ಅಮೇರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮಹತ್ವ ಪಡೆದುಕೊಂಡ ಕನ್ನಡಿಗನ ಹೇಳಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಆ.23- ಅಮೆರಿಕದ ಮಾಜಿ ಉಪಾಧ್ಯಕ್ಷ ಮತ್ತು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ರಾಷ್ಟ್ರಾಧ್ಯಕ್ಷರಾದರೆ ಸಮಾಜದಲ್ಲಿ ಹದಗೆಟ್ಟಿರುವ ಸ್ವಾಸ್ಥ್ಯ ಸುಧಾರಿಸುತ್ತದೆ ಎಂದು ಮಾಜಿ ಸರ್ಜನ್ ಜನರಲ್ ಮತ್ತು ಖ್ಯಾತ ವೈದ್ಯ ಕರ್ನಾಟಕದವಾರದ ಡಾ.ವಿವೇಕ್‍ಮೂರ್ತಿ ಹೇಳಿದ್ದಾರೆ.

ಬಿಡೆನ್ ಪರ ಭಾಷಣ ಮಾಡಲು ಡೆಮಾಕ್ರಟಿಕ್ ಪಕ್ಷದಿಂದ ವಿಶೇಷ ಆಹ್ವಾನಿತರಾಗಿ ಆಮಂತ್ರಿಸಲ್ಪಟ್ಟಿದ್ದ ಡಾ.ಮೂರ್ತಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳ ಪರ ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದಾರೆ.

ನಾನು ಮೊದಲಿನಿಂದಲೂ ಜೋಬಿಡೆನ್ ಅವರನ್ನು ಹತ್ತಿರದಿಂದ ಬಲ್ಲೆ. ಅವರೊಂದಿಗೆ ನಾನು ಕಾರ್ಯನಿರ್ವಹಿಸಿದ್ದೇನೆ. ಅತ್ಯಂತ ಕಷ್ಟದಲ್ಲಿರುವ ಜನರ ಬಳಿ ತಲುಪುವ ಅತ್ಯಂತ ದಕ್ಷ ಮತ್ತು ಅಂತಃಕರಣದ ನಾಯಕ ಜೋಬಿಡೆನ್ ಎಂದು ಡಾ.ವಿವೇಕ್‍ಮೂರ್ತಿ ಬಣ್ಣಿಸಿದರು.

ತೀವ್ರ ಅನಾರೋಗ್ಯ ಪೀಡಿತರಾಗಿ ಗಾಲಿ ಕುರ್ಚಿಯಲ್ಲಿದ್ದ ನನ್ನ ಅಜ್ಜಿಯನ್ನು ಮಂಡಿಯೂರಿ ಕೈ ಹಿಡಿದು ಅವರ ಆರೋಗ್ಯ ವಿಚಾರಿಸಿ ಸಾಂತ್ವನ ಹೇಳಿದ ಜೋಬಿಡೆನ್ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ತಲುಪುವ ಔದಾರ್ಯ ಮತ್ತು ಕರುಣೆ ಇರುವ ಅತ್ಯಂತ ದಕ್ಷ ನಾಯಕರು ಎಂದು ಜೋಬಿಡೆನ್ ಬಣ್ಣಿಸಿದರು.

ಉತ್ತಮ ನಾಯಕನಿಂದ ನಮ್ಮ ಸಮಾಜದ ಸ್ವಾಸ್ಥ್ಯ ಸುಧಾರಿಸುತ್ತದೆ. ನಮ್ಮಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ಹಣ ಮತ್ತು ಸಕಲ ಸೌಲಭ್ಯಗಳಿವೆ. ಆದರೆ, ಉತ್ತಮ ನಾಯಕನ ಕೊರತೆ ಇದೆ.

