ಸಿಎಂ ಸ್ಥಾನ ಅಲ್ಲ ಕಾಂಗ್ರೆಸ್ ಗೆ ವಿಪಕ್ಷ ಸ್ಥಾನವೂ ಸಿಗಲ್ಲ : ಈಶ್ವರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಜು.9- ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷದ ಸ್ಥಾನಕ್ಕೂ ಅರ್ಹವಾಗುವುದಿಲ್ಲ. ಇನ್ನು ಸಿಎಂ ಸ್ಥಾನ ಕನಸಿನ ಮಾತು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‍ನಲ್ಲಿ ಐದು ಮಂದಿ ಮುಖ್ಯಮಂತ್ರಿಗಳಾಗುತ್ತೇವೆಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ಅವರು ಪಂಚ ಕೌರವರಿದ್ದಂತೆ ಎಂದು ಟೀಕಿಸಿದರು.

ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ತನ್ವೀರ್‍ಸೇಠ್, ಪರಮೇಶ್ವರ್ ಹಾಗೂ ಎಂ.ಬಿ. ಪಾಟೀಲ್ ಮುಖ್ಯಮಂತ್ರಿಯಾಗುವುದಾಗಿ ಸ್ವಯಂ ಘೋಷಿಸಿಕೊಂಡಿದ್ದಾರೆ. ನಾವು ಬಿಜೆಪಿಯವರು ಪಾಂಡವರಿದ್ದಂತೆ, ಒಬ್ಬ ನಾಯಕನನ್ನು ಆರಿಸಿಕೊಂಡು ರಾಜ್ಯದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಹೇಳಿದರು.

ಕಾಂಗ್ರೆಸ್‍ನಲ್ಲಿ ಗೊಂದಲವಿದೆ. ಇದಕ್ಕೆ ಉದಾಹರಣೆ ಪಕ್ಷ ಬಿಟ್ಟು ಹೋದ 17 ಮಂದಿಯನ್ನು ಮತ್ತೆ ಸೇರಿಸಿಕೊಳ್ಳುವುದಿಲ್ಲ ಎಂದು ಹೇಳುತ್ತಾರೆ. ಡಿ.ಕೆ.ಶಿವಕುಮಾರ್ ಅಪ್ಲಿಕೇಶನ್ ಹಾಕಿಕೊಳ್ಳಲಿ ನೋಡೋಣ ಎನ್ನುತ್ತಾರೆ. ಇದು ಮುಳುಗುತ್ತಿರುವ ಪಕ್ಷ. ಇಂತಹ ಪಕ್ಷಕ್ಕೆ ಯಾರು ಅರ್ಜಿ ಹಾಕಿಕೊಂಡು ಹೋಗುತ್ತಾರೆ ಎಂದು ಟೀಕಾಪ್ರಹಾರ ನಡೆಸಿದರು.

ಕೋವಿಡ್ ಲಸಿಕೆ ಸಂದರ್ಭದಲ್ಲಿ ಕಾಂಗ್ರೆಸ್‍ನವರು ಇದು ಮೋದಿ ಲಸಿಕೆ ಯಾರೂ ಹಾಕಿಸಿಕೊಳ್ಳಬೇಡಿ ಎಂದು ಅಪಪ್ರಚಾರ ಮಾಡಿದ್ದರು. ಈಗ ಲಸಿಕೆಗಾಗಿ ಅವರುಗಳೇ ಕ್ಯೂ ನಿಲ್ಲುತ್ತಿದ್ದಾರೆ. ಲಸಿಕೆ ಲಭ್ಯ ಇಲ್ಲ ಎಂದು ಹೇಳುತ್ತಿದ್ದಾರೆ. ಅಪಪ್ರಚಾರ ಮಾಡಿಲ್ಲವೆಂದು ಚಾಮುಂಡೇಶ್ವರಿ ದೇವಿ ಮೇಲೆ ಪ್ರಮಾಣ ಮಾಡಿ ಕಾಂಗ್ರೆನವರು ಹೇಳಲಿ ಎಂದು ಈಶ್ವರಪ್ಪ ಸವಾಲು ಹಾಕಿದರು.

ಪ್ರಧಾನಿ ಮೋದಿ ಅವರು ಸರ್ವಜನಾಂಗದವರಿಗೂ ಸಂತೃಪ್ತಿಯಾಗುವಂತಹ ನೂತನ ಕ್ಯಾಬಿನೆಟ್ ಮಾಡಿದ್ದಾರೆ. ಕಾಂಗ್ರೆಸ್‍ನವರು ಇದನ್ನು ಟೀಕೆ ಮಾಡುತ್ತಿದ್ದಾರೆ. ಇವರು ಪ್ರತಿಯೊಂದನ್ನು ಹೀಗೆ ಟೀಕೆ ಮಾಡುತ್ತಾ ಹೋದರೆ ಜನರೇ ಬುದ್ದಿ ಕಲಿಸುತ್ತಾರೆ. ಒಳ್ಳೆಯದನ್ನು ಮಾಡಿದಾಗ ಸ್ವಾಗತಿಸಬೇಕು . ಲೋಪ ಇದ್ದಾಗ ಟೀಕಿಸಿದರೆ ನಾವು ತಿದ್ದಿಕೊಳ್ಳುತ್ತೇವೆ. ಅದನ್ನು ಬಿಟ್ಟು ಪ್ರಚಾರಕ್ಕಾಗಿ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು.

ಕಾಂಗ್ರೆಸ್ ತನ್ನ ಅವಧಿಯಲ್ಲಿ ರಾಜ್ಯಕ್ಕೆ ಆರು ಮಂದಿ ಸಚಿವರನ್ನು ಕೊಟ್ಟಿತ್ತಾ ಎಂಬುದನ್ನು ತಿಳಿದುಕೊಳ್ಳಲಿ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.

Facebook Comments