ತಳ್ಳುಗಾಡಿ ವ್ಯಾಪಾರಸ್ಥರ ಬೆಂಬಲಕ್ಕೆ ನಿಂತ ಮಾಜಿ ಸಚಿವ ಸುರೇಶ್ ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.7- ತಳ್ಳುವ ಗಾಡಿಗಳಲ್ಲಿ ತರಕಾರಿ ಮಾರುತ್ತಿದ್ದವರ ಬಳಿ ಧ್ವನಿವರ್ಧಕಗಳನ್ನು ಪೊಲೀಸರು ವಶ ಪಡೆಸಿಕೊಂಡಿರುವ ಕುರಿತು ಮಾಜಿ ಸಚಿವ ಸುರೇಶ್ ಕುಮಾರ್ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಅವರ ಆರ್ಥಿಕ ಪರಿಸ್ಥಿತಿಯನ್ನು ಪರಾಮರ್ಶಿಸುವಂತೆ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರ ಬರೆದಿರುವ ಅವರು, ಪ್ರತಿದಿನ ಜೀವನ ನಿರ್ವಹಣೆಗಾಗಿ ತಳ್ಳುವ ಗಾಡಿ ಮೂಲಕ ಬಿಸಿಲು, ಗಾಳಿ, ಮಳೆಯನ್ನೂ ಲೆಕ್ಕಿಸದೆ ಕಿಲೋಮೀಟರ್ ಗಟ್ಟಲೆ ನಡೆಯುತ್ತಾರೆ. ಇವರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳ ಮೊದಲ ದಿನ ಸಂಬಳ ಬೀಳುವುದಿಲ್ಲ. ಅವರೆಲ್ಲ ಆರ್ಥಿಕವಾಗಿ ತುಂಬಾ ಹಿಂದುಳಿದವರು ಹಾಗೂ ವಿಶೇಷವಾಗಿ ಲಾಕ್‍ಡೌನ್ ಸಮಯದಲ್ಲಿ ಜರ್ಜರಿತರಾದವರು.

ಈ ಜನರ ಬಗ್ಗೆ ತುಸು ಕನಿಕರವಿರಲಿ. ಗಾಡಿಯನ್ನು ತಳಿಕೊಂಡು ಎಷ್ಟು ಗಂಟೆ ಕಾಲ ಕೂಗಿ ಕೂಗಿ ತರಕಾರಿ, ಹಣ್ಣು ಮಾರಬಹುದು? ಅವರು ನಮ್ಮ ರಾಜ್ಯದವರೇ, ಬೆಂಗಳೂರಿನ ಸುತ್ತ ಮುತ್ತಲಿನ ನಿವಾಸಿಗಳೇ, ನಮ್ಮ ಕನ್ನಡಿಗರೇ ಎಂಬುವುದು ನೆನಪಿರಲಿ. ಈಗಾಗಲೇ ಆನ್‍ಲೈನ್ ವ್ಯಾಪಾರದಿಂದ ಅವರಿಗೆ ದೊಡ್ಡ ಪೆಟ್ಟು ಬಿದ್ದಿದೆ.

ನಾಗರಿಕರು ದೂರು ಕೊಟ್ಟ ತಕ್ಷಣ ನಿರ್ಧಾರ ತೆಗೆದುಕೊಳ್ಳುವ ಮೊದಲು ಪರಾಮರ್ಶೆ ಮಾಡಬೇಕು. ಈ ಕುರಿತು ತಳ್ಳು ಗಾಡಿ ವ್ಯಾಪಾರಿಗಳ ಅಹವಾಲು ಕೇಳಿ ಬಡ ವ್ಯಾಪಾರಿಗಳ ಹಿತವನ್ನು ರಕ್ಷಿಸಿ ಎಂದು ಪತ್ರದಲ್ಲಿ ಸುರೇಶ್‍ಕುಮಾರ್ ಮನವಿ ಮಾಡಿಕೊಂಡಿದ್ದಾರೆ.

Facebook Comments

Sri Raghav

Admin