ಜೀವ ಇದ್ದರೆ ಮತ್ತೆ ಬಂದು ಹಣ ಸಂಪಾದಿಸಬಹುದು: ಮತ್ತೆ ತಮ್ಮೂರಿನತ್ತ ಕಾರ್ಮಿಕರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.21- ತುತ್ತಿನ ಚೀಲ ತುಂಬಿಸಿಕೊಳ್ಳಲು ಹೊರ ರಾಜ್ಯಗಳಿಂದ ನಗರಕ್ಕೆ ಬಂದಿದ್ದ ಕಾರ್ಮಿಕರು , ಉದ್ಯೋಗಿಗಳು ಮತ್ತೆ ತಮ್ಮೂರಿನತ್ತ ತೆರಳುತ್ತಿದ್ದಾರೆ. ಮಹಾಮಾರಿ ಕೊರೊನಾ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು, ಸಾವಿನ ಸಂಖ್ಯೆಯೂ ಸಹ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆತಂಕ ಎದುರಾಗಿದ್ದು, ಉದ್ಯೋಗಕ್ಕಾಗಿ ದೇಶದ ವಿವಿಧ ರಾಜ್ಯಗಳಿಂದ ಬಂದು ನೆಲೆಸಿದ್ದ ಹಲವರು ಮತ್ತೆ ತವರಿನತ್ತ ತೆರಳುತ್ತಿದ್ದಾರೆ.

ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಈಗಾಗಲೇ ಹಲವು ಮಾರ್ಗಸೂಚಿಗಳನ್ನು ಹೊರಡಿಸಿದ್ದು , ಎಲ್ಲಿ ಲಾಕ್‍ಡೌನ್ ಆಗುತ್ತದೆಯೋ ಎಂಬ ಆತಂಕದಲ್ಲಿ ವಾಪಸ್ ಆಗುತ್ತಿದ್ದಾರೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಜನರು ಲಗೇಜ್‍ಗಳೊಂದಿಗೆ ಭಾರೀ ಸಂಖ್ಯೆಯಲ್ಲಿ ಆಗಮಿಸಿ ರೈಲುಗಳಿಗಾಗಿ ಕಾಯುತ್ತಿದ್ದ ದೃಶ್ಯಗಳು ಕಂಡು ಬಂತು.

ಸಾರಿಗೆ ನೌಕರರ ಮುಷ್ಕರದ ನಡುವೆಯೂ ಕೆಲ ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್‍ಗಳು ಸಂಚಾರ ಆರಂಭಿಸಿದ್ದು , ನಿಲ್ದಾಣಗಳತ್ತ ವಲಸೆ ಕಾರ್ಮಿಕರು ತೆರಳುತ್ತಿದ್ದು, ಸರ್ಕಾರಿ ಹಾಗೂ ಖಾಸಗಿ ಬಸ್‍ಗಳು ಭರ್ತಿಯಾಗುತ್ತಿವೆ. ಆದರೆ ಸಾರಿಗೆ ಬಸ್‍ಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಹೆಚ್ಚು ಪ್ರಯಾಣಿಕರನ್ನು ಹತ್ತಿಸಿಕೊಳ್ಳದೆ ಸಾಮಾಜಿಕ ಅಂತರದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ದೃಶ್ಯಗಳು ಕಂಡು ಬಂದವು.

ಜೀವ ಇದ್ದರೆ ಮತ್ತೆ ಬಂದು ಹಣ ಸಂಪಾದಿಸಬಹುದು. ಆದರೆ ಜೀವವೇ ಹೋದರೆ ಏನು ಮಾಡುವುದು. ಮೊದಲು ನಮ್ಮ ಹಾಗೂ ನಮ್ಮ ಕುಟುಂಬದವರ ಆರೋಗ್ಯ ಮುಖ್ಯ. ಹಾಗಾಗಿ ನಾವು ನಮ್ಮ ಊರಿಗೆ ಹೋಗುತ್ತಿದ್ದೇವೆ ಎಂದು ಉತ್ತರ ಕರ್ನಾಟಕದ ವಲಸೆ ಕಾರ್ಮಿಕರೊಬ್ಬರು ತಿಳಿಸಿದ್ದಾರೆ.

ಕೊರೊನಾ ಹೆಚ್ಚಾಗುತ್ತಿದ್ದು , ಮಾರ್ಗಸೂಚಿ ಅನ್ವಯ ಕೆಲಸವಿಲ್ಲದೆ ನಾವೇನು ಮಾಡೋದು , ಹಣ ಇಲ್ಲದಿದ್ರೆ ಬೆಂಗಳೂರಿನಲ್ಲಿ ಏನೂ ನಡೆಯೋಲ್ಲ. ನಮ್ಮೂರಿಗಾದ್ರು ಹೋದ್ರೆ ಒಬ್ಬರಲ್ಲ ಒಬ್ಬರು ಸಹಾಯಕ್ಕೆ ಬರುತ್ತಾರೆ. ಮೂರೊತ್ತಿನ ಊಟಕ್ಕೆ ತೊಂದರೆ ಇಲ್ಲ. ಆರೋಗ್ಯದಿಂದಲೂ ಇರುತ್ತೇವೆ ಎಂದು ಮತ್ತೊಬ್ಬ ಕಾರ್ಮಿಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

Facebook Comments