BIG MEWS : ಯಾವುದೇ ಕ್ಷಣದಲ್ಲಿ ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.1- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಸ್ಥಾನಕ್ಕೆ ಯಾವುದೇ ಸಂದರ್ಭದಲ್ಲೂ ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದ್ದು, ಈ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪದಚ್ಯುತಿಗೆ ಪಕ್ಷದ ವಲಯದಲ್ಲೇ ವೇದಿಕೆ ಸಿದ್ದವಾಗುತ್ತಿದೆ. ಯಾವುದೇ ಕ್ಷಣದಲ್ಲಿ ಈಶ್ವರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಲಕ್ಷಣಗಳು ಗೋಚರಿಸುತ್ತಿವೆ. ಜೊತೆಗೆ ಇನ್ನು ಇಬ್ಬರು ಹಿರಿಯ ಸಚಿವರು ಕೂಡ ಅದೇ ತಂತ್ರವನ್ನು ಅನುಸರಿಸಲಿದ್ದು, ಪರೋಕ್ಷವಾಗಿ ಬಿಎಸ್‍ವೈ ಹಠಾವೋ, ಬಿಜೆಪಿ ಬಚಾವೊ ಅಭಿಯಾನಕ್ಕೆ ಕಮಲ ಪಡೆ ಚಾಲನೆ ಕೊಟ್ಟಿದೆ.

ತಮ್ಮ ಇಲಾಖೆಯಲ್ಲಿ ಸಿಎಂ ಹಸ್ತಕ್ಷೇಪ ಮಾಡಿದ್ದಾರೆ ಎಂಬುದು ಕೇವಲ ಒಂದು ಕುಂಟು ನೆಪವಷ್ಟೇ. ಮೇ 2ರಂದು ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿ ಹಾಗೂ ರಾಜ್ಯದ ಬೆಳಗಾವಿ ಲೋಕಸಭಾ ಕ್ಷೇತ್ರ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈ ಫಲಿತಾಂಶದಲ್ಲಿ ಕೊಂಚ ಏರುಪೇರಾದರೂ ಬಿಎಸ್‍ವೈ ಅವರ ಕುರ್ಚಿಗೆ ಕಂಟಕವಾಗುವ ಸಾಧ್ಯತೆಯಿದೆ. ಹಾಗೊಂದು ವೇಳೆ ಬಿಜೆಪಿ ಗೆದ್ದರೆ ಬಿಎಸ್‍ವೈ ಅವರ ಕುರ್ಚಿ ಭದ್ರವಾಗಲಿದೆ.

ಇದನ್ನು ಮನಗಂಡಿರುವ ಯಡಿಯೂರಪ್ಪನವರ ವಿರೋಧಿ ಬಣ, ಈಶ್ವರಪ್ಪ ಹಾಗೂ ಸಂಘ ಪರಿವಾರಕ್ಕೆ ನಿಷ್ಠರಾಗಿರುವ ಇಬ್ಬರು ಸಚಿವರಿಂದ ರಾಜೀನಾಮೆ ಕೊಡಿಸಿ ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸಲು ಪಕ್ಷದಲ್ಲಿ ವೇದಿಕೆಯನ್ನು ಸಿದ್ದಪಡಿಸಲಾಗುತ್ತಿದೆ. ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು, ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧ ನಿರಂತರ ಪ್ರಹಾರ ಮಾಡುತ್ತಾ ಬಂದರೂ ಹೈಕಮಾಂಡ್ ಯಾವುದೇ ಕ್ರಮ ಕೈಗೊಂಡಿಲ್ಲ. ನೆಪಮಾತ್ರಕ್ಕೆ ಹೈಕಮಾಂಡ್ ನಾಯಕರು ಹೇಳಿಕೆಗಳನ್ನು ನೀಡಿ ಸುಮ್ಮನಾಗಿದ್ದಾರೆ.

ಮೇ ತಿಂಗಳಲ್ಲಿ ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಬಸವನಗೌಡ ಪಾಟೀಲ್ ಯತ್ನಾಳ್ ನೇರವಾಗಿಯೇ ಹೇಳಿದ್ದರು. ಈಗ ಈಶ್ವರಪ್ಪ ಮುಖ್ಯಮಂತ್ರಿ ವಿರುದ್ಧವೇ ರಾಜ್ಯಪಾಲರು ಹಾಗೂ ಹೈಕಮಾಂಡ್‍ಗೆ ದೂರು ನೀಡಿದ್ದಾರೆ. ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ನಿನ್ನೆ ದೂರು ನೀಡಿರುವುದು ಸಾಕಷ್ಟು ಸಂಚಲನ ಉಂಟು ಮಾಡಿದೆ.

