ಬಿಹಾರದಲ್ಲಿ ಎನ್ಸೆಫಾಲಿಟೆಸ್’ಗೆ ಮೃತ ಮಕ್ಕಳ ಸಂಖ್ಯೆ 134 ಕ್ಕೇರಿಕೆ, ಸಿಎಂಗೆ ಫೋಷಕರ ಹಿಡಿಶಾಪ

ಈ ಸುದ್ದಿಯನ್ನು ಶೇರ್ ಮಾಡಿ

ಪಾಟ್ನಾ/ಮುಜಫರ್‍ಪುರ್, ಜೂ. 18(ಪಿಟಿಐ)- ಮಾರಕ ಎನ್ಸೆಫಾಲಿಟೆಸ್ (ಮಿದುಳು ಜ್ವರ) ಹೆಮ್ಮ್ಮಾರಿಯಿಂದ ಬಿಹಾರದ ಮುಜಫರ್‍ಪುರ್‍ನಲ್ಲಿ ಮಕ್ಕಳ ಸಾವಿನ ಸಂಖ್ಯೆ 134ಕ್ಕೆ ಏರಿದೆ. ಆಸ್ಪತ್ರೆಗಳಿಗೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆ ದಿನೇ ದಿನೇ ಏರುತ್ತಿದ್ದು ತೀವ್ರ ಅಸ್ವಸ್ಥರಾಗಿರುವ ಮಕ್ಕಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ.

ಈ ಮಧ್ಯೆ ಮುಜಫರ್‍ಪುರ ಶ್ರೀ ಕೃಷ್ಣ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿದ ಬಿಹಾರದ ಮುಖ್ಯಮಂತ್ರಿ ನಿತೀಶ್‍ಕುಮಾರ್ ವಿರುದ್ಧ ಫೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಮುತ್ತಿಗೆ ಹಾಕಿದ ಘಟನೆಯೂ ನಡೆದಿದೆ.

ಮಕ್ಕಳ ಆರೋಗ್ಯ ವಿಚಾರಿಸಲು ಎಸ್‍ಕೆಎಮ್‍ಎಚ್ ಆಸ್ಪತ್ರೆಗೆ ಬಂದ ಮುಖ್ಯಮಂತ್ರಿ ಅವರನ್ನು ಫೋಷಕರು ಮತ್ತು ಸಾರ್ವಜನಿಕರು ಸುತ್ತುವರೆದು ಪ್ರಶ್ನೆಗಳ ಸುರಿಮಳೆಗೈದರು. ನಮ್ಮ ಮಕ್ಕಳು ಮಾರಕ ರೋಗದಿಂದ ಸಾವನ್ನಪ್ಪುತ್ತಿದ್ದಾರೆ. ಆದರೂ ಸರ್ಕಾರ ಸೋಂಕು ನಿವಾರಣೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಿತೀಶ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಜನರನ್ನು ನಿಯಂತ್ರಿಸಲು ಫೋಲೀಸರು ಮುಂದಾದಾಗ ಮಾತಿನ ಚಕಮಕಿ ನಡೆದು ಕೆಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಮುಜಫರ್‍ಪುರ್ ಸೇರಿದಂತೆ ವಿವಿಧೆಡೆ ಮಾರಕ ಎನ್ಸೆಫಾಲಿಟೆಸ್ ವೈರಾಣು ಸೋಂಕು ಮತ್ತಷ್ಟು ಉಲ್ಬಣಗೊಂಡಿದ್ದು, ಮೃತ ಮಕ್ಕಳ ಸಂಖ್ಯೆ ಈಗ 134ಕ್ಕೆ ಏರಿದೆ.

600ಕ್ಕೂ ಹೆಚ್ಚು ಮಕ್ಕಳಿಗೆ ಸೋಂಕು ತಗಲಿದ್ದು, ನಗರದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಕ್ಕಳಲ್ಲಿ ವೈರಾಣು ಸೋಂಕು ಹಬ್ಬುತ್ತಿರುವುದರಿಂದ ಫೋಷಕರು ಮತ್ತು ಜನರಲ್ಲಿ ಆತಂಕ ಉಂಟಾಗಿದೆ.

ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ನಿನ್ನೆ ಶ್ರೀ ಕೃಷ್ಣ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಆರೋಗ್ಯ ವಿಚಾರಿಸಿದ್ದರು.

ರಾಜಕೀಯ ಕೆಸರೆರಚಾಟ: ಅತ್ತ ಮಾರಕ ಸೋಂಕಿನಿಂದ ಸಂಖ್ಯೆ ಏರುತ್ತಿದ್ದರೆ. ಇತ್ತ ಈ ಗಂಭೀರ ಸಂಗತಿ ರಾಜಕೀಯ ಪಕ್ಷಗಳ ಕೆಸರೆರಚಾಟಕ್ಕೂ ಕಾರಣವಾಗಿದೆ.  130ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದರೂ ಮುಖ್ಯಮಂತ್ರಿ ನಿತೀಶ್‍ಕುಮಾರ್ ನೇತೃತ್ವದ ಜೆಡಿಯು ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರ್‍ಜೆಡಿ ಆರೋಪಿಸಿದೆ.

ಈ ಆರೋಪಕ್ಕೆ ಪ್ರತ್ಯಾರೋಪ ಮಾಡಿರುವ ಜೆಡಿಯು ನಿಮ್ಮ (ಆರ್‍ಜೆಡಿ )ಸರ್ಕಾರವಿದ್ದಾಗ ಇದೇ ಸೋಂಕಿನಿಂದ 200ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದರು. ಆಗ ನೀವೇ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದೆ.

Facebook Comments