“370 ಲೋಕಸಭಾ ಕ್ಷೇತ್ರಗಳ ಇವಿಎಂ ಮತ್ತು ವಿವಿಪ್ಯಾಟ್ ಮತಗಳ ನಡುವೆ ಹೊಂದಾಣಿಕೆ ಇಲ್ಲ”

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.1-ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಪ್ರಚಂಡ ಬಹುಮತ ಗಳಿಸಿ ಪ್ರಧಾನಿ ನರೇಂದ್ರ ಮೋದಿ ಸಾರಥ್ಯದ ಸರ್ಕಾರ ಎರಡನೇ ಬಾರಿ ಅಸ್ತಿತ್ವಕ್ಕೆ ಬಂದಿರುವ ಸಂದರ್ಭದಲ್ಲೇ ಕೇಂದ್ರ ಚುನಾವಣಾ ಆಯೋಗ ಇರಿಸುಮುರಿಸಿಗೆ ಒಳಗಾಗುವಂತೆ ವಿದ್ಯಮಾನವೊಂದು ನಡೆದಿದೆ.

370ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿನ ವಿದ್ಯುನ್ಮಾನ ಮತ ಯಂತ್ರಗಳ (ಇವಿಎಂಗಳ) ಮತ ಎಣಿಕೆಯಲ್ಲಿ ಸಮರ್ಪಕ ಹೊಂದಾಣಿಕೆ ಕಂಡು ಬಂದಿಲ್ಲ ಎಂದು ದಿ ಕ್ವಿಂಟ್ ಎಂಬ ವಾರ್ತಾ ವೆಬ್‍ಸೈಟ್ ಹೇಳಿದೆ. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಸಮಂಜಸ ಉತ್ತರ ವಿವರಣೆ ನೀಡುವಲ್ಲಿ ವಿಫಲವಾಗಿದೆ ಎಂದು ಅದು ಆರೋಪಿಸಿದೆ.

ಇವಿಎಂ ಮತ್ತು ವಿವಿಪ್ಯಾಟ್ ಕಾರ್ಯಕ್ಷಮತೆ ಬಗ್ಗೆ 21 ರಾಜಕೀಯ ಪಕ್ಷಗಳು ಅನುಮಾನ ವ್ಯಕ್ತಪಡಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದವು. ಈ ಸಂದರ್ಭದಲ್ಲೇ ವೆಬ್‍ಸೈಟ್‍ನ ಈ ವರದಿಯಿಂದ ಚುನಾವಣಾ ಆಯೋಗಕ್ಕೆ ತಲೆ ಬಿಸಿಯಾಗಿದೆ.

ಮೊದಲ ನಾಲ್ಕು ಹಂತಗಳ ಲೋಕಸಭೆಗೆ ನಡೆದ ಚುನಾವಣೆಗಳಲ್ಲಿ 373 ಕ್ಷೇತ್ರಗಳಲ್ಲಿ ಈ ಗಂಬೀರ ವ್ಯತ್ಯಾಸ ಮತ್ತು ತಾರತಮ್ಯ ನಡೆದಿದೆ. ಇವಿಎಂ ಮತ ಎಣಿಕೆ ಮತ್ತು ವಿವಿಪ್ಯಾಟ್ ತಾಳೆಯಾಗಿಲ್ಲ ಎಂಬುದು ತಾನು ನಡೆಸಿದ ತನಿಖೆಯಿಂದ ನ್ಯೂಸ್ ವೆಬ್‍ಸೈಟ್ ತಿಳಿಸಿದೆ.

ತಮಿಳುನಾಡಿನ ಕಾಂಚಿಪುರಂ, ಧರ್ಮಪುರಿ, ಶ್ರೀಪೆರಂಬದೂರು, ಚೆನ್ನೈ ಸೌತ್, ಉತ್ತರ ಪ್ರದೇಶದ ಮಥುರಾ, ಬಿಹಾರದ ಔರಂಗಾಬಾದ್, ಓಡಿಶಾದ ಭುವನೇಶ್ವರ್, ಅರುಣಾಚಲ ಪ್ರದೇಶದ ಅರುಣಾಚಲ ಪಶ್ಕಿಮ, ತ್ರಿಪುರ ಮತ್ತು ಕೋಯಿಂಜರ್ ಲೋಕಸಭಾ ಕ್ಷೇತ್ರದಲ್ಲಿ ಕಂಡುಬಂದಿದೆ ಎಂದು ಹೇಳಲಾದ ಮತ ಎಣಿಕೆ ವ್ಯತ್ಯಾಸಗಳನ್ನು ದಿ ಕ್ವಿಂಟ್ ತನ್ನ ವೆಬ್‍ಸೈಟ್‍ನಲ್ಲಿ ಅಂಕಿ-ಅಂಶ ಸಹಿತ ಫೋಸ್ಟ್ ಮಾಡಿದೆ.

