ಸಚಿವ ಈಶ್ವರಪ್ಪಗೆ ಸಿಎಂ ವಾರ್ನಿಂಗ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.2- ತಮ್ಮ ವಿರುದ್ಧ ತಿರುಗಿ ಬಿದ್ದಿರುವ ಗ್ರಾಮೀಣಾಭಿವೃದ್ಧಿ ಸಚಿವರ ವಿರುದ್ಧ ಕೆಂಡಮಂಡಲವಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅಗತ್ಯಬಿದ್ದರೆ ಸಚಿವ ಸ್ಥಾನದಿಂದ ಕೈಬಿಡುವುದಾಗಿ ಈಶ್ವರಪ್ಪ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಈ ಮಧ್ಯೆ ಯಡಿಯೂರಪ್ಪ ನಡೆಯಿಂದ ಇನ್ನಷ್ಟು ಆಕ್ರೋಶಗೊಂಡಿರುವ ಸಚಿವ ಕೆ.ಎಸ್. ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ಈ ಬೆಳವಣಿಗೆಯಿಂದ ಆಗಿರುವ ನಷ್ಟವನ್ನು ಸರಿಪಡಿಸುವ ಹಾಗೂ ಸಂಕಷ್ಟದಲ್ಲಿ ತಮ್ಮ ಪರ ನಿಲ್ಲುವಂತೆ ಯಡಿಯೂರಪ್ಪ ತಮ್ಮ ಬೆಂಬಲಿಗರಿಗೆ ಸೂಚಿಸಿದ್ದಾರೆ. ಈಶ್ವರಪ್ಪ ಪತ್ರಕ್ಕೆ ಫುಲ್ ಗರಂ ಆಗಿದ್ದಾರೆ. ಈಗಾಗಲೇ ಕಾಂಗ್ರೆಸ್ನವರು ನಮ್ಮ ಮೇಲೆ ಕತ್ತಿ ಮಸೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯಪಾಲರಿಗೆ ದೂರು ಕೊಟ್ಟಿದ್ದು ಎಷ್ಟು ಸರಿ..? ಅಂತ ಆಪ್ತರ ಬಳಿ ಸಿಡಿಮಿಡಿಗೊಂಡಿದ್ದಾರೆ.

ಯಾರನ್ನೂ ಕೇಳದೇ ರಾಜ್ಯಪಾಲರ ಬಳಿ ಹೋಗಿರುವಾಗ, ನಾನು ಯಾರನ್ನೂ ಕೇಳದೆ ಅವರ ಖಾತೆ ಬದಲಾವಣೆ ಮಾಡ್ತೀನಿ.. ಏನ್ ಆಗ್ಬಿಡುತ್ತೆ ನೋಡ್ತೀನಿ.. ಆಗ ಹೈಕಮಾಂಡ್ ಮುಂದೆ ಹೋಗಿ ಎಂದು ಕೂಗಾಡಿದ್ದಾರೆ. ಆಗ ಆಪ್ತರು ಸಿಎಂ ಅವರನ್ನ ಸಮಾಧಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆಪ್ತ ಶಾಸಕರು ಯಡಿಯೂರಪ್ಪರನ್ನು ಭೇಟಿ ಮಾಡಿ ಈಶ್ವರಪ್ಪ ವಿರುದ್ಧ ಸಹಿ ಸಂಗ್ರಹ ಅಭಿಯಾನ ನಡೆಸಿದ್ದಾರೆ. ಇದುವರೆಗೂ 48 ಶಾಸಕರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ. ಈಶ್ವರಪ್ಪರನ್ನು ಸಂಪುಟದಿಂದ ತೆಗೆಯುವಂತೆ ಹೈಕಮಾಂಡ್‍ಗೆ ಪತ್ರ ಬರೆಯಲು ಸಜ್ಜಾಗಿದ್ದಾರೆ. ಜÁಸ್ತಿ ಮಾತನಾಡಿದರೆ ಸಂಪುಟದಿಂದಲೇ ಕೈ ಬಿಡುತ್ತೇನೆ ಎಂದು ಯಡಿಯೂರಪ್ಪ ಕೂಗಾಡಿದ್ದಾರೆ.

