ಈ ಜನ್ಮದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಈಶ್ವರಪ್ಪ ಭವಿಷ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.1-ಕಾಂಗ್ರೆಸ್‍ನಲ್ಲಿ ಜಾತಿಗೊಬ್ಬರಂತೆ ಐವರು ಮುಖ್ಯಮಂತ್ರಿಗಳನ್ನು ಘೋಷಣೆ ಮಾಡಿಕೊಂಡಿದ್ದರೂ ಈ ಜನ್ಮದಲ್ಲಿ ಆ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಮುಖ್ಯಮಂತ್ರಿ ಸ್ಥಾನ ಕನಸಾಗಿಯೇ ಉಳಿಯಲಿದೆ ಎಂದು ಸಚಿವ ಈಶ್ವರಪ್ಪ ಟೀಕಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಯುತ್ತಿರುವ ಕಾಂಗ್ರೆಸನ್ನು ಉಳಿಸಲಾಗುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ.

ಕುರುಬ ಸಮುದಾಯದಿಂದ ಮಾಜಿ ಸಿಎಂ ಸಿದ್ದರಾಮಯ್ಯ , ಒಕ್ಕಲಿಗ ಸಮುದಾಯದಿಂದ ಡಿ.ಕೆ.ಶಿವಕುಮಾರ್ ಪರಿಶಿಷ್ಟ ಜಾತಿ ಸಮುದಾಯದಿಂದ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಲಿಂಗಾಯತ ಸಮುದಾಯದಿಂದ ಎಂ.ಬಿ.ಪಾಟೀಲ್, ಮುಸ್ಲಿಂ ಸಮುದಾಯದಿಂದ ಮಾಜಿ ಸಚಿವ ತನ್ವೀರ್ ಸೇಠ್ ಅವರನ್ನು ಘೋಷಣೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಈ ಮಟ್ಟಕ್ಕೆ ಇಳಿಯಬಾರದಿತ್ತು ಎಂದರು.

ಬಿಜೆಪಿಯಲ್ಲಿ ಕೆಲವರು ಹೇಳಿಕೆ ನೀಡುವುದು ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿರುವುದು ನಿಜ. ಅದನ್ನು ನೆಪ ಮಾಡಿಕೊಂಡು ಬಿಜೆಪಿ ಸರ್ಕಾರ ಬಿದ್ದು ಹೋಗುತ್ತದೆ. ಚುನಾವಣೆ ಬರುತ್ತದೆ ಎಂದು ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿಯಾಗುವವರ ಹೆಸರನ್ನು ಮುನ್ನಲೆಗೆ ತಂದರು. ಸಾಮಾಜಿಕ ನ್ಯಾಯ ಹೇಳುವ ಕಾಂಗ್ರೆಸ್ ಜಾತಿಗೊಂದು ಮುಖ್ಯಮಂತ್ರಿ ಹೆಸರನ್ನು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಲಿ ದೇಶದಲ್ಲಿ ಎಲ್ಲಿದೆ ಎಂದು ಕಾಂಗ್ರೆಸ್‍ನ್ನು ಹುಡುಕುವ ಪರಿಸ್ಥಿತಿ ಇದೆ. ಆದರೂ ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿಯಾಗಲು ಬಡಿದಾಟ ನಡೆಯುತ್ತಿದೆ , ಯುವ ಕಾಂಗ್ರೆಸ್‍ನಲ್ಲೂ ಬಡಿದಾಟ ನಡೆದಿದೆ. ಡಿ.ಕೆ.ಶಿವಕುಮಾರ್ ಅವರ ಕಾಲನ್ನು ಎಳೆಯಲಾಗುತ್ತಿದೆ ಎಂದು ಟೀಕಾ ಪ್ರಹಾರ ಮಾಡಿದರು.

