ಸಿಸಿಬಿ ವಿಚಾರಣೆಗೆ ಬಾರದ ಮಾಜಿ ಮೇಯರ್ ಸಂಪತ್‍ರಾಜ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.18- ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್ ಸಂಪತ್‍ರಾಜ್ ಸಿಸಿಬಿ ವಿಚಾರಣೆಗೆ ಹಾಜರಾಗುತ್ತಿಲ್ಲ. ಸಂಪತ್‍ರಾಜ್ ಅವರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿರುವುದರಿಂದ ಸಿಸಿಬಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ.

ತಮಗೆ ಕೊರೊನಾ ಬಂದಿರುವುದರಿಂದ ಸಿಸಿಬಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಸಂಪತ್‍ರಾಜ್ ತಮ್ಮ ವಕೀಲರ ಮೂಲಕ ಸಿಸಿಬಿ ಪೊಲೀಸರಿಗೆ ಸಂದೇಶ ರವಾನಿಸಿದ್ದಾರೆ. ಸಂಪತ್‍ರಾಜ್ ಅವರಿಗೆ ಕೊರೊನಾ ಸೋಂಕು ನಿವಾರಣೆಯಾಗುವವರೆಗೂ ಅವರನ್ನು ಸಿಸಿಬಿ ವಿಚಾರಣೆಗೊಳಪಡಿಸುವುದು ಅಸಾಧ್ಯವಾಗಿದೆ.

ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಮಾಜಿ ಮೇಯರ್ ಸಂಪತ್‍ರಾಜ್ ಮತ್ತು ಬಿಬಿಎಂಪಿ ಮಾಜಿ ಸದಸ್ಯ ಅಬ್ದುಲ್ ರಖೀಬ್ ಜಾಕಿರ್ ಅವರನ್ನು ಈ ಹಿಂದೆ ಸಿಸಿಬಿ ಪೊಲೀಸರು ನೋಟಿಸ್ ನೀಡಿ ವಿಚಾರಣೆಗೊಳಪಡಿಸಿದ್ದರು. ವಿಚಾರಣೆ ಸಂದರ್ಭದಲ್ಲಿ ಸಂಪತ್‍ರಾಜ್ ಮತ್ತು ಅಬ್ದುಲ್ ರಖೀಬ್ ಜಾಕಿರ್ ಅವರ ಮೊಬೈಲ್‍ಗಳನ್ನು ಪೊಲೀಸರು ಸೀಜ್ ಮಾಡಿ ಎಫ್‍ಎಸ್‍ಎಲ್‍ಗೆ ರವಾನಿಸಿ ಇಬ್ಬರನ್ನು ವಾಪಸ್ ಕಳುಹಿಸಿದ್ದರು.

ಆದರೆ, ಇದೀಗ ಸಂಪತ್‍ರಾಜ್ ಅವರಿಗೆ ಮತ್ತೊಮ್ಮೆ ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಈ ಮಧ್ಯೆ ಕೊರೊನಾ ಪಾಸಿಟಿವ್ ಬಂದು ಆಸ್ಪತ್ರೆಗೆ ದಾಖಲಾಗಿರುವ ಸಂಪತ್‍ರಾಜ್ ಅವರನ್ನು ಮತ್ತೆ ಯಾವಾಗ ಸಿಸಿಬಿ ಪೊಲೀಸರು ವಿಚಾರಣೆ ನಡೆಸುವರೋ ಕಾದು ನೋಡಬೇಕು.

Facebook Comments