ಈಶ್ವರಪ್ಪ ಅವರ ನಡೆಯಿಂದ ಪ್ರತಿಪಕ್ಷಗಳಿಗೆ ಆಹಾರ ಸಿಕ್ಕಂತಾಗಿದೆ. ಇದು ಸರ್ಕಾರದ ವರ್ಚಸ್ಸಿಗೆ ಧಕ್ಕೆ ತಂದಿದೆ ಎಂದು ಯಡಿಯೂರಪ್ಪ ಆಕ್ರೋಶ ಹೊರಹಾಕಿದ್ದಾರೆ. ನಾವು ಮಂತ್ರಿಗಳಾಗಲು ಯಡಿಯೂರಪ್ಪ ಕಾರಣ ಎಂಬುದರಿಂದ ಹಿಡಿದು, ತಮಗಿರುವ ಅಧಿಕಾರವನ್ನು ಬಳಸಿ ಯಾರ ಖಾತೆಗಾದರೂ ಅವರು ಕೈ ಹಾಕಬಹುದು ಎಂಬಲ್ಲಿಯ ತನಕ ಇವರೆಲ್ಲಾ ಮಾತನಾಡಿದ್ದಾರೆ. ಈ ಬೆಳವಣಿಗೆ ನಂತರ ಈಶ್ವರಪ್ಪ ಅವರು ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಸಜ್ಜಾಗಬೇಕಿದೆ. ಇದಾಗದಿದ್ದರೆ ಯಡಿಯೂರಪ್ಪ ಅವರ ಆಕ್ರೋಶದಿಂದ ಬಚಾವಾಗಲು ವರಿಷ್ಟರ ನೆರವು ಬಯಸಬೇಕಿದೆ.

ಈ ಹಿಂದೆ ಈಶ್ವರಪ್ಪ ಅವರ ಜತೆ, ಜತೆಗೇ ಉಪಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದ ಹಾಲಿ ಕಂದಾಯ ಸಚಿವ ಆರ್.ಅಶೋಕ್ ನಾವು ಮಂತ್ರಿಗಳಾಗಿರುವುದು ಯಡಿಯೂರಪ್ಪ ಅವರ ವಿವೇಚನಾ ಅಧಿಕಾರದಿಂದ ಎಂದು ಈಶ್ವರಪ್ಪ ಅವರನ್ನು ಚುಚ್ಚಿದ್ದಾರೆ. ಯಡಿಯೂರಪ್ಪ ಅವರು ಬಯಸಿದ್ದರಿಂದ ನಾವು ಅವರ ಸಂಪುಟದಲ್ಲಿದ್ದೇವೆ. ಹೀಗಾಗಿ ಈಶ್ವರಪ್ಪ ಅವರು ತಮ್ಮ ಭಾವನೆಯನ್ನು ನಾಲ್ಕು ಗೋಡೆಗಳ ಮಧ್ಯೆ ಬಗೆಹರಿಸಿಕೊಳ್ಳಬೇಕಿತ್ತು ಎಂದಿದ್ದಾರೆ.

ಬಿಜೆಪಿಯ ಒಂದು ಮೂಲಗಳ ಪ್ರಕಾರ, ಅರವತ್ತು ಶಾಸಕರು ಒತ್ತಡ ಹೇರಿದ್ದರಿಂದ ಸಿಎಂ ಇಲಾಖೆಯಲ್ಲಿ ಮಧ್ಯಪ್ರವೇಶಿಸಿದರು. ಈಶ್ವರಪ್ಪನವರು ಶಾಸಕರ ಮನವಿಗೆ ಸ್ಪಂದಿಸಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಅದನ್ನು ಬಿಟ್ಟು, ಸಿಎಂ ವಿರುದ್ದ ದೂರು ನೀಡುವುದು ಎಷ್ಟು ಸರಿ ಎನ್ನುವ ಮಾತೂ ಕೇಳಿಬರುತ್ತಿದೆ.

Facebook Comments