ಜನಪ್ರಿಯತೆಗಾಗಿ ಹೇಳಿಕೆ ನೀಡುತ್ತಿರುವ ಉದ್ಧವ್ ಠಾಕ್ರೆ : ಈಶ್ವರಪ್ಪ ಕಿಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.28- ತಮ್ಮ ಜನಪ್ರಿಯತೆ ಹೆಚ್ಚಿಸಿಕೊಳ್ಳಬೇಕು ಎಂಬ ದುರುದ್ದೇಶದಿಂದ ಮಹಾರಾಷ್ಟ್ರ ಮುಖ್ಯಮಂತ್ರಿ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಅವರ ಹೇಳಿಕೆಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ. ಎಸ್.ಈಶ್ವರಪ್ಪ ಹೇಳಿದ್ದಾರೆ.  ನಗರದಲ್ಲಿ ಹ.ನೀ.ದೀಪಕ್ ಅವರ ನೇತೃತ್ವದ ಕರುನಾಡು ವಿಜಯಸೇನೆಯ ಕೇಂದ್ರ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಮರಾಠಿಗರು ಕರ್ನಾಟಕ ರಾಜ್ಯದಲ್ಲಿ ವಾಸಿಸುತ್ತಿದ್ದಾರೋ ಆ ಪ್ರದೇಶಗಳೆ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಅಸಂಬದ್ಧ ಹೇಳಿಕೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ನೀಡಿದ್ದಾರೆ.

ಇದೇ ರೀತಿ ಕರ್ನಾಟಕದ ವಿವಿಧ ಭಾಗಗಳ ಜನರು ಮಹರಾಷ್ಟ್ರ ಹಾಗೂ ವಿಶೇಷವಾಗಿ ಮುಂಬೈನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಆ ಪ್ರದೇಶಗಳನ್ನು ಕರ್ನಾಟಕಕ್ಕೆ ಸೇರಿಸಿ ಎಂದು ಕೇಳುವುದು ಸರಿಯಾಗುವುದೇ ಎಂದು ಪ್ರಶ್ನಿಸಿದರು.

ಮಹಾಜನ್ ವರದಿಯೇ ಅಂತಿಮವಾಗಿದ್ದು, ಮರಾಠಿಗರು ಹಾಗೂ ಕನ್ನಡಿಗರು ಮೊದಲಿನಿಂದಲೂ ಸಹೋದರರಂತೆ ಬಾಳುತ್ತಿದ್ದೇವೆ. ಇದು ಮುಂದುವರೆಯಬೇಕು. ರಾಜ್ಯದ ಯುವಕರಲ್ಲಿ ಗಡಿ, ನೀರು ಹಾಗೂ ಭೂಮಿ ವಿಷಯದಲ್ಲಿ ಜಾಗೃತಿ ಮೂಡಿಸಬೇಕಾದ ಅವಶ್ಯಕತೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಕರುನಾಡು ವಿಜಯಸೇನೆ ಸಂಘಟನೆ ಕಾರ್ಯಪ್ರವೃತ್ತರಾಗಲಿ ಎಂದು ಹಾರೈಸಿದರು.

ಕೇಂದ್ರ ಕಚೇರಿಯ ಉದ್ಘಾಟನೆಯನ್ನು ತುಮಕೂರು ಸಿದ್ಧಗಂಗಾ ಕ್ಷೇತ್ರದ ಮಹಾಸ್ವಾಮೀಜಿ ಸಿದ್ಧಗಂಗಾ ಶ್ರೀಗಳು ನೆರವೇರಿಸಿದರು. ಉಪಮುಖ್ಯಂತ್ರಿ ಅಶ್ವಥ್ ನಾರಾಯಣ, ಯುವಘಟಕದ ಅಧ್ಯಕ್ಷ ಮಹೇಶ್ ಆರ್.ಎಸ್., ರಾಜ್ಯ ವಕ್ತಾರ ರಾಮ್ ಪ್ರಸಾದ್, ಸಾಮಾಜಿಕ ಜಾಲತಾಣಗಳ ಅಧ್ಯಕ್ಷ ರೇಣುಕಾ ಪ್ರಸಾದ್, ಬೆಂಗಳೂರು ನಗರ ಅಧ್ಯಕ್ಷ ವಿಜಯ್ ಕುಮಾರ್, ಆಟೋ ಮತ್ತು ಮಹಿಳಾ ಘಟಕದ ಸದಸ್ಯರು ಉಪಸ್ಥಿತರಿದ್ದರು.

Facebook Comments