ಈಶ್ವರಿ ಸಂಸ್ಥೆಗೆ 50ರ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ಚಂದನವನದಲ್ಲಿ ಪ್ರಸಿದ್ಧಿ ಪಡೆದಂತಹ ಕೆಲವೇ ಕೆಲವು ಸಂಸ್ಥೆಗಳಲ್ಲಿ ಈಶ್ವರಿ ಸಂಸ್ಥೆಯು ಕೂಡ ಒಂದು. 1970ರಲ್ಲಿ ಆರಂಭಗೊಂಡ ಈ ಸಂಸ್ಥೆಗೆ ಈಗ 50ನೆ ವರ್ಷದ ಸಂಭ್ರಮಾಚರಣೆಯಲ್ಲಿದೆ.

ಆಗಿನ ಕಾಲಕ್ಕೆ ಚಿತ್ರ ನಿರ್ಮಾಣ, ವಿತರಣೆ ಮಾಡುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಇಂತಹ ಸಂದರ್ಭದಲ್ಲಿ ತಮ್ಮದೇ ಒಂದು ಭದ್ರ ನೆಲೆಯನ್ನು ಕಟ್ಟಿದಂತಹ ವ್ಯಕ್ತಿ ನಾಗಪ್ಪ ವೀರಸ್ವಾಮಿ.

ಕನ್ನಡದ ಹೆಮ್ಮೆಯ ನಟರುಗಳಾದ ಡಾ.ರಾಜ್‍ಕುಮಾರ್, ಡಾ.ವಿಷ್ಣುವರ್ಧನ್, ಡಾ.ಅಂಬರೀಷ್ ಸೇರಿದಂತೆ ಹಲವರು ನಾಯಕ ಹಾಗೂ ನಾಯಕಿಯರ ಚಿತ್ರವನ್ನು ನಿರ್ಮಿಸಿದಂತಹ ಹೆಗ್ಗಳಿಕೆ ಈಶ್ವರಿ ಸಂಸ್ಥೆಗೆ ಸಲ್ಲುತ್ತದೆ.

1971ರಲ್ಲಿ ಡಾ.ರಾಜ್‍ಕುಮಾರ್ ಅಭಿನಯದ ಕುಲಗೌರವ ಚಿತ್ರದ ಮೂಲಕ ಈಶ್ವರಿ ಸಂಸ್ಥೆ ತನ್ನ ಮೊದಲ ಹೆಜ್ಜೆಯನ್ನು ಇಟ್ಟಿತು. ತದನಂತರ ಹಲವಾರು ಯಶಸ್ವೀ ಚಿತ್ರಗಳಾದ ನಾಗರಹಾವು, ಭೂತಯ್ಯನಮಗಅಯ್ಯು, ಚಕ್ರವ್ಯೂಹ, ನಾರದ ವಿಜಯ, ಪ್ರಳಯಾಂತಕ ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ಮಿಸಿದ ಖ್ಯಾತಿ ಈ ಸಂಸ್ಥೆಗೆ ಸಲ್ಲುತ್ತದೆ.

ತದನಂತರ ವೀರಸ್ವಾಮಿ ಅವರ ಸುಪುತ್ರ ಕ್ರೇಜಿಸ್ಟಾರ್ ರವಿಚಂದ್ರನ್ ಆಗಮಿಸಿ ಈಶ್ವರೀ ಸಂಸ್ಥೆಗೆ ಹೊಸದೊಂದು ರೂಪವನ್ನೇ ತೆರೆದಿಟ್ಟರು. ನಟರಾಗಿ, ನಿರ್ದೇಶಕರಾಗಿ ಪ್ರೇಮಲೋಕ ಚಿತ್ರದ ಮೂಲಕ ಇಡೀ ಭಾರತೀಯ ಚಿತ್ರರಂಗವೇ ಒಮ್ಮೆ ತಿರುಗಿ ನೋಡುವಂತೆ ಮಾಡಿದ ಕೀರ್ತಿ ಈಶ್ವರೀ ಸಂಸ್ಥೆಗೆ ಸಲ್ಲುತ್ತದೆ.

ಸಾಲು ಸಾಲಾಗಿ ರಾಮಾಚಾರಿ, ಹಳ್ಳಿಮೇಷ್ಟ್ರು, ಗೋಪಿಕೃಷ್ಣ ಸೇರಿದಂತೆ ಹಲವಾರು ಯಶಸ್ವೀ ಚಿತ್ರಗಳನ್ನು ನೀಡಿದ ಖ್ಯಾತಿ ಈಶ್ವರಿ ಸಂಸ್ಥೆಗೆ ಸೇರುತ್ತದೆ. ಇದಲ್ಲದೆ ಹಲವಾರು ನಟ, ನಟಿಯರನ್ನು ಕೂಡ ಈಶ್ವರೀ ಸಂಸ್ಥೆ ಬೆಳ್ಳಿಪರದೆಗೆ ಪರಿಚಯಿಸಿದೆ ಜೊತೆಗೆ ತಾಂತ್ರಿಕ ವರ್ಗವನ್ನು ಕೂಡ ತನ್ನ ಜೊತೆಯಲ್ಲಿಟ್ಟುಕೊಂಡು ಬೆಳ್ಳಿಪರದೆಯ ಮೇಲೆ ಹೊಸ ಆಯಾಮವನ್ನು ಕಟ್ಟಿಕೊಟ್ಟಿದೆ.

ತಂದೆ ವೀರಸ್ವಾಮಿ ಹುಟ್ಟುಹಾಕಿದ ಈಶ್ವರಿ ಸಂಸ್ಥೆಯನ್ನು ಈಗಲೂ ಮುನ್ನಡೆಸಿಕೊಂಡು ಬರುತ್ತಿರುವ ಕ್ರೇಜಿಸ್ಟಾರ್ ರವಿಚಂದ್ರನ್‍ಗೆ ಅವರ ಪುತ್ರರಾದ ಮನುರಂಜನ್, ವಿಕ್ರಮ್ ಕೂಡ ಸಾಥ್ ನೀಡಿದ್ದಾರೆ.

ಈ ಸಂಸ್ಥೆಯಲ್ಲಿ ಈಗಾಗಲೇ ಹಲವಾರು ಚಿತ್ರಗಳು ಸಿದ್ಧವಾಗಿದ್ದು ಮತ್ತಷ್ಟು ಹೊಸ ಕಥೆಗಳೊಂದಿಗೆ ಈಶ್ವರಿ ಸಂಸ್ಥೆಯನ್ನು ಮುನ್ನಡೆಸುವ ಹಾದಿಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಪುತ್ರರು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಅತಿ ಶೀಘ್ರದಲ್ಲಿ ಈ 50ರ ಸಂಭ್ರಮಾಚರಣೆಯಲ್ಲಿರುವ ಈಶ್ವರಿ ಸಂಸ್ಥೆಯ ಬಗ್ಗೆ ಒಂದು ಬೃಹತ್ ಆದ ಕಾರ್ಯಕ್ರಮ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Facebook Comments

Sri Raghav

Admin