Exclusive : ಬೆಂಗಳೂರು ಮರೆತಿರಾ ಮೋದಿಜೀ..?

ಈ ಸುದ್ದಿಯನ್ನು ಶೇರ್ ಮಾಡಿ

Bullet-Trai-n--01

ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಯೇ ಸರ್ಕಾರಗಳ ಮೂಲ ಮಂತ್ರವಾದಾಗ ಜನತೆಯಲ್ಲಿ ಆ ಸರ್ಕಾರಗಳ ಬಗ್ಗೆ ಭರವಸೆ ಮೂಡುತ್ತದೆ. ಸರ್ಕಾರದ ಅಂತಹ ಚಟುವಟಿಕೆಗಳಿಗೆ ಇಡೀ ಸಮಾಜ ಬೆಂಬಲವಾಗಿ ನಿಲ್ಲುತ್ತದೆ. ಇದು ಅಭಿವೃದ್ಧಿಶೀಲ ದೇಶವೊಂದರ ಪ್ರಗತಿಯ ಸಂಕೇತ.  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಭಿವೃದ್ದಿಪರ ಯೋಜನೆಗಳನ್ನು ಕೈಗೊಂಡಿದೆ. ಅವುಗಳಲ್ಲಿ ಅತಿವೇಗದ ಬುಲೆಟ್ ಟ್ರೈನ್ ಯೋಜನೆ ನಿಜಕ್ಕೂ ಅದ್ಭುತವಾದದ್ದು. ಈ ಬುಲೆಟ್ ಟ್ರೈನ್ ವೇಗ ಗಂಟೆಗೆ ಬರೋಬ್ಬರಿ 320 ಕಿ.ಮೀ. ಅಂದರೆ ದೇಶದ ಅಭಿವೃದ್ಧಿ ಕೂಡ ಇದೇ ವೇಗದ ದರದಲ್ಲಿ ಸಾಗುತ್ತಿದೆ ಎಂದೇ ಅರ್ಥ.
ದೇಶದ ಇಂತಹ ಅಭಿವೃದ್ದಿ ಯೋಜನೆಗಳ ಬಗ್ಗೆ , ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳ ಬಗ್ಗೆ ನಾವು ಕೈ ಜೋಡಿಸಲೇಬೇಕು.ಆದರೆ ಇಲ್ಲೊಂದು ಸಣ್ಣ ಅಸಮಾಧಾನವೂ ಇಲ್ಲದಿಲ್ಲ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಒಂದೇ ಪಕ್ಷದ ಸರ್ಕಾರವಿರಲಿ ಅಥವಾ ಬೇರೆ ಬೇರೆ ಪಕ್ಷಗಳ ಸರ್ಕಾರಗಳಿರಲಿ ನಮ್ಮ ರಾಜ್ಯದ ಮಟ್ಟಿಗಂತೂ ಮಲತಾಯಿ ಧೋರಣೆ ಸ್ವಾತಂತ್ರ್ಯಾ ನಂತರದಲ್ಲಿ ನಿರಂತರವಾಗಿ ನಡೆದಿದೆ.

ಇದಕ್ಕೆ ಬುಲೆಟ್ ಟ್ರೈನ್ ಒಂದು ಸೂಕ್ತ ಉದಾಹರಣೆಯಾಗಬಲ್ಲದು. ಕೇಂದ್ರ ಸರ್ಕಾರ ಇಂತಹ ಭಾರೀ ಯೋಜನೆಗಳನ್ನು ರೂಪಿಸುವಾಗ ಕೇವಲ ಉತ್ತರಭಾರತ ಅಥವಾ ಈಶಾನ್ಯ ,ವಾಯುವ್ಯ ಭಾರತವನ್ನಷ್ಟೇ ಗಮನದಲ್ಲಿಟ್ಟುಕೊಂಡು ವ್ಯವಹರಿಸುವ ಭರದಲ್ಲಿ ದಕ್ಷಿಣ ಭಾರತ ಅದರಲ್ಲೂ ವಿಶೇಷವಾಗಿ ಕರ್ನಾಟಕವನ್ನು ಮರೆತೇ ಬಿಡುತ್ತದೆಯೇನೋ ಎಂಬ ಅನುಮಾನ ಕನ್ನಡಿಗರ ಹೃದಯದ ಒಂದು ಮೂಲೆಯಲ್ಲಿ ಮೊದಲಿನಿಂದಲೂ ಕೊರೆಯುತ್ತಲೇ ಇದೆ.

