ಇಎಂಐ ಕಟ್ಟಲು ಜೂ. 30ವರೆಗೆ ವಿನಾಯ್ತಿ ನೀಡಲು ಪಿಎಂ ಮತ್ತು ಸಿಎಂಗೆ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.26- ವಿಶ್ವಾದ್ಯಂತ ಹೆಮ್ಮಾರಿಯಂತೆ ಹರಡುತ್ತಿರುವ ಕೊರೊನಾ ವೈರಸ್ ದಾಳಿಯಿಂದ ದೇಶದ ಜನರನ್ನು ರಕ್ಷಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆಗೆದುಕೊಳ್ಳುತ್ತಿರುವ ಮುಂಜಾಗ್ರತಾ ಕ್ರಮಗಳು ಶ್ಲಾಘನೀಯವಾಗಿವೆ.ಆದರೆ, ದೇಶಾದ್ಯಂತ ಲಾಕ್ ಡೌನ್ ಮಾಡಿರುವುದರಿಂದ ಸಾಮಾನ್ಯ ಜನರು, ಮಧ್ಯಮ ವರ್ಗ, ಸಣ್ಣ ಉದ್ದಿಮೆದಾರರು ಹಾಗು ವ್ಯಾಪಾರಸ್ಥರು ಮಾಡಿರುವ ಸಾಲದ ಕಂತು, (ಇಎಂಐ) ಪಾವತಿಸುವ ಅವಧಿಯನ್ನು ಜೂನ್ 30 ರವೆಗೆ ವಿಸ್ತರಿಸುವಂತೆ ಅಖಿಲ ಭಾರತ ವೀರಶೈವ ಮಹಾಸಭೆಯ ಕೈಗಾರಿಕೆ ಹಾಗೂ ವಾಣಿಜ್ಯ ಘಟಕದ ರಾಷ್ಟ್ರೀಯ ಅಧ್ಯಕ್ಷ ಉಮೇಶ್ ಪಾಟೀಲ್ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜನತಾ ಕರ್ಪ್ಯೂ ಅಂತ ಜಾಗೃತಿ ಕಾರ್ಯಕ್ರಮಗಳ ಜೊತೆಗೆ ದೇಶದ ಜನರು ಕೊರೊನಾ ಪರಿಣಾಮವಾಗಿ ಸಂಕಷ್ಟದಲ್ಲಿರುವುದನ್ನು ಮನಗಂಡು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ.ಸೀತಾರಾಮನ್ ಅವರು ಜನರು ಮಾರ್ಚ್ 31 ರ ಒಳಗೆ ಪಾವತಿ ಮಾಡಬೇಕಿದ್ದ ಆದಾಯ ತೆರಿಗೆಯನ್ನು ಕಟ್ಟಲು ಜೂನ್ 30 ರ ವರೆಗೆ ಅವಧಿ ವಿಸ್ತರಣೆ ಮಾಡಿರುವುದು, ಸಾಮಾನ್ಯ ಜನರ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಿರುವುದು ಶ್ಲಾಘನೀಯವಾಗಿದೆ.

ಆದರೆ, ದೇಶದ ಮಧ್ಯಮ ವರ್ಗ, ಕೆಳ ಮಧ್ಯಮ ಹಾಗೂ ಬಡವರು, ಸಣ್ಣ ಉದ್ದಿಮೆದಾರರು, ವ್ಯಾಪಾರಸ್ಥರು ತಮ್ಮ ಜೀವನ ಸಾಗಿಸಲು ಅನೇಕ ರೀತಿಯ ಸಾಲ ಸೌಲಭ್ಯಗಳನ್ನು ಬ್ಯಾಂಕ್ ಹಾಗೂ ಇತರೆ ಹಣಕಾಸು ಸಂಸ್ಥೆಗಳಿಂದ ಪಡೆದುಕೊಂಡಿರುತ್ತಾರೆ.ಆ ಸಾಲವನ್ನು ಕಂತಿನ ರೂಪದಲ್ಲಿ (ಇಎಂ ಐ) ಮರು ಪಾವತಿ ಮಾಡುತ್ತಿರುತ್ತಾರೆ. ಆದರೆ ಕೊರೊನಾ ವೈರಸ್ ಹಾವಳಿಯಿಂದ ಎಲ್ಲ ರೀತಿಯ ವ್ಯಾಪಾರ ವಹಿವಾಟು, ಉದ್ಯೋಗ, ಸ್ಥಗಿತಗೊಂಡಿರುವುದರಿಂದ ಸಾಮಾನ್ಯ ಜನರು ಹಣಕಾಸಿನ ಸಮಸ್ಯೆ ಎದುರಿಸುವಂತಾಗಿದೆ. ಈ ಸಂದರ್ಭದಲ್ಲಿ ತಾವು ಮಾಡಿಕೊಂಡ ಸಾಲದ ಇಎಂ ಐ ಕಟ್ಟಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಹಿನ್ನೆಲೆಯಲ್ಲಿ ದಯವಿಟ್ಟು ಸಾರ್ವಜನಿಕರಿಗೆ ಅನುಕೂಲವಾಗುಂತೆ ಜೂನ್ 30 ರ ರವೆಗೆ ಇಎಂ ಐ ಕಂತು ಪಾವತಿಸಲು ಸಮಯದ ವಿನಾಯಿತಿ ನೀಡುವಂತೆ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

Facebook Comments

Sri Raghav

Admin