ಪೊಲೀಸ್ ಠಾಣೆ ಸೆಲ್‍ನಿಂದ ಖತರ್ನಾಕ್ ಖದೀಮ ಎಸ್ಕೇಪ್

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ನ.27- ಸಾರ್ವಜನಿಕವಾಗಿ ಸಿಕ್ಕಿಬಿದ್ದ ಖತರ್ನಾಕ್ ಖದೀಮ ಠಾಣೆಯ ಸೆಲ್‍ನಿಂದ ತಪ್ಪಿಸಿಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮೂಲತಃ ಉತ್ತರ ಪ್ರದೇಶದ ಮುಜಾಫರ್ ಜಿಲ್ಲೆಯ ಲೋನಿ ತಾಲೂಕಿನ ನಿವಾಸಿ ಶಮು ಎಂಬಾತ ಸೋಮವಾರ ಸಂಜೆ ನಗರದ ಜಾಮಿಯ ಮಸೀದಿ ಹಿಂಭಾಗ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ಸಾರ್ವಜನಿಕರಿಗೆ ಸಂಶಯ ಬಂದು ಹಿಡಿದಿದ್ದಾರೆ.

ಈ ಸಂದರ್ಭದಲ್ಲಿ ಈತನ ಬಳಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಇರುವುದು ಗಮನಿಸಿದ ಸಾರ್ವಜನಿಕರು ತಕ್ಷಣ ತಿಲಕ್ ಪಾರ್ಕ್ ಪೊಲೀಸರಿಗೆ ತಿಳಿಸಿದ್ದಾರೆ. ಠಾಣೆ ಇನ್ಸ್‍ಪೆಕ್ಟರ್ ನವೀನ್, ಮುಖ್ಯಪೇದೆ ಶಾಂತರಾಜು ಸ್ಥಳಕ್ಕೆ ಬಂದು ಖದೀಮನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ಸೆಲ್‍ಗೆ ಹಾಕಿದ್ದರು.

ಈತನ ಭದ್ರತೆ ನೋಡಿಕೊಳ್ಳಲು ಹೆಡ್ ಕಾನ್‍ಸ್ಟೇಬಲ್ ಶಾಂತರಾಜು ಅವರಿಗೆ ವಹಿಸಿದ್ದರು. ಈ ನಡುವೆ ರಾತ್ರಿ ಠಾಣೆಯ ಲಾಕಪ್‍ನಲ್ಲಿಯೇ ಇದ್ದ ಆರೋಪಿ ಕೈಗೆ ಹಾಕಿದ್ದ ಬಳೆಯನ್ನು ಕಳಚಿಟ್ಟು ಠಾಣೆಯಿಂದ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಆರೋಪಿ ಶಮು ಇಪ್ಪತ್ತು ವರ್ಷಗಳಿಂದ ತುಮಕೂರಿನ ರಾಜೀವ್‍ಗಾಂಧಿ ನಗರದಲ್ಲಿ ನೆಲೆಸಿದ್ದು , ನಗರದ ವಿವಿಧೆಡೆ ಕಳ್ಳತನ ನಡೆಸಿರುವ ಈತ ಉತ್ತರ ಪ್ರದೇಶ, ದೆಹಲಿ, ಗುಜರಾತ್, ಆಂಧ್ರಪ್ರದೇಶ ಸೇರಿದಂತೆ ಹಲವು ಕಡೆ ಕಳ್ಳತನ ಹಾಗೂ ದರೋಡೆ ನಡೆಸಿರುವುದು ತಿಳಿದುಬಂದಿದೆ.

ಕಳೆದ 5 ವರ್ಷಗಳ ಹಿಂದೆ ಅಫಘಾನಿಸ್ತಾನದಿಂದ ಸಹಚರರನ್ನು ಕರೆಸಿಕೊಂಡು ದರೋಡೆಗೆ ಸಂಚು ರೂಪಿಸಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದನು. ಚಿನ್ನಾಭರಣ ಸಮೇತ ಸಾರ್ವಜನಿಕವಾಗಿ ಸಿಕ್ಕಿಬಿದ್ದರೂ ಈ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತಾರದಿರುವುದು ಎಸ್‍ಪಿ ಕೋನವಂಶಿಕೃಷ್ಣ ಅವರಿಗೆ ತೀವ್ರ ಮುಜುಗರ ತಂದಿದೆ.

ಈ ಪ್ರಕರಣವನ್ನು ತಕ್ಷಣವೇ ತನಿಖೆ ಮಾಡಿ ವರದಿ ನೀಡುವಂತೆ ಇಲ್ಲಿನ ಡಿವೈಎಸ್‍ಪಿ ತಿಪ್ಪೇಸ್ವಾಮಿ ಅವರಿಗೆ ಎಸ್‍ಪಿ ಸೂಚಿಸಿದ್ದಾರೆಂದು ತಿಳಿದುಬಂದಿದೆ.

Facebook Comments