ಈಶ್ವರಪ್ಪ- ಯಡಿಯೂರಪ್ಪ ಫೈಟ್ : ವರಿಷ್ಠರು ಮಧ್ಯ ಪ್ರವೇಶಕ್ಕೆ ಶಾಸಕರ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.2- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವ ಕೆ.ಎಸ್.ಈಶ್ವರಪ್ಪ ನಡುವಿನ ಹಾದಿಬೀದಿ ರಂಪಾಟದಿಂದ ಸರ್ಕಾರ ಮತ್ತು ಪಕ್ಷಕ್ಕೆ ಭಾರೀ ಹಾನಿಯಾಗುವ ಸಾಧ್ಯತೆ ಇದ್ದು, ತಕ್ಷಣವೇ ವರಿಷ್ಠರು ಮಧ್ಯ ಪ್ರವೇಶಿಸಬೇಕೆಂದು ನಿಷ್ಠ ಶಾಸಕರ ಬಣ ಒತ್ತಾಯ ಮಾಡಿದೆ.  ಈಗಾಗಲೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಿಂದಾಗಿ ಪಕ್ಷಕ್ಕೆ ಸಾಕಷ್ಟು ಮುಳುವಾಗಿದೆ. ಇದರ ನಡುವೆಯೇ ಯಡಿಯೂರಪ್ಪ ಹಾಗೂ ಈಶ್ವರಪ್ಪ ನಡುವಿನ ಕಿತ್ತಾಟದಿಂದ ಉಪ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಮಧ್ಯ ಪ್ರವೇಶಕ್ಕೆ ಸಂಘ ಪರಿವಾರದ ನಿಷ್ಠ ಶಾಸಕರು ಒತ್ತಾಯ ಮಾಡಿದ್ದಾರೆ.

ಈಗಾಗಲೇ ರಾಜ್ಯ ಉಸ್ತುವಾರಿ ಅರುಣ್‍ಸಿಂಗ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಿಗೆ ಪತ್ರ ಬರೆದಿರುವ ಶಾಸಕರು, ಕೂಡಲೇ ಈ ಸಮಸ್ಯೆ ಬಗೆಹರಿಸದಿದ್ದರೆ ಇದು ಇನ್ನಷ್ಟು ಬೆಳೆಯುವ ಸಾಧ್ಯತೆ ಇದ್ದು, ಪಕ್ಷಕ್ಕೆ ಹೆಚ್ಚಿನ ಹಾನಿಯಾಗುವ ಆತಂಕ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪ ಹಾಗೂ ಈಶ್ವರಪ್ಪ ಅವರಿಂದ ಸುರಕ್ಷಿತ ಅಂತರ ಕಾಪಾಡಿಕೊಂಡಿರುವ ನಿಷ್ಠ ಶಾಸಕರು ಅರುಣ್‍ಸಿಂಗ್ ಹಾಗೂ ಸಂತೋಷ್ ಅವರಿಗೆ ಗೌಪ್ಯ ಪತ್ರ ಬರೆದಿದ್ದು, ಮಧ್ಯ ಪ್ರವೇಶ ಮಾಡಬೇಕಾದ ಅಗತ್ಯತೆಯನ್ನು ಪ್ರತಿಪಾದಿಸಿದ್ದಾರೆ.

ಸಾಧ್ಯವಾದರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನೂ ಭೇಟಿಯಾಗಿ ರಾಜ್ಯದ ಪ್ರಸಕ್ತ ಸಾಲಿನ ರಾಜಕೀಯ ವಿದ್ಯಮಾನಗಳನ್ನು ಮನವರಿಕೆ ಮಾಡಲು ಮುಂದಾಗಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಒಬ್ಬೊಬ್ಬರು ಒಂದೊಂದು ನಿರ್ಧಾರ ಕೈಗೊಳ್ಳುತ್ತಿದ್ದು, ಯಾರನ್ನಾದರೂ ಸರಿಪಡಿಸಿ, ಒಟ್ಟಿನಲ್ಲಿ ಪಾರ್ಟಿ ಉಳಿಸಿ.ಸುಗಮ ಆಡಳಿತಕ್ಕೆ ಅನುವು ಮಾಡಿಕೊಡಿ ಎಂದು ಹೈಕಮಾಂಡ್‍ಗೆ ಪತ್ರ ಬರೆದು ದೂರು ನೀಡಲು ಬಿಜೆಪಿ ನಿಷ್ಠರು ಪ್ಲಾನ್ ಮಾಡಿದ್ದಾರೆ.

