಚಾರಕ್ಕೆ ಜಗಳ; ಸ್ನೇಹಿತನ ಕೊಂದ ಆರೋಪಿ ಪರಾರಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 13- ಸಾಲದ ಕಂತಿನ ಇಎಂಐ ಹಣ ಕಟ್ಟಲಿಲ್ಲವೆಂಬ ಕಾರಣಕ್ಕೆ ಕಾಲ್‍ಸೆಂಟರ್ ಉದ್ಯೋಗಿ ಒಬ್ಬರನ್ನು ಸ್ನೇಹಿತನೇ ಇರಿದು ಕೊಲೆ ಮಾಡಿ ಆರೋಪಿ ಪರಾರಿಯಾಗಿರುವ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ನಡೆದಿದೆ. ಥಣಿಸಂದ್ರದ ಜಯಕುಮಾರ್ (31) ಕೊಲೆಯಾದ ಕಾಲ್‍ಸೆಂಟರ್ ಉದ್ಯೋಗಿ.

ಜಯಕುಮಾರ್‍ನ ವ್ಯಾಪಾರಕ್ಕಾಗಿ ಸ್ನೇಹಿತ ಸಾಲ ಕೊಡಿಸಿದ್ದು, ಪ್ರತಿ ತಿಂಗಳು ಇಎಂಐ ಕಟ್ಟಲು ಹೇಳಿದ್ದನು. ಅದರಂತೆ ಪ್ರತಿ ತಿಂಗಳು ಜಯಕುಮಾರ್ ಇಎಂಐ ಕಟ್ಟುತ್ತಿದ್ದು, ಈ ತಿಂಗಳು ಕಟ್ಟಿರಲಿಲ್ಲ.

ಈ ವಿಷಯವಾಗಿ ಜಯಕುಮಾರ್ ಹಾಗೂ ಸ್ನೇಹಿತನ ನಡುವೆ ನಿನ್ನೆ ಸಂಜೆ ಕಾಚರಕನಹಳ್ಳಿಯ ಸಿಎಂಆರ್ ಕಾಲೇಜು ಸಮೀಪ ಜಗಳವಾಗಿದೆ. ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದಾಗ ಸ್ನೇಹಿತ ಚಾಕುವಿನಿಂದ ಜೈಕುಮಾರ್ ಎದೆಗೆ ಚುಚ್ಚಿದ್ದಾನೆ. ತೀವ್ರ ರಕ್ತಸ್ರಾವದಿಂದ ಜೈಕುಮಾರ್ ಕುಸಿದು ಬಿದ್ದಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ವೈದ್ಯರು ಪರೀಕ್ಷಿಸಿ ಮೃತಪಟ್ಟಿದ್ದಾನೆಂದು ತಿಳಿಸಿದ್ದಾರೆ.

ಆರೋಪಿ ಪರಾರಿಯಾಗಿದ್ದಾನೆ, ಮೃತ ದೇಹವನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಿ, ಕೊಲೆ ಪ್ರಕರಣ ದಾಖಲಿಸಿಕೊಂಡಿರುವ
ಪೊಲೀಸರು ಆರೋಪಿ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.

Facebook Comments