ತಮಿಳುನಾಡಿನ ಕಾಂಚೀಪುರಂ ಲೋಕಸಭಾ ಕ್ಷೇತ್ರದಲ್ಲಿ 12,14,086 ಮತ ಚಲಾವಣೆಯಾಗಿದೆ ಎಂದು ಆಯೋಗ ತನ್ನ ವೆಬ್‍ಸೈಟ್‍ನಲ್ಲಿ ತಿಳಿಸಿದೆ. ಮತ ಯಂತ್ರದಲ್ಲಿ 12,32,417 ಮತಗಳು ಎಣಿಕೆಯಾಗಿದೆ. ಹೆಚ್ಚುವರಿಯಾದ 18,331 ಮತಗಳು ಎಲ್ಲಿಯವು ಎಂಬುದಕ್ಕೆ ಆಯೋಗ ಉತ್ತರ ನೀಡಿಲ್ಲ.

ಧರ್ಮಪುರಿ ಲೋಕಸಭಾ ಕ್ಷೇತ್ರದಲ್ಲಿ 11,94,440 ಮತ ಚಲಾವಣೆಯಾಗಿದ್ದು, 12,12,311 ಮತಗಳು ಎಣಿಕೆಯಾಗಿವೆ. ಹೆಚ್ಚುವರಿಯಾಗಿ 17,871 ಮತಗಳಿವೆ.
ಶ್ರೀಪೆರಂಬೂರು ಲೋಕಸಭಾ ಕ್ಷೇತ್ರದಲ್ಲಿ 13,88,666 ಮತಗಳು ಚಲಾವಣೆಯಾಗಿದ್ದು, ಎಣಿಕೆಯಾಗಿರುವುದು 14,03,175 ಮತಗಳು. ಹೆಚ್ಚುವರಿಯಾಗಿ 14,512 ಮತಗಳಿವೆ.

ಉತ್ತರ ಪ್ರದೇಶದ ಮಥುರಾ ಲೋಕಸಭಾ ಕ್ಷೇತ್ರದಲ್ಲಿ 10,88,206 ಮತಗಳು ಚಲಾವಣೆಯಾಗಿದ್ದು, 10,98,112 ಮತಗಳು ಎಣಿಕೆಯಾಗಿವೆ. ಹೆಚ್ಚುವರಿಯಾಗಿ 9,906 ಮತಗಳು ಎಲ್ಲಿಯವು ಎಂಬುದಕ್ಕೆ ಉತ್ತರ ಸಿಕ್ಕಿಲ್ಲ ಎಂದು ವೆಬ್‍ಸೈಟ್ ಹೇಳಿದೆ.

ಈ ಬಗ್ಗೆ ವಿವರಣೆ ಮತ್ತು ಸ್ಪಷ್ಟೀಕರಣ ನೀಡುವಂತೆ ಕೋರಿ ತಾನು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ ನಂತರ ಆಯೋಗವು ತನ್ನ ವೆಬ್‍ಸೆಟ್ ಛ್ಚಿಜ್ಟಿಛಿo್ಠ್ಝಠಿo.್ಞಜ್ಚಿ.ಜ್ಞಿ ಇದರಲ್ಲಿದ್ದ ದತ್ತಾಂಶ ಮಾಹಿತಿಯನ್ನು ತೆಗೆದು ಹಾಕಿದೆ ಎಂದು ಸುದ್ದಿಜಾಲ ಗಂಭೀರ ಆರೋಪ ಮಾಡಿದೆ.

ಈ ವೆಬ್‍ಸೈಟ್ ವರದಿಯಿಂದ ಮತ್ತೆ ಜಾಗೃತವಾಗಿರುವ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳ ನಾಯಕರು ಚುನಾವಣಾ ಆಯೋಗದ ಮೇಲೆ ವಾಗ್ದಾಳಿ ನಡೆಸಿದ್ದು, ಮುಂದಿನ ಸಮರಕ್ಕೆ ಸಜ್ಜಾಗುತ್ತಿದ್ದಾರೆ.

Facebook Comments