ಪ್ರವಾಹ ಪೀಡಿತ ಕೊಡಗು ಜಿಲ್ಲೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--01

ಬೆಂಗಳೂರು, ಆ.23- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಪ್ರವಾಹ ಪೀಡಿತ ಕೊಡಗು ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಪರಿಹಾರ ಕಾಮಗಾರಿಗಳನ್ನು ಪರಿಶೀಲಿಸಲಿದ್ದಾರೆ. ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರ ಈ ಭೇಟಿಯಿಂದ ಸಂತ್ರಸ್ತರ ಪರಿಹಾರ ಕಾರ್ಯಗಳಿಗೆ ಇನ್ನಷ್ಟು ಅನುಕೂಲಗಳಾಗಬಹುದು ಎಂಬ ನಿರೀಕ್ಷೆಗಳಿವೆ.

ಮುಖ್ಯಮಂತ್ರಿಯಾಗಿದ್ದ ವೇಳೆ ಕೊಡಗು ಜಿಲ್ಲೆ ಆಡಳಿತ ವಿಷಯದಲ್ಲಿ ಅತ್ಯಂತ ಬಿಗಿ ಹಿಡಿತ ಹೊಂದಿದ್ದ ಸಿದ್ದರಾಮಯ್ಯ ಅವರು, ಕೋಮು ಸಾಮರಸ್ಯ ಕದಡದಂತೆ ಕಠಿಣ ಕ್ರಮಗಳನ್ನು ಕೈಗೊಂಡಿದ್ದರು. ಬಿಜೆಪಿಯ ಭದ್ರಕೋಟೆಯಾಗಿರುವ ಕೊಡಗು ಜಿಲ್ಲೆಗೆ ಸಿದ್ದರಾಮಯ್ಯ ಅವರ ಭೇಟಿ ಕುತೂಹಲ ಕೆರಳಿಸಿದೆ. ನೆರೆ ಹಾವಳಿಯ ಸಂದರ್ಭದಿಂದ ಹಿಡಿದು ಈವರೆಗು ಯಾವುದೇ ರಾಜಕೀಯ ನಡೆಯದೆ, ಪಕ್ಷ ಭೇದ, ಜಾತಿ ಭೇದ ಮರೆತು ಪರಿಹಾರ ಕಾರ್ಯಗಳು ನಡೆಯುತ್ತಿವೆ. ಆದರೆ, ಅಧಿಕಾರಿಗಳು ಪರಿಹಾರ ಸಾಮಗ್ರಿಗಳನ್ನು ತಲುಪಿಸುವಲ್ಲಿ ತಾರತಮ್ಯಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ.
ರಾಜ್ಯದ ನಾನಾ ಭಾಗಗಳಿಂದಲೂ ಆಹಾರ ಮತ್ತು ಇತರೆ ಸಾಮಗ್ರಿಗಳ ಪ್ರವಾಹವೇ ಹರಿದು ಬರುತ್ತಿದೆ. ಆದರೆ, ಅದನ್ನು ಸರಿಯಾಗಿ ವಿತರಣೆ ಮಾಡಲಾಗುತ್ತಿಲ್ಲ ಎಂಬ ಆರೋಪವಿದೆ.

ಜಿಲ್ಲೆಯಾದ್ಯಂತ ಸ್ಥಾಪನೆಯಾಗಿರುವ ಕಾಳಜಿ ಕೇಂದ್ರಗಳಲ್ಲಿ ತಂಗಿದ್ದ ಜನ ಇಂದಿನಿಂದ ತಮ್ಮ ಮನೆಗಳಿಗೆ ವಾಪಸಾಗಲಿದ್ದಾರೆ. ಮಳೆ ಪ್ರಮಾಣ ತಗ್ಗಿದ್ದು, ಜನ ಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಈವರೆಗಿನ ಸವಾಲುಗಳು ಒಂದು ರೀತಿಯಾದರೆ. ಇನ್ನು ಮುಂದೆ ಕೊಡಗು ಜನರ ಬದುಕನ್ನು ಕಟ್ಟಿಕೊಡುವುದು, ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರವಹಿಸುವುದು, ಸಂಪರ್ಕ ಮಾರ್ಗಗಳನ್ನು ಯಥಾಸ್ಥಿತಿಗೆ ತರುವುದು ದೊಡ್ಡ ಸವಾಲಾಗಿದೆ.

ಈ ಹಿನ್ನೆಲೆಯಲ್ಲಿ ಹಿರಿಯ ಅನುಭವಿ ರಾಜಕಾರಣಿಯಾದ ಸಿದ್ದರಾಮಯ್ಯ ಅವರು ಅಧಿಕಾರಿಗಳು ಮತ್ತು ಸರ್ಕಾರಕ್ಕೆ ಸೂಕ್ತ ಸಲಹೆ, ಮಾರ್ಗದರ್ಶನ ನೀಡುತ್ತಾರೆ ಎಂಬ ನಿರೀಕ್ಷೆಗಳಿವೆ. ಇಂದು ಬೆಳಗ್ಗೆ ಬೆಂಗಳೂರಿನಿಂದ ಪಿರಿಯಾಪಟ್ಟಣದವರೆಗೆ ಹೆಲಿಕಾಪ್ಟರ್‍ನಲ್ಲಿ ತೆರಳುವ ಸಿದ್ದರಾಮಯ್ಯ ಅವರು, ಅಲ್ಲಿಂದ ರಸ್ತೆ ಮಾರ್ಗವಾಗಿ ಕೊಡಗು ಜಿಲ್ಲೆಗೆ ಭೇಟಿ ನೀಡಲಿದ್ದಾರೆ.

ಕುಶಾಲನಗರ ಪರಿಹಾರ ಕೇಂದ್ರ, ಚಾಮುಂಡೇಶ್ವರಿ ಪರಿಹಾರ ಕೇಂದ್ರ, ಇಂದಿರಾನಗರ ಬಡಾವಣೆ, ಮಳೆಯಿಂದ ಕೊಚ್ಚಿಹೋಗಿರುವ ಕಟಗೇರಿ ರಸ್ತೆ ಸೇರಿದಂತೆ ವಿವಿಧ ಸ್ಥಳಗಳಿಗೆ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ನಂತರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.  ಸಿದ್ದರಾಮಯ್ಯ ಅವರ ಭೇಟಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪರಿಹಾರ ಕಾಮಗಾರಿಗಳನ್ನು ಚುರುಕುಗೊಳಿಸಿದೆ. ಸಿದ್ದರಾಮಯ್ಯ ಇಂದು ರಾತ್ರಿ ಕೊಡಗಿನಲ್ಲೇ ವಾಸ್ತವ್ಯ ಹೂಡಿ ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ. ನಾಳೆ ಹಾಸನ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

Facebook Comments

Sri Raghav

Admin