ಕಾಂಗ್ರೆಸ್ ವಿಪ್ಗೆ ಬೆಲೆ ಇಲ್ಲ : ಈಶ್ವರಪ್ಪ ಟೀಕೆ
ಬೆಂಗಳೂರು,ಫೆ.7- ಕಾಂಗ್ರೆಸ್ ಪಕ್ಷ ತನ್ನ ಶಾಸಕರಿಗೆ ನೀಡಿದ ವಿಪ್ಗೆ ಬೆಲೆ ಇಲ್ಲದಂತಾಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ನಮ್ಮ ಮುಖ್ಯಮಂತ್ರಿ ಅಲ್ಲ ಎಂದಿದ್ದಾರೆ. ಕಾಂಗ್ರೆಸ್ ನೀಡಿದ ವಿ ಪ್ಗೂ ಬೆಲೆ ನೀಡಿಲ್ಲ.
ಅಧಿವೇಶನಕ್ಕೆ ಬಾರದಿದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದರು. ನಿನ್ನೆ ನಡೆದ ಅಧಿವೇಶನಕ್ಕೆ ಸುಮಾರು 10ಕ್ಕೂ ಹೆಚ್ಚು ಶಾಸಕರು ಬಂದಿಲ್ಲ. ಏನು ಕ್ರಮ ಕೈಗೊಳ್ಳುತ್ತಾರೆ ಎಂದು ಪ್ರಶ್ನಿಸಿದರು.
ಕೆಲವು ಶಾಸಕರು ಈಗಾಗಲೇ ವಿಪ್ ಉಲ್ಲಂಘನೆ ಮಾಡಿದ್ದಾರೆ. ಸರ್ಕಾರದ ಮೇಲೆ ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ವಿಶ್ವಾಸವಿಲ್ಲದಂತಾಗಿದೆ. ಕಾಂಗ್ರೆಸ್ ಶಾಸಕರೊಬ್ಬರು ಕಳೆದ 7 ತಿಂಗಳಲ್ಲಿ ಏನೂ ಕೆಲಸವಿಲ್ಲ ಎಂದು ಆರೋಪಿಸಿದ್ದರು ಎಂದು ಹೇಳಿದರು.
ದಾಖಲೆ ಇದ್ದರೆ ಬಿಡುಗಡೆ ಮಾಡಲಿ : ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯಿಂದ ಹಣದ ಆಮಿಷವೊಡ್ಡಲಾಗಿದೆ ಎಂಬ ಬಗ್ಗೆ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ಮಾಜಿ ಸಚಿವ ಸಿ.ಟಿ.ರವಿ ಸವಾಲು ಹಾಕಿದರು.
ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯಿಂದ ಕೋಟಿ ರೂ.ಗಳ ಆಫರ್ ನೀಡಲಾಗಿದೆ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಯಾವುದೇ ಆಪರೇಷನ್ ಮಾಡಿಲ್ಲ.
ವಿನಾಕಾರಣ ನಮ್ಮ ಮೇಲೆ ಆರೋಪ ಮಾಡುವುದು ಬೇಡ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಬಹುಮತವಿಲ್ಲ. ರಾಜ್ಯಪಾಲರನ್ನು ಭೇಟಿಯಾಗುವ ಬಗ್ಗೆ ನಮ್ಮ ನಾಯಕರಾದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ತೀರ್ಮಾನ ಮಾಡುತ್ತಾರೆ.
ಸಿದ್ದರಾಮಯ್ಯನವರು ಸತ್ಯಕ್ಕೆ ದೂರವಾದ ಆರೋಪವನ್ನು ಮಾಡುವುದು ಸರಿಯಲ್ಲ ಎಂದರು. ಅವರೊಬ್ಬ ವಕೀಲರಾಗಿ ಈ ರೀತಿ ಆರೋಪಿಸಿರುವುದು ಸಮಂಜಸವಲ್ಲ ಎಂದು ಟೀಕಿಸಿದರು .