ನಿರೀಕ್ಷಣಾ ಜಾಮೀನು ರಹಸ್ಯ ವಿಚಾರಣೆಗೆ ಸಮ್ಮತಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಏ.16- ಅತ್ಯಾಚಾರ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮುಂಬೈ ಮೂಲದ ಪತ್ರಕರ್ತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ರಹಸ್ಯವಾಗಿ ನಡೆಸಲು ದೆಹಲಿ ಹೈಕೋರ್ಟ್ ಸಮ್ಮತಿಸಿದೆ. ನ್ಯಾಯಾಮೂರ್ತಿ ಮುಕ್ತ ಗುಪ್ತ ಅವರು, ಮಧ್ಯಾಹ್ನ 3.30ರ ಸುಮಾರಿನಲ್ಲಿ ವಿಚಾರಣೆ ನಡೆಸಲಾಗುವುದು, ಈ ವಿಚಾರಣೆಗಾಗಿಯೇ ಪ್ರತ್ಯೇಕ ವೆಬ್ ಲಿಂಕ್ ಸೃಷ್ಟಿಸುವುದಾಗಿ ತಿಳಿಸಿದ್ದಾರೆ. ಪತ್ರಕರ್ತರಾದ ವರುಣ್ ಹಿರೇಮಠ್ ವಿರುದ್ಧ 22 ವರ್ಷದ ಯುವತಿ ಕಳೆದ ಫೆಬ್ರವರಿ 20 ರಂದು ಅತ್ಯಾಚಾರದ ಆರೋಪ ಮಾಡಿದ್ದರು.

ದೂರುದಾರಳ ಪರವಾಗಿ ವಾದಿಸಿದ್ದ ವಕೀಲರಾದ ನಿತ್ಯಾ ರಾಮಕೃಷ್ಣನ್ ಅವರು, ಪಂಚತಾರಾ ಹೋಟೆಲ್‍ನಲ್ಲಿ ಯುವತಿ ಮೇಲೆ ಆರೋಪಿ ಅತ್ಯಾಚಾರ ನಡೆಸಿದ್ದಾನೆ ಎಂದು ವಾದಿಸಿದ್ದರು. ಈ ಕುರಿತು ತನಿಖೆ ನಡೆಸುತ್ತಿದ್ದ ಪೊಲೀಸರು ಆರೋಪಿಯನ್ನು ಬಂಧಿಸಲು ಮುಂದಾಗಿದ್ದರು. ಆರೋಪಿ ಸಲ್ಲಿಸಿದ್ದ ನಿರೀಕ್ಷಿಣಾ ಜಾಮೀನು ಅರ್ಜಿಯನ್ನು ಕೆಳ ಹಂತದ ನ್ಯಾಯಾಲಯ ಮಾರ್ಚ್ 12ರಂದು ವಜಾಗೊಳಿಸಿತ್ತು.

ಅತ್ಯಾಚಾರದ ಆರೋಪವನ್ನು ತಳ್ಳಿ ಹಾಕಿದ್ದ ಆರೋಪಿ ಪರ ವಕೀಲ ಕಪಿಲ್ ಸಿಬಾಲ್ ಅವರು, ವಾದಿ ಮತ್ತು ದೂರುದಾರರ ನಡುವೆ ಮೊದಲಿನಿಂದಲೂ ದೈಹಿಕ ಸಂಬಂಧ ಇತ್ತು. ಅತ್ಯಾಚಾರದ ಪ್ರಕರಣ ಅಲ್ಲ ಎಂದು ವಾದಿಸಿದರು. ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು. ನಿರೀಕ್ಷಿಣಾ ಜಾಮೀನಿನ ಅರ್ಜಿ ನಾಲ್ಕು ಗೋಡೆಗಳ ನಡುವೆ ನಡೆಯಬೇಕು ಎಂದು ಮನವಿ ಮಾಡಿದ್ದರು.

ಇದಕ್ಕೆ ಸಮ್ಮತಿಸಿದ ನ್ಯಾಯಾಲಯ ಆರೋಪಿ ತನ್ನ ವಾದಕ್ಕೆ ಪೂರಕವಾಗಿ ಸಲ್ಲಿಸುವ ಪುರಾವೆಗಳನ್ನು ಪರಿಶೀಲಿಸುವಂತೆ ಪೋಲಿಸರಿಗೆ ಸೂಚನೆ ನೀಡಿತ್ತು. ತನಿಖೆಯ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆಯೂ ಸೂಚನೆ ನೀಡಿತ್ತು. ಏಪ್ರಿಲ್ 16ರವರೆಗೂ ಆರೋಪಿಯನ್ನು ಬಂಧಿಸದಂತೆ ನ್ಯಾಯಾಲಯ ಪೊಲೀಸರಿಗೆ ಸೂಚನೆ ನೀಡಿದೆ. ಅದರೆ ಆರೋಪಿ ಪೊಲೀಸರ ತನಿಖೆಗೆ ಸಹಕರಿಸಬೇಕು ಎಂದು ಸೂಚನೆ ನೀಡಿದೆ.

Facebook Comments