ಬುಲೆಟ್ ಟ್ರೈನ್ ಸದ್ಯ ಗುಜರಾತ್‍ನ ಅಹಮದಾಬಾದ್ ಮತ್ತು ಮಹಾರಾಷ್ಟ್ರದ ಮುಂಬೈ ಮಹಾನಗರಗಳ ನಡುವೆ ಸಂಚರಿಸಲಿದೆ. ಒಂದು ಲಕ್ಷ ಎಂಟು ಸಾವಿರ(1,08,000) ಕೋಟಿ ರೂ.ಗಳ ಈ ಬೃಹತ್ ಯೋಜನೆ 2022ರ ಆಗಸ್ಟ್ 15ರ ವೇಳೆಗೆ (ಅಂದರೆ ಭಾರತದ 75ನೇ ಸ್ವಾತಂತ್ರೋತ್ಸವದ ಸಮಯ) ಕಾರ್ಯಾರಂಭ ಮಾಡಲಿದೆ.

ಕರ್ನಾಟಕದ ಕಡೆಗಣನೆ ಏಕೆ?

ವಾಸ್ತವವಾಗಿ ದೇಶದ ಖಜಾನೆ ತುಂಬಿಸುವುದರಲ್ಲಿ ನಮ್ಮ ಕರ್ನಾಟಕ ಮುಂದಿದೆ. ಕರ್ನಾಟಕವೂ ಸೇರಿ ದಕ್ಷಿಣ ಭಾರತದ ಕೆಲವೇ ರಾಜ್ಯಗಳು ದೇಶದ ಒಟ್ಟು ತೆರಿಗೆಯಲ್ಲಿ ಶೇ.60ರಷ್ಟು ಪಾಲನ್ನು ಕೊಡುತ್ತಿದೆ. ಇನ್ನುಳಿದ ಉತ್ತರ, ಈಶಾನ್ಯ, ವಾಯುವ್ಯ ಭಾರತದ ರಾಜ್ಯಗಳು ಕೇವಲ ಶೇ.40ರ ಪಾಲನ್ನು ತುಂಬುತ್ತಿವೆ. ಆದರೂ ಕೇಂದ್ರದ ಆಡಳಿತಗಳು ಕರ್ನಾಟಕವನ್ನು ಕಡೆಗಣ್ಣಿನಿಂದ ನೋಡುವುದು ತಪ್ಪಲೇ ಇಲ್ಲ.  ಇನ್ನು ಪ್ರತ್ಯೇಕ ರೈಲ್ವೆ ಇಲಾಖೆಯೊಂದನ್ನೆ ಹೇಳುವುದಾದರೆ ಕರ್ನಾಟಕದ ರೈಲ್ವೆ ವಲಯಗಳು ಬಹು ಭಾರೀ ಪ್ರಮಾಣದ ತೆರಿಗೆಯನ್ನು ನೀಡುತ್ತಿದೆ. ಹೀಗಿದ್ದರೂ ಕರ್ನಾಟಕವನ್ನೇಕೆ ಉತ್ತರದವರು ಗಂಭೀರವಾಗಿ ಪರಿಗಣಿಸುತ್ತಿಲ್ಲ…? ಇದು ಆರ್ಯ-ದ್ರಾವಿಡ ಸಂಸ್ಕøತಿಯ ಪ್ರತೀಕವೇ?