ಅಧ್ಯಕ್ಷರಾದ ಮಾನ್ಯ ಡೊನಾಲ್ಡ್ ಟ್ರಂಪ್ ಅವರು ಸಮರ್ಪಕವಾಗಿ ಸಾಂಕ್ರಾಮಿಕ ರೋಗ ನಿರ್ವಹಣೆ ಮಾಡದ ಕಾರಣ ಸೂಪರ್ ಪವರ್ ದೇಶ ಅಮೆರಿಕದಲ್ಲಿ ಸಹಸ್ರಾರು ಮಂದಿ ಈ ರೋಗಕ್ಕೆ ಬಲಿಯಾಗಿದ್ದಾರೆ ಎಂದು ರಿಪಬ್ಲಿಕನ್ ಪಕ್ಷವನ್ನು ಡಾ.ವಿವೇಕ್‍ಮೂರ್ತಿ ತರಾಟೆಗೆ ತೆಗೆದುಕೊಂಡರು.

ಆರು ವರ್ಷಗಳ ಹಿಂದೆ ಅಮೆರಿಕದಲ್ಲಿ ಮಾರಕ ಎಬೋಲಾ ರೋಗ ತಗುಲಿದಾಗ ಅದನ್ನು ನಿಭಾಯಿಸುವಲ್ಲಿ ಜೋಬಿಡೆನ್ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದರು.

ನಾನು ಆಗ ಸಾರ್ವಜನಿಕ ಆರೋಗ್ಯ ವಿಭಾಗದ ಉಪಮುಖ್ಯಸ್ಥನಾಗಿದ್ದೆ. ಜೋಬಿಡೆನ್ ಅವರ ಕಾರ್ಯಕ್ಷಮತೆ ಮತ್ತು ದಕ್ಷತೆ ಅತ್ಯಂತ ಅನುಕರಣೀಯ ಎಂದು ಅವರು ಹೇಳಿದರು.

ನಾಯಕನಾದವನು ಕೇವಲ ಟೆಲಿವಿಷನ್ ನೋಡುತ್ತ ಕಾಲ ಕಳೆಯುವುದರಿಂದ ಏನೂ ಪ್ರಯೋಜನವಿಲ್ಲ ಎಂದು ಟ್ರಂಪ್ ಅವರನ್ನು ಲೇವಡಿ ಮಾಡಿದ ಡಾ.ವಿವೇಕ್‍ಮೂರ್ತಿ ಜೋಬಿಡೆನ್ ಅಂತಹ ನಾಯಕರ ಅಗತ್ಯ ಅಮೆರಿಕಗೆ ಅತ್ಯಂತ ಅನಿವಾರ್ಯವಾಗಿದೆ ಎಂದು ಅವರು ಹೇಳಿದರು.

ನನ್ನನ್ನು ಡೆಮಾಕ್ರಟಿಕ್ ಪಕ್ಷದ ಸಮಾವೇಶದಲ್ಲಿ ಭಾಷಣ ಮಾಡಲು ಆಹ್ವಾನ ನೀಡಿರುವುದಕ್ಕೆ ಅತ್ಯಂತ ಸಂತಸವಾಗುತ್ತಿದೆ. ನಾನು ಕರ್ನಾಟಕದವನು. ಅದರಲ್ಲೂ ಮಂಡ್ಯದ ಹಲಗೆರೆ ಎಂಬ ಗ್ರಾಮದ ನಿವಾಸದಿ. ಇಲ್ಲಿ ಭಾರತೀಯ ಮೂಲದ ಅನೇಕ ಜನರಿದ್ದಾರೆ.

ಇವರೆಲ್ಲರೂ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳಾದ ಜೋಬಿಡೆನ್ ಮತ್ತು ಕಮಲಾ ಹ್ಯಾರಿಸ್ ಅವರಿಗೆ ಭಾರೀ ಬೆಂಬಲ ನೀಡಿದ್ದಾರೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷೆಯಾಗಿ ಇವರಿಬ್ಬರ ಜಯ ಶತಸಿದ್ಧ ಎಂದು ಡಾ.ಮೂರ್ತಿ ಹೇಳಿದರು.

Facebook Comments

Sri Raghav

Admin