ಬಿಹಾರದಲ್ಲಿ ನಿಲ್ಲದ ಎನ್ಸೆಫಾಲಿಟೆಸ್ ಮರಣ ಮೃದಂಗ..! ಹೆಚ್ಚುತ್ತಲೇ ಇದೆ ಸಾವಿನ ಸಂಖ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

ಪಾಟ್ನಾ/ಮುಜಫರ್‍ಪುರ್, ಜೂ. 17- ಮಾರಕ ಎನ್ಸೆಫಾಲಿಟೆಸ್ (ಮಿದುಳು ಜ್ವರ) ಹೆಮ್ಮರಿಯಿಂದ ಬಿಹಾರದ ಮುಜಫರ್‍ಪುರ್ ಸಾವಿನ ಮನೆಯಾಗಿದೆ. ಪ್ರತಿನಿತ್ಯ ಈ ಪಿಡುಗಿಗೆ ಮಕ್ಕಳ ಸಂಖ್ಯೆ ಹೆಚ್ಚುತ್ತಲೇ ಇದೆ.

ಮುಜಫರ್‍ಪುರ್ ಸೇರಿದಂತೆ ವಿವಿಧೆಡೆ ಮಾರಕ ಎನ್ಸೆಫಾಲಿಟೆಸ್ ವೈರಾಣು ಸೋಂಕು ಮತ್ತಷ್ಟು ಉಲ್ಬಣಗೊಂಡಿದ್ದು, ಮೃತ ಮಕ್ಕಳ ಸಂಖ್ಯೆ ಈಗ 94ಕ್ಕೆ ಏರಿದೆ.
ಕಳೆದ 24 ಗಂಟೆಗಳಲ್ಲಿ ಇನ್ನೂ 20 ಮಕ್ಕಳನ್ನು ಈ ಹೆಮ್ಮಾರಿ ಆಪೋಶನ ತೆಗೆದುಕೊಂಡಿದೆ.

400ಕ್ಕೂ ಹೆಚ್ಚು ಮಕ್ಕಳಿಗೆ ಸೋಂಕು ತಗಲಿದ್ದು, ನಗರದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಕ್ಕಳಲ್ಲಿ ವೈರಾಣು ಸೋಂಕು ಹಬ್ಬುತ್ತಿರುವುದರಿಂದ ಪೋಷಕರು ಮತ್ತು ಜನರಲ್ಲಿ ಆತಂಕ ಉಂಟಾಗಿದೆ.

ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ನಿನ್ನೆ ಶ್ರೀ ಕೃಷ್ಣ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಆರೋಗ್ಯ ವಿಚಾರಿಸಿದರು. ಕೇಂದ್ರ ಆರೋಗ್ಯ ಖಾತೆ ಸಹಾಯಕ ಸಚಿವ ಅಶ್ವಿನಿಕುಮಾರ್ ಚೌಬೆ ಮತ್ತು ಬಿಹಾರ ಆರೋಗ್ಯ ಸಚಿವ ಮಂಗಲ ಪಾಂಡೆ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.

ಬಿಹಾರದಲ್ಲಿ ಎನ್ಸೆಫಾಲಿಟೆಸ್ ಮತ್ತು ಹೈಪೊಗ್ಲೆಸೇಮಿಯಾ(ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾಗುವಿಕೆ) ಇವುಗಳಿಂದ ಮಕ್ಕಳು ಸಾವಿಗೀಡಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಕೇಂದ್ರ ಸಚಿವರು ಮಕ್ಕಳ ರಕ್ಷಣೆಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ವೈದ್ಯಕೀಯ ಇಲಾಖೆ ಸೂಚನೆ ನೀಡಿದರು.

ನಂತರ ಕೇಂದ್ರ ಸಚಿವರು ಉನ್ನತ ಮಟ್ಟದ ಸಭೆ ನಡೆಸಿ ಈ ಮಾರಕ ರೋಗ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ರಾಜ್ಯ ಆರೋಗ್ಯ ಇಲಾಖೆಗೆ ನಿರ್ದೇಶಿಸಿದರು.

ಶ್ರೀ ಕೃಷ್ಣ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮತ್ತು ಕೇಜ್ರಿವಾಲ್ ಆಸ್ಪತ್ರೆಯಲ್ಲಿ ಅಕ್ಯೂಟ್ ಎನ್ಸೆಫಾಲಿಟೆಸ್ ಸಿಂಡ್ರೊಮ್ (ಎಇಎಸ್) ಸೋಂಕಿನಿಂದ ಒಟ್ಟು 94 ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಖ್ಯ ಕಾರ್ಯದರ್ಶಿ ಸಂಜಯ್‍ಕುಮಾರ್ ತಿಳಿಸಿದ್ದಾರೆ.
ಮುಜಫರ್‍ಪುರ್ ವೈಶಾಲಿ, ಶೋಹಿಹಾರ, ಪುರ್ವಚಂಪಾರನ್ ಸೇರಿದಂತೆ 12 ಜಿಲ್ಲೆಗಳ 222 ತಾಲೂಕುಗಳಲ್ಲಿ ಈ ಸೋಂಕು ಕಾಣಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin