ಮುಖ್ಯಮಂತ್ರಿಗಳಿಗೆ ಎಲ್ಲಾ ಶ್ರೀಗಳ ಆಶೀರ್ವಾದವಿದೆ : ಈಶ್ವರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

ತುರುವೇಕೆರೆ, ನ.13-ಬಿ.ಎಸ್.ಯಡಿಯೂರಪ್ಪನವರಿಗೆ ರಾಜ್ಯದ ಎಲ್ಲಾ ಮಠ ಮಾನ್ಯಗಳ ಶ್ರೀಗಳ ಆಶೀರ್ವಾದವಿದ್ದು ಮುಖ್ಯಮಂತ್ರಿಯಾಗಿ ಮುಂದುವರಿಯುವುದರಲ್ಲಿ ಯಾವುದೇ ಅನುಮಾನಬೇಡ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಪಟ್ಟಣದ ವಿರಕ್ತ ಮಠದ ಆವರಣದಲ್ಲಿ ಆಯೋಜಿಸಿದ್ದ ಶ್ರೀ ಡಾ.ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿಗಳ 25ನೇ ವರ್ಷದ ಪಟ್ಟಾಭಿಷೇಕದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತ್ಯಾಗಮಯ ಜೀವನದ 25 ಸಾರ್ಥಕ ವರ್ಷಗಳನ್ನು ಪೂರೈಸಿರುವ ಸ್ವಾಮೀಜಿಗಳ ಸಾಧನೆ ವಿಶೇಷವಾದದ್ದು. ಮಠಾಧೀಶರು ಸರ್ವಸ್ವವನ್ನೂ ತ್ಯಜಿಸಿ ತ್ಯಾಗಜೀವನ ನಡೆಸುವುದರೊಂದಿಗೆ ಸನ್ಯಾಸಾಚರಣೆ ದೊಡ್ಡ ಸಾಧನೆಯೇ ಸರಿ ಎಂದರು.

ಅನರ್ಹರು ಮೈತ್ರಿ ಸರ್ಕಾರದಿಂದ ಹೊರ ಬಂದಿದ್ದರಿಂದ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅವರಿಗೆ ಅನ್ಯಾಯ ಮಾಡುವ ಪ್ರಶ್ನೆಯೇ ಇಲ್ಲ ಅವರು ಹೇಳಿದಂತೆ ಬೆಂಬಲ ಕೊಡುತ್ತೇವೆ ಎಂದರು. ದಾರಿ ತಪ್ಪಿದ ಎಂಡಿಎಲ್: ಬಿಜೆಪಿಯಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದ ಎಂ.ಡಿ.ಲಕ್ಷ್ಮೀನಾರಾಯಣ್ ಕಾಂಗ್ರೆಸ್‍ಗೆ ಹೋಗಿ ದಾರಿ ತಪ್ಪಿದ ಮಗನಾದರು. ಮುಂದಿನ ದಿನಗಳಲ್ಲಿ ಮರಳಿ ನಮ್ಮ ಪಕ್ಷಕ್ಕೆ ಬರುತ್ತೀರೆಂದು ಭಾವಿಸಿದ್ದೇನೆಂದು ಸಭೈಯಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಎಂಡಿಎಲ್ ಗೆ ಮಾತಿನ ಛಾಟಿ ಬೀಸಿದರು.

ಶಾಸಕ ಮಸಾಲಜಯರಾಮ್ ಮಾತನಾಡಿ, ಶ್ರೀಗಳ ಹಾಗೂ ಕ್ಷೇತ್ರದ ಜನತೆ ಆಶೀರ್ವಾದದಿಂದ ನಾನಿಂದು ಶಾಸಕನಾಗಿದ್ದೇನೆ. ಮಠ ಮಾನ್ಯಗಳ ಶ್ರೋಯೋಭಿವೃದ್ಧ್ದಿಗಾಗಿ ಕೆಲಸ ಮಾಡುತ್ತೇನೆ, ಸಮಾಜದ ಒಳಿತಿಗಾಗಿ ಕೆಲಸ ಮಾಡುವ ಮಠ ಮಾನ್ಯಗಳಿಗೆ ನನ್ನ ಅಳಿಲು ಸೇವೆ ಸದಾ ಸಿದ್ಧ ಎಂದರು.

ಆಂಧ್ರದ ಶ್ರೀಶೈಲಂ ಮಠದ ಗಿರಿರಾಜ ಸೂರ್ಯ ಸಿಂಹಾಸನಾಧೀಶ್ವರ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪಟ್ಟಾಧಿಕಾರ ವಹಿಸಿಕೊಂಡ ನಂತರ ಮಠವೇ ನನ್ನ ಮನೆ, ಸಮಾಜವೇ ನನ್ನ ಬಂಧುಗಳು ಸರ್ವಜನರ ಹಿತವೇ ಮುಖ್ಯ ಎಂಬುದಾಗಿ ಯಾವ ಮಠದ ಸ್ವಾಮೀಜಿ ಬದುಕುತ್ತಾರೋ ಅವರು ಮಾತ್ರ ಭಕ್ತರಿಂದ ಇಂತಹ ರಜತ ಮಹೋತ್ಸವಗಳನ್ನು ನಿರೀಕ್ಷಿಸಲು ಸಾಧ್ಯ ಎಂದರು.

ಭವ್ಯ ಮೆರವಣಿಗೆ: ಪಟ್ಟಣದ ಗಣಪತಿ ಪೆಂಡಾಲ್‍ನಿಂದ ಪ್ರಮುಖ ಬೀದಿಯಲ್ಲಿ ಜಾನಪದ ಕಲಾ ಪ್ರಕಾರದೊಂದಿಗೆ ಅಡ್ಡಪಲ್ಲಕ್ಕಿ ಉತ್ಸವದ ಮೂಲಕ ಭವ್ಯ ಮೆರವಣಿಗೆಯಲ್ಲಿ ಗಿರಿರಾಜ ಸೂರ್ಯ ಸಿಂಹಾಸನಾಧೀಶ್ವರ ಡಾ:ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರನ್ನು ವೇದಿಕೆಗೆ ಕರತರಲಾಯಿತು.

ಡಾ.ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳಿಗೆ ಸಮಸ್ತ ಭಕ್ತಾದಿಗಳಿಂದ ರಜತ ಕಿರೀಟ ಧಾರಣೆ ಹಾಗೂ ಬೆಳ್ಳಿ ಕವಚ ಬೆತ್ತ ನೀಡಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ಈ ಕಾರ್ಯಕ್ರಮ ಯಶಸ್ವಿಗೆ ಕಾರಣೀಭೂತರಾದ ಸಮಸ್ತ ಭಕ್ತವೃಂದ, ಮಠದ ಭಕ್ತರ ಸಹಕಾರ ಹಾಗೂ ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಮಾಜಿ ಶಾಸಕರಾದ ಎಂ.ಡಿ.ಲಕ್ಷ್ಮೀನಾರಾಯಣ್, ನಂಜಾಮರಿ, ಹಾಗೂ ವಿಧಾನ ಪರಿಷತ್ ಸರ್ಕಾರಿ ಮುಖ್ಯ ಸಚೇತಕ ಮಹಾಂತೇಶ್ ಮ.ಕವಟಗಿಮಠ, ನಿವೃತ್ತ ಐ.ಎ.ಎಸ್.ಅಧಿಕಾರಿ ಡಾ.ಸೋಮಶೇಖರ್, ಮಾತನಾಡಿದರು.

ಶ್ರೀ ಮ.ನಿ.ಪ್ರ. ಶಿವಾನಂದ ಸ್ವಾಮೀಜಿ, ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಶ್ರೀ ಡಾ.ಮು.ನಿ.ಪ್ರ.ಮುಮ್ಮಡಿ ನಿರ್ವಾಣ ಸ್ವಾಮೀಜಿ, ಶ್ರೀ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಬಿ.ಪಿ.ವೀರಭದ್ರಪ್ಪ, ಎಸ್.ಜೆ.ಆರ್.ಕಾಲೇಜು ಚೇರ್ಮನ್ ಡಾ.ವೇದಮೂರ್ತಿ, ಪ್ರೆಸಿಡೆನ್ಸಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಚಿದಾನಂದ್ ಮತ್ತಿತರರು ಉಪಸ್ಥಿತರಿದ್ದರು.

Facebook Comments