ಗುತ್ತಿಗೆ ನೌಕರರ ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು :  ವಿವಿಧ ಸರ್ಕಾರಿ ಇಲಾಖೆಗಳಿಗೆ ಹೊರಗುತ್ತಿಗೆ ಸಿಬ್ಬಂದಿ ಒದಗಿಸುವ ಪ್ರತಿ ಮಾನವ ಸಂಪನ್ಮೂಲ ಸಂಸ್ಥೆಗಳು ಕನ್ನಡಿಗರನ್ನು ಮಾತ್ರ ನೇಮಿಸಿ ಕೊಳ್ಳಬೇಕು ಎಂದು ಕರ್ನಾಟಕ ಸರ್ಕಾರ ಸುತ್ತೋಲೆ ಹೊರಡಿಸಿದೆ. ಕನ್ನಡ ಕಾಯಕ ವರ್ಷ ಆಚರಣೆ ಅಂಗವಾಗಿ ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳು ಮತ್ತು ಸಂಸ್ಥೆಗಳು ಸಂಪೂರ್ಣವಾಗಿ ಕನ್ನಡದಲ್ಲೇ ಕಡತ ನಿರ್ವಹಣೆ ಮಾಡಬೇಕು. ಆಡಳಿತಕ್ಕೆ ಸಂಬಂಧಿಸಿದ ಎಲ್ಲ ವಿಚಾರಗಳೂ ಕನ್ನಡ ಭಾಷೆಯಲ್ಲಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಬೇಕು ಎಂದು ಮುಖ್ಯ ಕಾರ್ಯ ದರ್ಶಿ ಟಿ.ಎಂ. ವಿಜಯ ಭಾಸ್ಕರ್ ಅವರು ಸುತ್ತೋಲೆ ಹೊರಡಿಸಿದ್ದಾರೆ.

ತಂತ್ರಜ್ಞಾನದಲ್ಲಿ ಕನ್ನಡವನ್ನು ಸಮರ್ಪಕವಾಗಿ ಬಳಸಲು ಕ್ರಮ ಕೈಗೊಳ್ಳಬೇಕು. ವಿವಿಧ ಇಲಾಖೆಗಳು ರೂಪಿಸುವ ನೀತಿಗಳ ಕರಡು ಮತ್ತು ಅಂತಿಮ ಪ್ರತಿಗಳನ್ನು ಕನ್ನಡದಲ್ಲೂ ಪ್ರಕಟಿಸಬೇಕು. ತಂತ್ರಜ್ಞಾನ ಆಧಾರಿತ ಆಡಳಿತದಲ್ಲಿ ಸಾರ್ವಜನಿಕರಿಗೆ ಕನ್ನಡದಲ್ಲೂ ಎಸ್‍ಎಂಎಸ್ ಮತ್ತು ಇಮೇಲ್‍ಗಳನ್ನು ಕಳುಹಿಸಲು ವ್ಯವಸ್ಥೆ ಮಾಡಬೇಕು.

ಖಜಾನೆ, ಮಾನವ ಸಂಪನ್ಮೂಲ ನಿರ್ವಹಣೆ (ಎಚ್‍ಆರ್‍ಎಂಎಸ್), ಟೆಂಡರ್ ತಂತ್ರಾಂಶಗಳು ಮತ್ತು ಸರ್ಕಾರಿ ಆ್ಯಪ್‍ಗಳನ್ನು ಕನ್ನಡದಲ್ಲೂ ಸಿದ್ಧಪಡಿಸಿ, ಬಳಕೆಗೆ ಒದಗಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚನೆ ನೀಡಿದ್ದಾರೆ.

ಹೆದ್ದಾರಿಗಳು ಮತ್ತು ರಸ್ತೆಯ ಮಾರ್ಗಸೂಚಿ ಫಲಕಗಳು, ಮೈಲುಗಲ್ಲುಗಳಲ್ಲಿ ಫಲಕ ಅಳವಡಿಸುವಾಗ ಕನ್ನಡವನ್ನೇ ಪ್ರಧಾನವಾಗಿ ಬಳಸಬೇಕು. ಜಿಲ್ಲೆಯ ಪ್ರಮುಖ ರಸ್ತೆಗಳು, ವೃತ್ತಗಳಿಗೆ ಸಾಹಿತಿಗಳು, ಹಿರಿಯ ಹೋರಾಟಗಾರರ ಹೆಸರು ಇಡಬೇಕು. ಸರ್ಕಾರಿ, ಖಾಸಗಿ ಆಸ್ಪತ್ರೆಗಳು, ನರ್ಸಿಂಗ್ ಹೋಂ ಮತ್ತು ಅರೆವೈದ್ಯಕೀಯ ಸಂಸ್ಥೆಗಳು ಕನ್ನಡವನ್ನು ಬಳಕೆ ಮಾಡಬೇಕು ಎನ್ನಲಾಗಿದೆ.

ದಸರಾ, ಹಂಪಿ ಉತ್ಸವ ಮತ್ತು ಇತರ ಕಾರ್ಯಕ್ರಮಗಳು ಸೇರಿದಂತೆ ಎಲ್ಲಾ ರಸ್ತೆ ಪ್ರದರ್ಶನಗಳಲ್ಲಿ ಸ್ಥಳೀಯ ಕನ್ನಡಿಗ ಕಲಾವಿದರಿಗೆ ಅವಕಾಶ ನೀಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Facebook Comments