ವೇತನಕ್ಕಾಗಿ ಗ್ರಾ.ಪಂ. ನೌಕರರ ಪ್ರತಿಭಟನೆ, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.15- ಗ್ರಾಮ ಪಂಚಾಯತಿ ನೌಕರರಿಗೆ 10 ರಿಂದ 15 ತಿಂಗಳುಗಳಿಂದ ಸರ್ಕಾರ ವೇತನ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಇಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನೌಕರರು ಯತ್ನಿಸಿದರು. ಗ್ರಾಮ ಪಂಚಾಯಿತಿ ನೌಕರರು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಹಲವು ಬೇಡಿಕೆಗಳಿಗೆ ಒತ್ತಾಯಿಸಿ ಗ್ರಾಪಂ ನೌಕರರ ಸಂಘ ಪ್ರತಿಭಟನೆ ಹಾಗೂ ಮೆರವಣಿಗೆ ಹಮ್ಮಿಕೊಂಡು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ವಿಧಾನಸೌಧದವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದರು.

10 ರಿಂದ 15 ತಿಂಗಳುಗಳಿಂದ ವೇತನ ಇಲ್ಲದೆ ಕೆಲಸ ಮಾಡುತ್ತಿದ್ದೇವೆ. 2021 ಸೆಪ್ಟೆಂಬರ್ ತಿಂಗಳಲ್ಲಿ ಸರ್ಕಾರದ ನಿಧಿಯಿಂದ ಇಎಫ್‍ಎಂಎಸ್ ಮೂಲಕ ವೇತನ ನೀಡಲು ರಾಜ್ಯ ಸರ್ಕಾರ ಆದೇಶ ಮಾಡಿತ್ತು. ಆದರೆ ಇಲ್ಲಿಯವರೆಗೆ ವೇತನ ಬಿಡುಗಡೆ ಸರಿಯಾಗಿ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಿಂಗಳಿಗೆ ಸರಿಯಾಗಿ ವೇತನ ಬಿಡುಗಡೆ ಮಾಡಬೇಕು, ವೇತನಕ್ಕಾಗಿ 700 ಕೋಟಿ ಹಣ ಬಿಡುಗಡೆ ಮಾಡಬೇಕು, 10 ವರ್ಷ ಮೇಲ್ಪಟ್ಟವರಿಗೆ ಪ್ರಮೋಷನ್‍ಗಾಗಿ ಅರ್ಹತಾ ಪರೀಕ್ಷೆ ರದ್ದುಗೊಳಿಸಬೇಕು, ಪಿಂಚಣಿ ಫೈಲ್ ರೆಡಿ ಇದೆ, ಪಿಂಚಣಿ ನೀಡುವ ಆದೇಶ ಆಗಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಎರಡೂವರೆಯಿಂದ ಮೂರು ಸಾವಿರ ಪ್ರತಿಭಟನಾಕಾರರು ಭಾಗಿಯಾಗಿದ್ದರು.

Facebook Comments