ಕಾಂಗ್ರೆಸ್‍ನ ಮತ್ತೊಬ್ಬ ನಾಯಕ ಕೆ.ಜೆ.ಜಾರ್ಜ್‌ಗೆ ಇಡಿ ಕಂಟಕ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.12-ಡಿ.ಕೆ.ಶಿವಕುಮಾರ್ ಅವರ ಬಳಿಕ ಈಗ ಕಾಂಗ್ರೆಸ್‍ನ ಪ್ರಮುಖ ನಾಯಕ ಕೆ.ಜೆ.ಜಾರ್ಜ್ ಅವರಿಗೆ ಇಡಿ ಕಂಟಕ ಕಾಡಲಾರಂಭಿಸಿದೆ. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಅವರು ನೀಡಿದ್ದ ದೂರು ಆಧರಿಸಿ ಜಾರ್ಜ್ ವಿರುದ್ಧ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸುವ ಸೂಚನೆ ನೀಡಿದೆ.

ಕೆ.ಜೆ.ಜಾರ್ಜ್ ಅವರು ಬೇನಾಮಿ ಹೆಸರಿನಲ್ಲಿ ವಿದೇಶದಲ್ಲಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ಆಸ್ಟ್ರೇಲಿಯಾ, ಅಮೆರಿಕಾ ಸೇರಿದಂತೆ ವಿವಿಧ ದೇಶಗಳಲ್ಲಿ ಜಾರ್ಜ್ ಅವರ ಹೂಡಿಕೆ ಇದೆ. ಚುನಾವಣಾ ಆಯೋಗ ಮತ್ತು ಲೋಕಾಯುಕ್ತಕ್ಕೆ ಸಲ್ಲಿಸಿರುವ ಮಾಹಿತಿಯಲ್ಲಿ ತಮ್ಮ ವಿದೇಶಿ ಹೂಡಿಕೆಯನ್ನು ಜಾರ್ಜ್ ಮುಚ್ಚಿಟ್ಟಿದ್ದಾರೆ ಎಂದು ರವಿಕೃಷ್ಣಾರೆಡ್ಡಿ ದೂರಿನಲ್ಲಿ ಆರೋಪಿಸಿರುವುದಲ್ಲದೆ, ಅದಕ್ಕೆ ಅಗತ್ಯವಾದ ದಾಖಲೆಗಳನ್ನೂ ಕೂಡ ಸಲ್ಲಿಸಿದ್ದರು.

ಜಾರ್ಜ್ ವಿರುದ್ಧ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ 1999ರಡಿ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿತ್ತು. ಈ ಬಗ್ಗೆ ಎರಡು ತಿಂಗಳಾದರೂ ಯಾವುದೇ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಮತ್ತೊಮ್ಮೆ ನಿನ್ನೆ ದೂರು ನೀಡಲಾಗಿದೆ.ಇದನ್ನು ಆಧರಿಸಿ ಜಾರಿ ನಿರ್ದೇಶನಾಲಯ ಜಾರ್ಜ್ ಅವರ ವಿಚಾರಣೆಗೆ ಮುಂದಾಗಿದೆ ಎಂದು ಹೇಳಲಾಗಿದೆ. ಒಂದು ವೇಳೆ ಇದು ನಿಜವೇ ಆಗಿದ್ದರೆ, ಕಾಂಗ್ರೆಸ್‍ನ ಮತ್ತೊಬ್ಬ ನಾಯಕನಿಗೆ ಇಡಿ ಕಂಟಕ ಎದುರಾಗುವ ಸಾಧ್ಯತೆಗಳು ನಿಚ್ಚಳವಾಗಿವೆ.

ಈಗಾಗಲೇ ಡಿ.ಕೆ.ಶಿವಕುಮಾರ್ ಅವರನ್ನು ವಿಚಾರಣೆಗೊಳಪಡಿಸಿ ಬಂಧಿಸುವ ಮೂಲಕ ಜಾರಿ ನಿರ್ದೇಶನಾಲಯ ಚರ್ಚೆಗೆ ಗ್ರಾಸವಾಗಿದೆ. ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಕೂಡ ಇಡಿ ಗಾಳಕ್ಕೆ ಸಿಲುಕಿದ್ದಾರೆ.

ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರ ಆಪ್ತರೂ ಆಗಿರುವ ಜಾರ್ಜ್ ಹೈಕಮಾಂಡ್‍ನಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಸೇರಿದಂತೆ ಬಹುತೇಕ ನಾಯಕರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈಗ ಖಾಸಗಿ ದೂರು ಆಧರಿಸಿ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿರುವುದು ಕುತೂಹಲ ಕೆರಳಿಸಿದೆ.

Facebook Comments

Sri Raghav

Admin