ಎನ್‌ಕೌಂಟರ್‌ನಲ್ಲಿ ಮತ್ತೆ ಮೂವರು ಉಗ್ರರನ್ನು ಹೊಡೆದುರುಳಿಸಿದ ಸೇನೆ

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ, ಜೂ.7- ಕಣಿವೆ ಪ್ರಾಂತ್ಯ ಕಾಶ್ಮೀರದಲ್ಲಿ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರ ಉಪಟಳ ಮುಂದುವರಿದಿದ್ದು, ಅವರನ್ನು ಸದೆಬಡಿಯುವ ಕಾರ್ಯಾಚರಣೆಯನ್ನು ಭಾರತೀಯ ಭದ್ರತಾ ಪಡೆ ಮತ್ತಷ್ಟು ತೀವ್ರಗೊಳಿಸಿದೆ.

ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ನಡೆದ ಎನ್‍ಕೌಂಟರ್‍ನಲ್ಲಿ ಯೋಧರು ಮೂವರು ಉಗ್ರಗಾಮಿಗಳನ್ನು ಹೊಡೆದುರುಳಿಸಿದ್ದಾರೆ.

ಹತರಾದ ಉಗ್ರಗಾಮಿಗಳಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶೋಪಿಯಾನ್ ಜಿಲ್ಲೆಯ ರೆಹಾನ್ ಪ್ರದೇಶದಲ್ಲಿ ಉಗ್ರರು ಅವಿತಿಟ್ಟುಕೊಂಡು ದಾಳಿಗೆ ಸಜ್ಜಾಗುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ನಿನ್ನೆ ಮಧ್ಯರಾತ್ರಿಯಿಂದ ಯೋಧರು ಆ ಪ್ರದೇಶವನ್ನು ಸುತ್ತುವರೆದು ಆತಂಕವಾದಿಗಳಿಗಾಗಿ ತೀವ್ರ ಶೋಧ ನಡೆಸುತ್ತಿದ್ದರು.

ಇಂದು ನಸುಕಿನಲ್ಲಿ ಉಗ್ರರು ಯೋಧರ ಮೇಲೆ ಗುಂಡು ಹಾರಿಸಿದರು. ಆಗ ನಡೆದ ಎನ್‍ಕೌಂಟರ್‍ನಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಹತರಾದ ಭಯೋತ್ಪಾದಕರ ಬಳಿ ಇದ್ದ ಎಕೆ-47, ಎಕೆ-56, ಚೀನಿ ಹ್ಯಾಂಡ್‍ಗ್ರೆನೇಡ್ ಸೇರಿದಂತೆ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಲಾಕ್‍ಡೌನ್ ಜಾರಿಯಾದಾಗಿನಿಂದ ಕಣಿವೆ ಪ್ರಾಂತ್ಯ ಕಾಶ್ಮೀರದಲ್ಲಿ ಉಗ್ರಗಾಮಿಗಳ ಉಪಟಳ ತೀವ್ರಗೊಂಡಿದ್ದು, ಈವರೆಗೆ 60ಕ್ಕೂ ಹೆಚ್ಚು ಉಗ್ರರನ್ನು ಯೋಧರು ಹೊಡೆದುರುಳಿಸಿದ್ದು, 20ಕ್ಕೂ ಹೆಚ್ಚು ಭಯೋತ್ಪಾದಕರನ್ನು ಸೆರೆ ಹಿಡಿದಿದ್ದಾರೆ.

Facebook Comments