ಬೆಂಗಳೂರಿನ ಇಎಸ್ಐ ಆಸ್ಪತ್ರೆಯಲ್ಲಿ ಮರಣ ಪ್ರಮಾಣ ಹೆಚ್ಚಳ, ಪರಿಶೀಲನೆಗೆ ಸಮಿತಿ ರಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ. 8 : ರಾಜಾಜಿನಗರದ ಇ.ಎಸ್. ಐ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳ ಮರಣ ಪ್ರಮಾಣ ಹೆಚ್ಚಳವಾಗಿದ್ದು, ಇದಕ್ಕೆ ಕಾರಣ ತಿಳಿಯಲು ಸಮಿತಿ ರಚಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸೂಚನೆ ನೀಡಿದ್ದಾರೆ.

ಶನಿವಾರ ಸಚಿವ ಡಾ.ಕೆ.ಸುಧಾಕರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಕೊರೊನಾ ರೋಗಿಗಳಿಗೆ ದೊರೆಯುತ್ತಿರುವ ಚಿಕಿತ್ಸೆ, ಇತರೆ ಸೌಲಭ್ಯಗಳನ್ನು ಪರಿಶೀಲಿಸಿದರು.

ಆಸ್ಪತ್ರೆಯಲ್ಲಿ ಈವರೆಗೆ 421 ಕೊರೊನಾ ರೋಗಿಗಳು ದಾಖಲಾಗಿದ್ದಾರೆ. ಈವರೆಗೆ 54 ಕೊರೊನಾ ರೋಗಿಗಳು ಮೃತಪಟ್ಟಿದ್ದು, ಮರಣ ಪ್ರಮಾಣ ಶೇ.12.8 ರಷ್ಟಿದೆ ಎಂದು ವೈದ್ಯಾಧಿಕಾರಿಗಳು ಸಚಿವರಿಗೆ ವಿವರಿಸಿದರು. ಈ ರೀತಿ ಮರಣ ಹೆಚ್ಚಳವಾಗಲು ಕಾರಣ ಪತ್ತೆ ಮಾಡಬೇಕು. ಇದಕ್ಕಾಗಿ ಸಮಿತಿಯೊಂದನ್ನು ರಚಿಸಬೇಕು ಎಂದು ಸಚಿವ ಡಾ.ಕೆ.ಸುಧಾಕರ್ ಸೂಚಿಸಿದರು.

ಕ್ಯಾನ್ಸರ್ ಇರುವ ರೋಗಿಗಳು ಹೆಚ್ಚಾಗಿ ದಾಖಲಾಗುತ್ತಿದ್ದಾರೆ. ಇನ್ನೂ ಹಲವು ರೋಗಿಗಳು ತಡವಾಗಿ ಬಂದು ದಾಖಲಾಗಿದ್ದಾರೆ. ಹೀಗಾಗಿ ಮರಣ ಪ್ರಮಾಣ ಹೆಚ್ಚಿದೆ. ಮರಣಕ್ಕೆ ಸಂಬಂಧಿಸಿದಂತೆ ಆಡಿಟ್ ವರದಿ ರೂಪಿಸಲು ಆದೇಶಿಸಲಾಗಿದೆ. ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ವೈದ್ಯಾಧಿಕಾರಿಗಳು ಹೇಳಿದರು.

ಇದೇ ವೇಳೆ ಸಚಿವ ಡಾ.ಕೆ.ಸುಧಾಕರ್ ಅವರು ವೀಡಿಯೋ ಮೂಲಕ ರೋಗಿಗಳೊಂದಿಗೆ ಮಾತುಕತೆ ನಡೆಸಿ ಕ್ಷೇಮ ವಿಚಾರಿಸಿದರು.

ನಂತರ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, “ಇಎಸ್ ಐ ಆಸ್ಪತ್ರೆಯಲ್ಲಿ 494 ಹಾಸಿಗೆಗಳಿದ್ದು, ಸುಮಾರು 150 ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿಡಲಾಗಿದೆ. ಇಬ್ಬರು ರೋಗಿಗಳ ಸ್ಥಿತಿ ಗಂಭೀರವಾಗಿದೆ. 10 ರೋಗಿಗಳು ಐಸಿಯುನಲ್ಲಿದ್ದು, ಈಗ ಚೇತರಿಸಿಕೊಂಡಿದ್ದಾರೆ.

ಈ ಆಸ್ಪತ್ರೆಯಲ್ಲಿ ಮನೆಯ ಆರೈಕೆ ದೊರೆಯುತ್ತಿದೆ ಎಂದು ಅವರು ಶ್ಲಾಘಿಸಿದ್ದಾರೆ. ಪಿಜಿ ವಿದ್ಯಾರ್ಥಿಗಳು ಮತ್ತು ವೈದ್ಯರು ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ರೀತಿ ಮತ್ತಷ್ಟು ಆಸ್ಪತ್ರೆಗಳಿಗೆ ಭೇಟಿ ನೀಡಿ ರೋಗಿಗಳಲ್ಲಿ ವಿಶ್ವಾಸ ಮೂಡಿಸಬೇಕಿದೆ’’ ಎಂದರು.

# ಇತರೆ ಅಂಶಗಳು
ಕೊರೊನಾ ಸೋಂಕಿತರಾಗಿದ್ದ 42 ಗರ್ಭಿಣಿಯರಿಗೆ ಇಎಸ್ ಐ ನಲ್ಲಿ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದೆ. ಆಸ್ಪತ್ರೆಯಲ್ಲಿ ಆರ್ ಟಿಪಿಸಿಆರ್ ಲ್ಯಾಬ್ ನಿರ್ಮಿಸಿದ್ದು, ಮುಂದಿನ ವಾರದಿಂದ ಕಾರ್ಯಾರಂಭಿಸಲಿದೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.

ಕೋವಿಡ್ ಆರೈಕೆ ಕೇಂದ್ರಗಳಲ್ಲಿ 1,500 ಹಾಸಿಗೆಗಳು ಖಾಲಿ ಇವೆ. ಹಾಸಿಗೆ ಸಾಕಷ್ಟು ಲಭ್ಯವಿದೆ. ಪ್ರತಿ ಜಿಲ್ಲೆಯಲ್ಲಿ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಹಾಸಿಗೆ ಸಾಮರ್ಥ್ಯ ಹೆಚ್ಚಿಸಲಾಗಿದೆ.

ಕೋವಿಡ್ ಪಿಡುಗು ನಿಯಂತ್ರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡ ನಿಲುವುಗಳನ್ನು ದೇಶದ ಶೇ.91 ರಷ್ಟು ಜನರು ಒಪ್ಪಿದ್ದಾರೆ ಎಂದು ಸಮೀಕ್ಷೆಯೊಂದರಲ್ಲಿ ತಿಳಿದುಬಂದಿದೆ. ಇದು ತಪ್ಪು ಎಂದಾದಲ್ಲಿ, ಅಷ್ಟೂ ಜನರ ಭಾವನೆಗಳಿಗೆ ವಿರುದ್ಧವಾಗಿ ಹೇಳಿದಂತಾಗುತ್ತದೆ.

Facebook Comments

Sri Raghav

Admin