ಬೆದರಿಕೆಗೆ ಬಗ್ಗಲ್ಲ, ಅನಿರ್ದಿಷ್ಠಾವಧಿ ಮುಷ್ಕರ : ಕೋಡಿಹಳ್ಳಿ ಚಂದ್ರಶೇಖರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.6- ಸರ್ಕಾರ ತಮ್ಮ ಬೇಡಿಕೆಗಳಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ನಾಳೆಯಿಂದ ಅನಿರ್ದಿಷ್ಟಾವಧಿ ಮುಷ್ಕರವನ್ನು ನೌಕರರು ಮುಂದುವರೆಸಲಿದ್ದಾರೆ ಎಂದು ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿ ಹಳ್ಳಿ ಚಂದ್ರಶೇಖರ್ ಸ್ಪಷ್ಟ ಪಡಿಸಿದ್ದಾರೆ. ಮುಖ್ಯಮಂತ್ರಿಯವರ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಸರ್ಕಾರ ತನ್ನ ನಿಲುವನ್ನು ಸ್ಪಷ್ಟ ಪಡಿಸಿತ್ತು. ಅದಕ್ಕೆ ಪ್ರತಿಕ್ರಿಯಿಸಿರುವ ಕೋಡಿಹಳ್ಳಿ ಚಂದ್ರಶೇಖರ್ ಅವರು, ಯಾವ ತಪ್ಪಿಗಾಗಿ ನೌಕರರ ಮೇಲೆ ಎಸ್ಮಾ ಸೇರಿದಂತೆ ಕಠಿಣ ಕಾನೂನುಗಳನ್ನು ಹೇರುತ್ತೀರಾ ಎಂದು ಪ್ರಶ್ನಿಸಿದ್ದಾರೆ.

ಅರ್ಧ ವೇತನಕ್ಕೆ ಸಾರಿಗೆ ನಿಗಮಗಳ ನೌಕರರು ಕೆಲಸ ಮಾಡುತ್ತಿದ್ದಾರೆ. ಅರೆ ಹೊಟ್ಟೆಯಲ್ಲಿರುವ ಅವರು ನ್ಯಾಯ ಕೇಳಿದರೆ ಸರ್ಕಾರ ಎಸ್ಮಾ ಜಾರಿ ಮಾಡುವುದಾಗಿ ಹೇಳುತ್ತಿದೆ ಎಂದು ಆಕ್ಷೇಪಿಸಿದರು. ಅಧಿಕಾರಿಗಳು, ಮುಖ್ಯಮಂತ್ರಿಗಳಿಗಿಂತಲೂ ಮೇಲ್ಪಟ್ಟು ಕಾನೂನಿದೆ. ಆರೂವರೆ ಕೋಟಿ ಜನರಿದ್ದಾರೆ, ಅವರು ಎಲ್ಲವನ್ನೂ ನೋಡುತ್ತಿದ್ದಾರೆ. ಸರ್ಕಾರ ಇದೇ ರೀತಿ ನಡೆದುಕೊಂಡರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ಕಳೆದ ಬಾರಿ ಮುಷ್ಕರ ನಡೆದಾಗ 2020ರ ಡಿಸೆಂಬರ್ 14ರಂದು ಸರ್ಕಾರ ನಮಗೆ ಲಿಖಿತ ಭರವಸೆ ನೀಡಿ, ಆರನೇ ವೇತನ ಆಯೋಗ ಜಾರಿಗೊಳಿಸುವುದಾಗಿ ಹೇಳಿತ್ತು. ಸರ್ಕಾರ ಕೊಟ್ಟ ಮಾತನ್ನು ನಡೆಸಿಕೊಡಬೇಕು. ನಮ್ಮ ಬೇಡಿಕೆ ಅದರ ಸುತ್ತಲೇ ಸುತ್ತುತ್ತಿದೆ. ಬೇರೆ ವಿಷಯಗಳ ಬಗ್ಗೆ ನಾವು ಆದ್ಯತೆ ನೀಡುವುದಿಲ್ಲ ಎಂದಿದ್ದಾರೆ.

ಚರ್ಚೆ, ಸಂಧಾನ ಎಂದಾಗ ಕೊಟ್ಟು ತೆಗೆದುಕೊಳ್ಳುವುದು ಸಾಮಾನ್ಯ. ಅದ ನ್ನು ಬಿಟ್ಟು ಸರ್ಕಾರ ಎಸ್ಮಾ ಜಾರಿಗೊಳಿಸುತ್ತೇವೆ. ಜೈಲಿಗೆ ಹಾಕುತ್ತೇವೆ ಎಂಬ ಬೆದರಿಕೆ ಹಾಕುತ್ತಿದೆ. ಹೆದರಿಕೆ ಬೆದರಿಕೆಯನ್ನು ಕಟ್ಟಿಟ್ಟು ಬಿಡಿ. ಜೈಲಿಗೆ ಹಾಕುವುದಾದರೆ ಒಂದು ಲಕ್ಷ ಮೂವತ್ತು ಸಾವಿರ ಮಂದಿ ನೌಕರರು ಮತ್ತು ಅವರ ಕುಟುಂಬದವರು ಜೈಲಿಗೆ ಹೋಗಲು ಸಿದ್ಧ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ಸರ್ಕಾರದ ಬೆದರಿಕೆಯಿಂದ ನೌಕರರು ತಾಳ್ಮೆ ಕಳೆದುಕೊಳ್ಳಬಾರದು. ಶಾಂತಿಯುತವಾದ ಹೋರಾಟವನ್ನು ಮುಂದುವರೆಸಬೇಕು. ನಮ್ಮ ಮುಷ್ಕರ ಸಂಪೂರ್ಣವಾಗಿ ಅಹಿಂಸಾ ಮಾರ್ಗದಲ್ಲೇ ಮುಂದುರೆಯಬೇಕು ಎಂದು ಅವರು ಮನವಿ ಮಾಡಿದರು.

Facebook Comments