ಸಚಿವರಿಗೆ ಪರೀಕ್ಷೆಗಳ ಬಗ್ಗೆ ತುರಾತುರಿ ಯಾಕೆ?: ಕಾಂಗ್ರೆಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 24- ರಾಜ್ಯ ಸರ್ಕಾರದ ವೈಪಲ್ಯಗಳ ಬಗ್ಗೆ ಮತ್ತೆ ಕಿಡಿಕಾರಿರುವ ಕಾಂಗ್ರೆಸ್ ಬ್ಲಾಕ್ ಫಂಗಸ್ ಅನಾಹುತಕ್ಕೂ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದಿದೆ. ಕರೋನಾ 2ನೇ ಅಲೆಯ ಬಗ್ಗೆಯೂ ಎಚ್ಚರಾಗದೆ ಅನಾಹುತಕ್ಕೆ ಕಾರಣವಾಗಿದ್ದ ಸರ್ಕಾರ ಈಗ ಕಪ್ಪು ಶಿಲೀಂದ್ರ ಸೋಂಕಿನಲ್ಲೂ ಬೇಜವಾಬ್ದಾರಿತನ ಪ್ರದರ್ಶಿಸುತ್ತಿದೆ.

ತಜ್ಞರ ಸಭೆ ನಡೆಸಿಲ್ಲ, ಸೋಂಕಿನ ಮಾಹಿತಿ ಪಡೆದಿಲ್ಲ, ಕೇಂದ್ರದ ಅಂಪೋಟೆರಿಸನ್-ಬಿ ತಾರತಮ್ಯವನ್ನು ಪ್ರಶ್ನಿಸಲಿಲ್ಲ. ರಾಜ್ಯಕ್ಕೆ ಮತ್ತೊಂದು ಸೋಂಕಿನ ಕೊಡುಗೆ ನೀಡಲು ಮುಂದಾಗಿದೆ ಬಿಜೆಪಿ ಎಂದು ಆಕ್ರೋಶ ವ್ಯಕ್ತ ಪಡಿಸಿದೆ. ಕೊರೊನಾದಿಂದ ಜನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನರಳುತ್ತಿದ್ದಾರೆ.

ಈ ವೇಳೆ ಸದ್ದಿಲ್ಲದೆ ಸರ್ಕಾರ ಪೆಟ್ರೋಲ್, ಡಿಸೇಲ್ ಬೆಲೆಯನ್ನು ಹೆಚ್ಚಳ ಮಾಡುತ್ತಿದೆ. ಮೇ ತಿಂಗಳ 24 ದಿನಗಳಲ್ಲಿ 12 ಬಾರಿ ದರ ಏರಿಕೆ ಮಾಡಿ ಕೊರೊನಾ ಸೋಂಕಿನ ಜೊತೆಗೆ ಜನರನ್ನು ಸುಲಿಗೆ ಮಾಡುತ್ತಿದೆ ಎಂದು ಆರೋಪಿಸಲಾಗಿದೆ. ಸತತ 12ನೇ ಬಾರಿ ಪೆಟ್ರೋಲ್ ಡೀಸೆಲ್ ದರ ಹೆಚ್ಚಳವಾಗಿದೆ.

ಬಿಜೆಪಿಯಂತಹ ಅಮಾನವೀಯ ಸರ್ಕಾರ ಜಗತ್ತಿನಲ್ಲಿ ಮತ್ತೊಂದಿಲ್ಲ, ಕೋವಿಡ್ ಸಂಕಷ್ಟದ ಮದ್ಯೆ ಆರ್ಥಿಕ ಸ್ಥಿತಿ ಸಂಪೂರ್ಣ ನೆಲಕಚ್ಚಿರುವ ಹೊತ್ತಿನಲ್ಲಿ ಈ ಬೆಲೆ ಏರಿಕೆಗಳು ದೇಶದ ಆರ್ಥಿಕ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಿ ವಿನಾಶಕಾರಿಯಾಗುವುದರಲ್ಲಿ ಅನುಮಾನವಿಲ್ಲ ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟವಾಡಬಾರದು. ಸಚಿವರಿಗೆ ಪರೀಕ್ಷೆಗಳ ಬಗ್ಗೆ ತುರಾತುರಿ ಯಾಕೆ? ಸರ್ಕಾರದ ಅಸಮರ್ಥ ನಿರ್ವಹಣೆಯಿಂದ ಸೋಂಕು ನಿಯಂತ್ರಣ ಮೀರಿ ಬೆಳೆಯುತ್ತಿದೆ, ಅದರ ನಡುವೆ ಎಸ್ ಎಸ್ ಎಲ್ ಸಿ, ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟವಾಡಬಾರದು ಎಂದು ಕಾಂಗ್ರೆಸ್ ಸಲಹೆ ನೀಡಿದೆ.

Facebook Comments