ಉಪ ಚುನಾವಣೆಯ ಸಂದರ್ಭದಲ್ಲಿ ಈ ಒಳಜಗಳ ಪಕ್ಷ ಹಾಗೂ ಸರ್ಕಾರಕ್ಕೆ ತೀವ್ರ ಮುಜುಗರ ತರುತ್ತಿದೆ. ಜನರಿಗೆ ಸರ್ಕಾರದ ಮೇಲೆ ವಿಶ್ವಾಸ ಇಲ್ಲದಾಂತಗುತ್ತದೆ. ಮೊದಲೇ ಯತ್ನಾಳ್ ಹೇಳಿಕೆಗಳು ಮುಜುಗರ ತರುತ್ತಿವೆ. ಹಿರಿಯರಾದ ಈಶ್ವರಪ್ಪ ರಾಜ್ಯಪಾಲರಿಗೆ ದೂರು ನೀಡುವ ಅಗತ್ಯ ಇರಲಿಲ್ಲ. ಇದರಿಂದ ಪಕ್ಷ, ಸರ್ಕಾರದ ಗೌರವ, ಘನತೆಗೆ ಹಾನಿಯಾಗುತ್ತಿದೆ. ಪಕ್ಷದ ವೇದಿಕೆಯಲ್ಲೇ ಈಶ್ವರಪ್ಪ ಚರ್ಚೆ ನಡೆಸಬಹುದಿತ್ತು. ಉಪಚುನಾವಣೆ ನಡೆಯುವ ಸಂದರ್ಭದಲ್ಲಿ ಇದೆಲ್ಲ ಹಿನ್ನೆಡೆಯಾಗಬಹುದು. ಹೀಗಾಗಿ ಕೂಡಲೇ ಮಧ್ಯಪ್ರವೇಶಿಸಿ ಭಿನ್ನಾಭಿಪ್ರಾಯವನ್ನು ಇತ್ಯರ್ಥ ಮಾಡಬೇಕು ಎಂದು ಮನವಿ ಮಾಡಲು ಮುಂದಾಗಿದ್ದಾರೆ.

ಈಶ್ವರಪ್ಪ ಇದ್ದಕ್ಕಿದ್ದಂತೆಯೇ ಯಡಿಯೂರಪ್ಪನವರ ವಿರುದ್ದ ರೆಬೆಲ್ ಆಗುವುದು ಇದೇನು ಹೊಸದಲ್ಲ. ಈ ಹಿಂದೆ, ಹಲವು ಬಾರಿ ಈ ರೀತಿಯ ವಿದ್ಯಮಾನಗಳು ನಡೆದಿದ್ದವು. ರಾಯಣ್ಣ ಬ್ರಿಗೇಡ್ ಕಟ್ಟಿದ್ದು, ಮೊನ್ನೆಮೊನ್ನೆ ಮೀಸಲಾತಿ ಹೋರಾಟದ ನೇತೃತ್ವ ವಹಿಸಿದ್ದು ಇತ್ಯಾದಿ. ಆದರೆ, ತಮ್ಮದೇ ಪಕ್ಷದ ಮುಖ್ಯಮಂತ್ರಿ ವಿರುದ್ದ ಸಂಪುಟದ ಸದಸ್ಯರೊಬ್ಬರು ರಾಜ್ಯಪಾಲರಿಗೆ ದೂರು ನೀಡಿರುವುದು ಗಂಭೀರ ವಿಚಾರವೇ ಸರಿ. ಇಲಾಖೆಯಲ್ಲಿ ಸಿಎಂ ಹಸ್ತಕ್ಷೇಪ ಮತ್ತು ಅನುದಾನದ ವಿಚಾರವೇ ಈಶ್ವರಪ್ಪನವರು ದೂರು ನೀಡಲು ಕಾರಣವೇ ಅಥವಾ ಬೇರೆ ಏನಾದರೂ ಕಾರಣವಿದೆಯೇ ಎಂದು ಅವಲೋಕಿಸಿದಾಗ, ವಿಚಾರ ಇನ್ನೊಂದು ಮಗ್ಗಲಿಗೂ ಉರುಳುತ್ತದೆ.

