ವೆಂಟಿಲೇಟರ್ ಕೊರತೆ, ಬೆಂಗಳೂರಿನ ಜನತೆಗೆ ಹೆಚ್ಚಿದ ಆತಂಕ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.17- ಬೆಂಗಳೂರು ಮಹಾನಗರದಲ್ಲಿ ಕೊರೊನಾ ರಣಕೇಕೆ ಹಾಕುತ್ತಿದ್ದು, ಸಾವಿನ ಸಂಖ್ಯೆಏರಿಕೆಯಾಗಿ, ಸೋಂಕಿತರ ಸಂಖ್ಯೆ ಕೂಡ ನಿರೀಕ್ಷೆ ಮೀರಿ ಹೆಚ್ಚಾಗುತ್ತಿದೆ. ಚಿಕಿತ್ಸೆಗಾಗಿ ತುರ್ತು ನಿಗಾಘಟಕಗಳ ಕೊರತೆ ಎದುರಾಗಿರುವುದರಿಂದ ಆತಂಕದ ಕಾರ್ಮೋಡ ಕವಿದಿದೆ.

ಕೊರೊನಾಗೆ ಮತ್ತೆ ಮೂರು ಮಂದಿ ಬಲಿಯಾಗಿದ್ದಾರೆ. ಮಂಗಮ್ಮನಪಾಳ್ಯದ 65 ವರ್ಷದ ವ್ಯಕ್ತಿ ಮತ್ತು ಬೆಂಗಳೂರಿನಲ್ಲಿ 39 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಮಹಿಳೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಿಕ್ಟೋರಿಯಾ ಆಸ್ಪತ್ರೆಗೆ ಕಳೆದ 12ರಂದು ದಾಖಲಿಸಲಾಗಿತ್ತು.

ನಿನ್ನೆ ರಾತ್ರಿ 9.30ರ ಸುಮಾರಿನಲ್ಲಿ ಆಕೆ ಮೃತಪಟ್ಟಿದ್ದಾರೆ. ಬಾಪೂಜಿನಗರದ ನಿವಾಸಿಯೊಬ್ಬರು ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ. ಜಯನಗರ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ರಾಜಾಜಿನಗರದ ಇಎಸ್‍ಐ ಆಸ್ಪತ್ರೆಗೆ ಕರೆತರಲಾಗಿತ್ತು. ಇಎಸ್‍ಐ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿದ ವೇಳೆ ಸೋಂಕು ಇರುವುದು ಪತ್ತೆಯಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಮಂಗಮ್ಮನಪಾಳ್ಯದ ನಿವಾಸಿ 65 ವರ್ಷದ ವ್ಯಕ್ತಿ ನಿನ್ನೆ ಸಂಜೆ 4 ಗಂಟೆಗೆ ಸಾವನ್ನಪ್ಪಿದ್ದಾರೆ. ಇವರಿಗೂ ಕೊರೊನಾ ಸೋಂಕಿರುವುದು ಪರೀಕ್ಷೆಯಲ್ಲಿ ಖಚಿತವಾಗಿದೆ. ಸಾವಿನ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ನಡುವೆ ತುರ್ತು ನಿಗಾಘಟಕದ ಬೇಡಿಕೆ ತೀವ್ರಗೊಂಡಿದೆ. ಐಸಿಯುನಲ್ಲಿ ಸೋಮವಾರದ ವೇಳೆಗೆ 56 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಮಂಗಳವಾರ ಮತ್ತೆ 16 ಮಂದಿಗೆ ಐಸಿಯು ಘಟಕಕ್ಕೆ ಸ್ಥಳಾಂತರಿಸುವ ಅನಿವಾರ್ಯತೆ ಎದುರಾಯಿತು.

ಕೆಲವರು ಚಿಕಿತ್ಸೆ ಪಡೆದು ಗುಣಮುಖರಾದರೆ, ಮತ್ತೆ ಕೆಲವರು ಇಹಲೋಕ ತ್ಯಜಿಸಿದ್ದಾರೆ. ಪ್ರಸ್ತುತ 35 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 65 ವರ್ಷ ಮೇಲ್ಪಟ್ಟವರು ಐಸಿಯುಗೆ ದಾಖಲಾದರೆ ಗಂಭೀರ ಪರಿಸ್ಥಿತಿ ಎದುರಾಗುತ್ತಿದ್ದು, ಅವರನ್ನು ಉಳಿಸಿಕೊಳ್ಳಲು ಯುದ್ಧೋಪಾದಿಯಲ್ಲಿ ವೈದ್ಯಕೀಯ ಸಿಬ್ಬಂದಿ ಸಂಘರ್ಷ ಮಾಡಬೇಕಿದೆ.

ಬೆಂಗಳೂರಿನಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಅದರಲ್ಲೂ ವಯಸ್ಸಾದವರಿಗೆ ಹೆಚ್ಚಿನ ಅಪಾಯ ತಂದೊಡ್ಡುತ್ತಿರುವುದರಿಂದ ತುರ್ತು ನಿಗಾಘಟಕಗಳ ಬೇಡಿಕೆ ಹೆಚ್ಚಾಗಿದೆ.

ನಗರದಲ್ಲಿ ಈವರೆಗೂ 2126 ಮಂದಿ ಕ್ವಾರಂಟೈನ್‍ಲ್ಲಿದ್ದಾರೆ. ಅವರಲ್ಲಿ 869 ಮಂದಿ ಕೊರೊನಾ ಸೋಂಕಿತರ ಜತೆ ಸಂಪರ್ಕ ಹೊಂದಿದವರು. 1257 ಮಂದಿ ಸೆಕೆಂಡರಿ ಕಾನ್‍ಟ್ಯಾಕ್ಟ್ ಹೊಂದಿದವರಾಗಿದ್ದಾರೆ.

ಇಷ್ಟೂ ಮಂದಿಯ ಕಫ ಮಾದರಿ ಸಂಗ್ರಹಿಸಲಾಗಿದ್ದು, ಪರೀಕ್ಷೆಗಾಗಿ ಪ್ರಯೋಗಾಲಯಕ್ಕಾಗಿ ಕಳುಹಿಸಲಾಗಿದೆ. ಇದರ ಫಲಿತಾಂಶ ಬಂದಾಗ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕ ಇದೆ.

Facebook Comments