ಮಹಾರಾಷ್ಟ್ರದ ಮುಂಬೈ(ಥಾಣೆ) ಮತ್ತು ಗುಜರಾತ್‍ನ ಅಹಮದಾಬಾದ್ ನಡುವೆ ಈ ಬುಲೆಟ್ ಟ್ರೈನ್ ಸಂಚರಿಸಬಹುದಾದರೆ, ಕರ್ನಾಟಕದ ರಾಜಧಾನಿ, ಐಟಿಬಿಟಿಯಲ್ಲಿ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರಿಗೂ ಕೂಡ ಮೊದಲನೇ ಹಂತದಲ್ಲೇ ಬುಲೆಟ್ ಟ್ರೈನ್ ಬರಹುದಿತ್ತಲ್ಲವೆ? ಮುಂಬೈ-ಅಹಮದಾಬಾದ್ ನಡುವಿನ 509 ಕಿ.ಮೀ.ಗಳಿಗೆ ಸೀಮಿತಗೊಳಿಸುವ ಬದಲು ಮಧ್ಯೆ ಬೆಂಗಳೂರು ಮತ್ತು ಚೆನ್ನೈ ಮಹಾನಗರಗಳನ್ನು ಸೇರಿಕೊಳ್ಳಬಹುದಿತ್ತಿಲ್ಲವೆ? ಈ ನೋವಿನ ಪ್ರಶ್ನೆಗಳನ್ನು ಕರ್ನಾಟಕದ ಆರೂವರೆ ಕೋಟಿ(6.50 ಕೋಟಿ) ಜನ ಒಕ್ಕೋರಲಿನಿಂದ ಕೇಳುತ್ತಿದ್ದಾರೆ.

ನೊಂದ ಕನ್ನಡಿಗರು:

ನಮ್ಮನ್ನಾಳುವ ಈ ಕೇಂದ್ರ ಸರ್ಕಾರಗಳು ಮೊದಲಿನಿಂದಲೂ ಇಂತಹ ಮಲತಾಯಿ ಧೋರಣೆಯನ್ನು ಕರ್ನಾಟಕದ ಬಗ್ಗೆ ಅನುಸರಿಸಿಕೊಂಡು ಬರುತ್ತಿದ್ದರೂ ನಮ್ಮ ಕರ್ನಾಟಕದ ಜನಪ್ರತಿನಿಧಿಗಳಿಗೆ ಇದು ಅರಿವಿಗೆ ಬಂದೇ ಇಲ್ಲವೇ? ಕರ್ನಾಟಕದ ಈ ಜನಪ್ರತಿನಿಧಿಗಳು ಹೀಗೇಕೆ ಬಾಯ್ಮುಚ್ಚಿಕೊಂಡು ಇರುವುದನ್ನು ರೂಢಿಸಿಕೊಂಡಿದ್ದಾರೆ.   ನಾವು ಆರಿಸಿ ಕಳುಹಿಸಿದ ಜನ ನಾಯಕರು ಬರೀ ಒಣ ರಾಜಕೀಯ ಚುಟವಟಿಕೆಗಳಲ್ಲೇ ಮಗ್ನರಾಗಿರುವುದನ್ನು ಕಂಡು ಕನ್ನಡಿಗರು ನಿಜಕ್ಕೂ ನೊಂದು ಹೋಗಿದ್ದಾರೆ. ಅವರ ಸಹನೆಯ ಕಟ್ಟೆ ಒಡೆಯುವ ಮುನ್ನ ರಾಜಕಾರಣಿಗಳು ಎಚ್ಚರಗೊಳ್ಳುವುದು ಒಳ್ಳೆಯದು.