ಆದರೆ, ಮುಖ್ಯಮಂತ್ರಿಗಳು ಇದಕ್ಕೆ ಇದುವರೆಗೆ ಪ್ರತಿಕ್ರಿಯೆ ನೀಡಲಿಲ್ಲ. ರಾಜ್ಯಪಾಲರಿಗೆ ದೂರು ನೀಡಿದ ಪ್ರತಿಯನ್ನು ಪ್ರಧಾನಿ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರಿಗೂ ಈಶ್ವರಪ್ಪ ಕಳುಹಿಸಿz್ದÁರೆ. ಆ ಮೂಲಕ, ಪಕ್ಷದೊಳಗೆ ಇನ್ನೊಂದು ಸುತ್ತಿನ ಬಿಕ್ಕಟ್ಟಿಗೆ ಇದು ನಾಂದಿ ಹಾಡಿದಂತಾಗಿದೆ. ಏಕಾಏಕಿ ಈಶ್ವರಪ್ಪನವರು ಸಿಎಂ ವಿರುದ್ದ ದೂರು ನೀಡಲು ಕಾರಣವೇನು ಎಂದಾಗ, ಇತ್ತೀಚೆಗೆ ಹಲವು ಶಾಸಕರು ಯಡಿಯೂರಪ್ಪನವರನ್ನು ಭೇಟಿಯಾಗಿದ್ದು. ಸುಮಾರು ಅರವತ್ತು ಶಾಸಕರು ಬಿಎಸ್‍ವೈ ಭೇಟಿಯಾಗಿ ಅವರ ವಿರುದ್ದ ಮತ್ತು ಗ್ರಾಮೀಣಾಭಿವೃದ್ದಿ, ಪಂಚಾಯತ್ ರಾಜ್ ಇಲಾಖೆಯ ಕಾರ್ಯವೈಖರಿ ಬಗ್ಗೆ ದೂರು ನೀಡಿದ್ದರು.

ಸಿಎಂ ಬಿಎಸ್‍ವೈ ಭೇಟಿಯಾಗಿದ್ದ ಅರವತ್ತು ಶಾಸಕರು, ನಮ್ಮ ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ. ನಮ್ಮ ಮಾತಿಗೆ ಮನ್ನಣೆ ಸಿಗುತ್ತಿಲ್ಲ. ಕ್ಷೇತ್ರದಲ್ಲಿ ನಮಗೆ ಇದು ಸಮಸ್ಯೆಯಾಗುತ್ತಿದೆ. ನೀವೆ ನೇರವಾಗಿ ಮಧ್ಯಪ್ರವೇಶಿಸಿ ಅನುದಾನ ಬಿಡುಗಡೆ ಮಾಡಬೇಕು ಎಂದು ಶಾಸಕರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು. ಈ ಬೆಳವಣಿಗೆ ನಡೆದ ಮರುದಿನವೇ ಈಶ್ವರಪ್ಪ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಬಿಎಸ್‍ವೈ ವಿರುದ್ದ ಪತ್ರ ಬರೆದಿದ್ದರು ಎಂದು ಹೇಳಲಾಗುತ್ತಿದೆ.

ಪತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಈಶ್ವರಪ್ಪ, ನಮ್ಮ ಇಲಾಖೆ ವಿಷಯಗಳನ್ನ ರಾಜ್ಯಪಾಲರ ಬಳಿ ಮಾತನಾಡಿಕೊಂಡು ಬಂದಿದ್ದೇನೆ ಅಷ್ಟೇ ಅದರಲ್ಲೇನೂ ವಿಶೇಷತೆ ಇಲ್ಲ. ಇಲಾಖೆ ವಿಷಯಗಳನ್ನ ಚರ್ಚೆ ಮಾಡುವುದಕ್ಕೆ ಅವಕಾಶವಿತ್ತು ಭೇಟಿ ಮಾಡಿಕೊಂಡು ಬಂದಿದ್ದೇನೆ ಎಂದು ಹೇಳಿದ್ದರು.

ಅಸಮಾಧಾನ ಎಂಬ ಪ್ರಶ್ನೆಯೇ ಇಲ್ಲ. ಇಲಾಖೆ ಸಂಬಂಧ ವಿಷಯಗಳನ್ನು ಮಾತನಾಡಲು ರಾಜ್ಯಪಾಲರಷ್ಟೇ ಅಲ್ಲ ದೆಹಲಿಗೂ ಹೋಗುತ್ತೇನೆ. ದೆಹಲಿಯಲ್ಲಿ ನಮ್ಮ ಪಕ್ಷದ ನಾಯಕರ ಬಳಿ, ಕೇಂದ್ರ ಮಂತ್ರಿಗಳು, ಇಲಾಖೆ ಅಧಿಕಾರಿಗಳ ಜೊತೆ, ಇಲಾಖಾ ಅಭಿವೃದ್ಧಿ ಕುರಿತಂತೆ ಅನೇಕ ಚರ್ಚೆಗಳನ್ನು ಮಾಡಬೇಕಾಗುತ್ತೆ ಎಂದು ತಿಳಿಸಿದ್ದರು.

Facebook Comments