ಬಿಜೆಪಿಯ ರಾಷ್ಟ್ರೀಯ ನಾಯಕರಾದ ಅರುಣ್ ಸಿಂಗ್ ಅವರು ರಾಜ್ಯಕ್ಕೆ ಬಂದು ಅಭಿಪ್ರಾಯಪಡೆದಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಕೇಂದ್ರ ನಾಯಕರ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಮನಸಿನ ಭಾವನೆ ಹೇಳಿದ್ದಾರೆ. ಬಿಜೆಪಿಯಲ್ಲಿ ಹೇಳುವವರು , ಕೇಳುವವರು ಇದ್ದಾರೆ. ಇಬ್ಬರು, ಮೂವರು ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಅಂತಹವರ ವಿರುದ್ಧ ಕ್ರಮಕ್ಕೆ ಕೋರ್ ಕಮಿಟಿಯಲ್ಲಿ ಚರ್ಚೆಯಾಗಿದೆ.

ಬಿಜೆಪಿಯಲ್ಲಿ ಯಾವ ಕಾರ್ಯಕರ್ತರಿಗೆ ಯಾವ ಸ್ಥಾನ , ಯಾವ ಸಂದರ್ಭದಲ್ಲಿ ನೀಡಬೇಕೆಂಬುದನ್ನು ಕೇಂದ್ರದ ನಾಯಕರು ಹೇಳುತ್ತಾರೆ ಎಂದು ಈಶ್ವರಪ್ಪ ಮುಖ್ಯಮಂತ್ರಿಯಾಗಲು ಸಮರ್ಥರಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದರು.

# ಗ್ರಾಪಂನ ಗುತ್ತಿಗೆ ನೌಕರರಿಗೂ ಕೋವಿಡ್ ಪರಿಹಾರ

ಬೆಂಗಳೂರು, ಜು.1- ಗ್ರಾಮ ಪಂಚಾಯ್ತಿ ಮಟ್ಟದ ಗುತ್ತಿಗೆ ನೌಕರರನ್ನು ಖಾಯಂ ಮಾಡುವುದಿಲ್ಲ. ಒಂದು ವೇಳೆ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದರೆ ಅವರ ಕುಟುಂಬದವರಿಗೆ 30 ಲಕ್ಷ ರೂ. ಪರಿಹಾರ ನೀಡುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಇಂದಿಲ್ಲಿ ತಿಳಿಸಿದರು.

ವಿಧಾನಸೌಧದಲ್ಲಿಂದು ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯಕ್ರಮದಲ್ಲಿ ಯೋಜನೆಗಳಲ್ಲಿ ಸಾಧಿಸಿರುವ ಪ್ರಗತಿ, ಸ್ವಚ್ಛ ಭಾರತ್ ಅಭಿಯಾನಕ್ಕೆ ಸಂಬಂಧಿಸಿದ ಕರ್ನಾಟಕ ರಾಜ್ಯ ಗ್ರಾಮೀಣ ನೈರ್ಮಲ್ಯ ನೀತಿ , ಕಾರ್ಯತಂತ್ರ ಮಾದರಿಗಳ ಉಪ ವಿಧಿಗಳು ಮತ್ತು ಸ್ವಚ್ಛ ಸಂಕೀರ್ಣ ಸ್ವಚ್ಛತೆಯ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದರು.