ನಮ್ಮ ಬೇಡಿಕೆ ಇಷ್ಟೇ ಕೇಂದ್ರ ಸರ್ಕಾರ ರೂಪಿಸುವ ಯಾವುದೇ ಅಭಿವೃದ್ಧಿ ಕಾರ್ಯಗಳು ಕರ್ನಾಟಕವನ್ನು ಒಳಗೊಂಡಿರಬೇಕು. ವಿಶೇಷವಾಗಿ ರಾಜ್ಯ ರಾಜಧಾನಿ ಬೆಂಗಳೂರು ಅಂತಾರಾಷ್ಟ್ರೀಯ ಭೂಪಟದಲ್ಲಿ ಸ್ಥಾನ ಪಡೆದಿರುವುದು ಇಲ್ಲಿನ ಜನರ ಮನೋಬಲ ಮತ್ತು ಆತ್ಮಬಲಗಳಿಂದ. ಇದನ್ನು ಕೇಂದ್ರ ಗುರುತಿಸಬೇಕು. ಬೆಂಗಳೂರಿಗೆ ಆದ್ಯತೆ ನೀಡಬೇಕು.

ಬೆಂಗಳೂರನ್ನೂ ಸೇರಿಸಬಹುದಿತ್ತು:

ಜಪಾನ್‍ನ ತಂತ್ರಜ್ಞಾನ , ಯಂತ್ರೋಪಕರಣಗಳು ಮತ್ತು ಕಾರ್ಯ ನೀತಿಗಳನ್ನು ಬಳಸಿಕೊಂಡು ಸಿದ್ದವಾಗುತ್ತಿರುವ ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲನ್ನು ಮುಂಬೈಯಿಂದ ಬೆಂಗಳೂರು ಮತ್ತು ಚೆನ್ನೈವರೆಗೂ ಇದೇ ಹಂತದಲ್ಲೇ ವಿಸ್ತರಿಸಬಹುದಿತ್ತು.  ಮೂಲಕ ಅಹದಾಬಾದ್ ತಲುಪುವಂತೆ ಮಾರ್ಗವನ್ನು ರೂಪಿಸಬಹುದಿತ್ತು. ಒಂದು ವೇಳೆ ಮುಂದುವರೆದ ಯೋಜನೆಗಳಲ್ಲಿ ಕರ್ನಾಟಕವೂ ಸೇರಬಹುದು. ಆದರೂ ಅದು ಸದ್ಯಕ್ಕೆ ಅಗುವ ಕೆಲಸವಲ್ಲ. ಇದು ಕರ್ನಾಟಕದಲ್ಲಿ ಐಟಿಬಿಟಿ ಸೇರಿದಂತೆ ವಿವಿಧ ಉದ್ಯಮಗಳು ಉಚ್ರಾಯ ಸ್ಥಿತಿ ತಲುಪುತ್ತಿರುವ ಸುಸಮಯ. ಈ ಸಂದರ್ಭದಲ್ಲಿ ಇಂತಹ ಯೋಜನೆಗಳು ಕಾರ್ಯರೂಪಕ್ಕೆ ಬಂದರೆ ಅದರಿಂದ ಇಡೀ ದೇಶದ ಜನತೆಗೆ ಉಪಯೋಗವಾಗಬಲ್ಲದು.   ಮುಂದೆ ಇನ್ನು 20 ವರ್ಷಗಳಲ್ಲಿ ಈ ಯೋಜನೆ ಬೆಂಗಳೂರಿಗೆ ಬರುತ್ತದೆ ಎಂದೇ ಇಟ್ಟುಕೊಂಡರೂ ಪ್ರಸಕ್ತ ಆರ್ಥಿಕ ಅಭಿವೃದ್ದಿಯನ್ನು ಇನ್ನು ಹೆಚ್ಚಿನ ಮಟ್ಟಕ್ಕೆ ಕೊಂಡೊಯ್ಯುವ ಅವಕಾಶದಿಂದ ಕನ್ನಡಿಗರು ವಂಚಿತರಾಗುವುದಿಲ್ಲವೇ?