ಮೂರು ಕ್ಷೇತ್ರಗಳ ಉಪಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ತಮ್ಮ ಪಕ್ಷದ ಮಾಜಿ ಸಚಿವರ ಮೇಲೆ ಬಂದಿರುವ ಗಂಭೀರ ಆರೋಪ ಒಂದೆಡೆಯಾದರೆ, ಈಶ್ವರಪ್ಪ ಮುಖ್ಯಮಂತ್ರಿಗಳ ಮೇಲೆ ಆರೋಪ ಮತ್ತೊಂದೆಡೆ. ಅಲ್ಲದೆ ನ್ಯಾಯಾಲಯದಿಂದ ಹಲವು ಪ್ರಕರಣಗಳ ಬಗ್ಗೆ ಮುಖ್ಯಮಂತ್ರಿಗಳ ವಿರುದ್ಧ ತನಿಖೆಗೆ ಆದೇಶ ನೀಡಿರುವುದು ಕೂಡ ಸಾಕಷ್ಟು ಮುಜುಗರಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಹೀಗಾಗಿ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಬರುವುದಕ್ಕೆ ಮುನ್ನವೇ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಿಗೊಳಿಸಲು ಹೈಕಮಾಂಡ್, ಸಂಘಪರಿವಾರ, ಬಿಎಸ್‍ವೈ ವಿರೋಧಿ ಬಣ ವ್ಯವಸ್ಥಿತ ಜಾಲ ಹೆಣೆದಿದೆ ಎಂದು ಹೇಳಲಾಗುತ್ತಿದೆ. ಆದರೆ ಇದಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದ ಯಡಿಯೂರಪ್ಪ ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಚುನಾವಣೆಗಳತ್ತ ಗಮನಹರಿಸಿದ್ದಾರೆ.

ಮೂರು ಕ್ಷೇತ್ರಗಳ ಚುನಾವಣೆಯಲ್ಲಿ ಗೆದ್ದು ಮತ್ತೆ ತಮ್ಮ ಸಾಮಥ್ರ್ಯವನ್ನು ಸಾಬೀತುಪಡಿಸಲು ಮುಂದಾಗಿದ್ದಾರೆ. ಈಶ್ವರಪ್ಪನವರು ರಾಜ್ಯ ಉಸ್ತುವಾರಿಯಾಗಿರುವ ಅರುಣ್ ಸಿಂಗ್ ಅವರಿಗೆ ತಮ್ಮ ವಿರುದ್ಧ ದೂರು ನೀಡಿದ್ದಾರೆ ಎಂಬ ಆರೋಪಕ್ಕೆ ತಣ್ಣಗೆ ಪ್ರತಿಕ್ರಿಯಿಸಿರುವ ಬಿಎಸ್‍ವೈ, ನಾನು ಅವರೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

17 ಶಾಸಕರನ್ನು ಬಿಜೆಪಿಗೆ ಕರೆತಂದು ಸರ್ಕಾರ ರಚನೆ ಮಾಡಿದ ಯಡಿಯೂರಪ್ಪನವರಿಗೆ ಆರಂಭದಿಂದಲೂ ಅಡಚಣೆಯಾಗುತ್ತಲೇ ಬಂದಿದೆ. ಇತ್ತೀಚೆಗೆ ಸಾಕಷ್ಟು ಮುಜುಗರದ ಘಟನೆಗಳು ನಡೆದಿವೆ. ಮುಂದಿನ ವಿಧಾನಸಭೆ ಚುನಾವಣೆಗೆ ಹೋಗಬೇಕಾದರೆ ನಾಯಕತ್ವ ಬದಲಾವಣೆ ಮಾಡಬೇಕೆಂಬುದು ಬಿಎಸ್‍ವೈ ವಿರೋಧಿ ಬಣ ಹಾಗೂ ಸಂಘ ಪರಿವಾರದ ಹಲವರ ಅಭಿಪ್ರಾಯವಾಗಿದೆ. ಏಕಾಏಕಿ ನಾಯಕತ್ವ ಬದಲಾವಣೆ ಮಾಡಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಅದಕ್ಕಾಗಿ ತಕ್ಕ ವೇದಿಕೆಯನ್ನು ಸಿದ್ದ ಮಾಡಲಾಗುತ್ತಿದೆ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

Facebook Comments