ಖಾಯಂ ಆಗಿರುವ, ಆಗದಿರುವ ನೌಕರರಿಗೂ ಈ ಪರಿಹಾರ ಸಿಗಲಿದ್ದು , 186 ಮೃತ ಪ್ರಕರಣಗಳು ವರದಿಯಾಗಿವೆ. ಬಳ್ಳಾರಿ ಜಿಲ್ಲೆ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಗ್ರಾಮ ಪಂಚಾಯತ್ , ಗ್ರಾಮ ಮಟ್ಟದ ಕಾರ್ಯಪಡೆಯಲ್ಲದೆ 50 ಮನೆಗಳಿಗೆ ಒಂದು ಸಮಿತಿ ರಚನೆ ಮಾಡಿದ್ದನ್ನು ಕೇಂದ್ರ ಸರ್ಕಾರ ಅಭಿನಂದಿಸಿದೆ. ಜಲಜೀವನ್ ಮಿಷನ್‍ನಡಿ ಶುದ್ಧ ಕುಡಿಯುವ ನೀರಿನ 7 ಬೃಹತ್ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ನರೇಗಾದಡಿ 13 ಕೋಟಿ ಮಾನವ ದಿನಗಳನ್ನು ಸೃಜನೆ ಮಾಡಲಾಗಿದ್ದು , ಈಗಾಗಲೇ 4.40 ಕೋಟಿ ಮಾನವ ದಿನಗಳನ್ನು ಸೃಜಿಸಲಾಗಿದೆ. 9, 10,000 ಕಾಮಗಾರಿಗಳು ಪ್ರಾರಂಭವಾಗಿವೆ. ಜಲಜೀವನ್ ಮಿಷನ್‍ನಡಿಯಲ್ಲಿ ಪ್ರತಿಯೊಂದು ಮನೆಗೂ ನಳ ಸಂಪರ್ಕ ನೀಡಲಾಗುತ್ತಿದೆ. ಪ್ರತಿ ದಿನ ತಲಾ 55 ಲೀಟರ್ ನೀರು ಪೂರೈಸಲಾಗುತ್ತಿದೆ. ಕೆಲವೆಡೆ ಪೈಪ್‍ಲೈನ್ ಹಾಕಲಾಗಿದ್ದರೂ ಕೆಲವು ಮನೆಗಳಿಗೆ ನಳದ ಸಂಪರ್ಕ ವಿರಲಿಲ್ಲ. ಈ ಕಾಮಗಾರಿ ಮುಂದುವರೆಯಲಿದೆ ಎಂದರು.

ನಳದ ನೀರಿನ ಸಂಪರ್ಕಕ್ಕೆ ಯಾವುದೇ ದರವನ್ನು ನಿಗದಿ ಮಾಡಿಲ್ಲ. ಆದರೆ ಗ್ರಾಮ ಪಂಚಾಯ್ತಿಗಳೇ ನೀರಿನ ದರ ನಿಗದಿ ಮಾಡಲಿದೆ. ಪ್ರತಿ ತಿಂಗಳಿಗೆ 100 ರೂ. ನಿಗದಿಯಾಗಿದ್ದರೂ ಕೆಲವೆಡೆ ಆ ದರವನ್ನು ನೀಡಲಾಗುತ್ತಿಲ್ಲ ಎಂದು ಹೇಳಿದರು.

ಗ್ರಾಮೀಣ ಭಾಗದಲ್ಲಿ ಘನ ತ್ಯಾಜ್ಯ ನಿರ್ವಹಣೆಗೆ ಒತ್ತು ಕೊಟ್ಟಿದ್ದು , ಜಾಗೃತಿ ಮೂಡಿಸುವ ಕೆಲಸವೂ ಆಗುತ್ತಿದೆ. 1800 ಗ್ರಾಮ ಪಂಚಾಯ್ತಿಗಳಲ್ಲಿ ಘನ ತ್ಯಾಜ್ಯ ನಿರ್ವಹಣೆ ಕೆಲಸ ಮುಗಿಯುತ್ತಿದ್ದು , ಕೆಲವೆಡೆ ತ್ಯಾಜ್ಯ ವಿಲೇವಾರಿಗೆ ಸ್ಥಳ ಸಿಗುತ್ತಿಲ್ಲ. 22 ಲಕ್ಷ ನರೇಗಾ ಕೂಲಿ ಕಾರ್ಮಿಕರಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕೋವಿಡ್ ಲಸಿಕೆ ನೀಡ ಲಾಗಿದೆ. ಜಾಬ್‍ಕಾರ್ಡ್ ಹೊಂದಿರುವ ಖಾತೆಗಳಿಗೆ ನೇರವಾಗಿ ನರೇಗಾ ಕಾಮಗಾರಿಯ ಹಣ ಸಂದಾಯವಾಗಲಿದೆ ಎಂದು ವಿವರಿಸಿದರು.

Facebook Comments