‘ಮಗ ಅಷ್ಟೇ ಅಲ್ಲ ಅಳಿಯನೂ ಚೆನ್ನಾಗಿರಬೇಕು’, ಹೆಚ್ಡಿಕೆ-ದೇವೇಗೌಡರಿಗೆ ಮಂಜು ಟಾಂಗ್..!

ಈ ಸುದ್ದಿಯನ್ನು ಶೇರ್ ಮಾಡಿ

A-Manju--01

ಮೈಸೂರು, ಜು.16- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಮಾಜಿ ಸಚಿವ ಎ.ಮಂಜು ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು, ಎಲ್ಲರನ್ನು ಜತೆಯಲ್ಲಿ ಕೊಂಡೊಯ್ಯುವ ಮೂಲಕ ಆಡಳಿತ ನಡೆಸಬೇಕು. ಸಮ್ಮಿಶ್ರ ಸರ್ಕಾರವೊಂದು ಸಂಸಾರವಿದ್ದಂತೆ. ಎಲ್ಲರೂ ಒಟ್ಟಾಗಿ ಮುಂದುವರೆಯಬೇಕು. ಅಳಬಾರದು, ಅತ್ತರೆ ಸಮಸ್ಯೆಗಳು ಬಗೆಹರಿಯುವುದಿಲ್ಲ. ಮುಖ್ಯಮಂತ್ರಿಯವರು ಜನರ ಕಣ್ಣೀರು ಒರೆಸಬೇಕೇ ಹೊರತು, ಅವರೇ ಜನರ ಮುಂದೆ ಕಣ್ಣೀರು ಸುರಿಸಬಾರದು ಎಂದು ಮಾರ್ಮಿಕವಾಗಿ ನುಡಿದರು.

ರಾಜ್ಯದ ಜನರ ಸಮಸ್ಯೆಗೆ ಸ್ಪಂದಿಸಿ ಕಾಂಗ್ರೆಸ್ ಪಕ್ಷ ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಭಾಗಿಯಾಗಿದೆ. ಆದರೆ, ಎಲ್ಲವನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗದೇ ಕುಮಾರಸ್ವಾಮಿ ಕಣ್ಣೀರು ಹಾಕಿರುವುದು ಸರಿಯಲ್ಲ ಎಂದರು. ಕುಮಾರಸ್ವಾಮಿ ಅವರ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಿಗೆ ಮುಜುಗರವಾಗುತ್ತಿದೆ. ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುವ ರೀತಿಯಲ್ಲಿ ಕುಮಾರಸ್ವಾಮಿ ಹೇಳಿಕೆ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.

ಮಗ ಮಾತ್ರ ಚೆನ್ನಾಗಿ ಇರಬೇಕು ಎಂದರೆ ಹೇಗೆ? ಮದುವೆ ಮಾಡಿಕೊಟ್ಟ ಮೇಲೆ ಅಳಿಯನೂ ಕೂಡ ಚೆನ್ನಾಗಿ ಇರಬೇಕು ಅಲ್ಲವೇ ಎಂದು ಪ್ರಶ್ನಿಸುವ ಮೂಲಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಮಂಜು ಟಾಂಗ್ ನೀಡಿದರು. ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಬೀಗರ ಸಂಬಂಧಕ್ಕೆ ಹೋಲಿಸಿದ ಎ.ಮಂಜು, ಕೇವಲ ಕುಮಾರಸ್ವಾಮಿ ಮಾತ್ರ ಕಷ್ಟಪಡುತ್ತಿಲ್ಲ. ದೇವೇಗೌಡರೇ, ಅಳಿಯನೂ ಕೂಡ ಮಗಳನ್ನೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಆದರೆ, ಮಗ ಮಾತ್ರ ಕಷ್ಟ ಪಡುತ್ತಿದ್ದಾರೆ ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗಬೇಕೆಂದು ಅವರು ಪುನರುಚ್ಚರಿಸಿದರು.

Facebook Comments

Sri Raghav

Admin