Bullet-Train--02

ಯುಪಿಎ ಅವಧಿಯಲ್ಲಿ :

ವಾಸ್ತವವಾಗಿ ಈ ಯೋಜನೆ ರೂಪುರೇಷೆಗಳು ಸಿದ್ದವಾಗಿದ್ದು , ಯುಪಿಎ ಸರ್ಕಾರದ 2ನೇ ಅವಧಿಯಲ್ಲಿ. 2009-10ರಲ್ಲಿ ಚರ್ಚಿತವಾದ ಈ ಯೋಜನೆ 2013ರಲ್ಲಿ ಒಂದು ನಿರ್ದಿಷ್ಟ ರೂಪ ಪಡೆದಿತ್ತು. ಆಗಲೇ ಜಪಾನ್ ಮತ್ತು ಭಾರತ ಸರ್ಕಾರಗಳ ನಡುವೆ ಒಪ್ಪಂದವೂ ಆಗಿತ್ತು. ಈ ಯೋಜನೆಗೆ ಫ್ರಾನ್ಸ್ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಯೋಜನೆ ರೂಪಿಸಲಾಗಿತ್ತು.  ಆದರೆ ಅದು ಆಗ ನೆನಗುದಿಗೆ ಬಿದ್ದಿತ್ತು. ನಂತರ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಮತ್ತೆ ಅದಕ್ಕೆ ಚಾಲನೆ ದೊರೆತು ಈಗ ಅದು ಕಾರ್ಯಗತಗೊಳ್ಳುತ್ತಿದೆ.   ಈಗಲಾದರೂ ಕೇಂದ್ರ ಸರ್ಕಾರ ಕರ್ನಾಟಕ ಬಗ್ಗೆಗಿನ ಈ ನಿಕೃಷ್ಟ ಭಾವನೆಯನ್ನು ತೊರೆದು ಅಭಿವೃದ್ದಿ ಯೋಜನೆಗಳಿಗೆ ಕರ್ನಾಟಕವನ್ನು ಸೇರಿಸಿಕೊಂಡು ಕನ್ನಡಿಗರ ವಿಶ್ವಾಸವನ್ನು ಗಳಿಸಿಕೊಳ್ಳಬೇಕು.

ಕೇಂದ್ರ ಸರ್ಕಾರದ ಅಸ್ತಿತ್ವಕ್ಕೆ ಕರ್ನಾಟಕ ಮತ್ತು ಕರ್ನಾಟಕದ ಸಂಪನ್ಮೂಲಗಳು ಹಾಗೂ ಕನ್ನಡಿಗರು ಎಷ್ಟು ಅನಿವಾರ್ಯ ಎಂಬುದು ಕಳೆದ 70 ವರ್ಷಗಳಿಂದಲೂ ಎಲ್ಲರಿಗೂ ತಿಳಿದಿರುವ ವಿಷಯ. ಕರ್ನಾಟಕವನ್ನು ಹೊರತುಪಡಿಸಿ ದಕ್ಷಿಣದ ಇತರ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿದ್ದು ಆ ಪಕ್ಷಗಳ ಓಲೈಕೆಗಾಗಿ ಕೇಂದ್ರ ಸರ್ಕಾರ ಸಾಕಷ್ಟು ಗಮನಹರಿಸುತ್ತಿದೆ. ಆದರೆ ಇಲ್ಲಿ ರಾಷ್ಟ್ರೀಯ ಪಕ್ಷ ಆಡಳಿತದಲ್ಲಿರುವುದರಿಂದ ದೆಹಲಿ ನಾಯಕರು ಎಲ್ಲವನ್ನೂ ರಾಜಕೀಯ ದೃಷ್ಟಿಯಿಂದಲೇ ನೋಡುವುದನ್ನು ಬಿಡಬೇಕು. ಕರ್ನಾಟಕಕ್ಕೂ ಮನ್ನಣೆ ನೀಡಬೇಕು. ಕನ್ನಡಿಗರನ್ನು ನಿರ್ಲಕ್ಷಿಸಿದರೆ ಏನಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳದಿದ್ದರೆ ಅದಕ್ಕಾಗಿ ರಾಷ್ಟ್ರೀಯ ಪಕ್ಷಗಳು ಭಾರೀ ಬೆಲೆ ತೆರೆಬೇಕಾಗುತ್ತದೆ.

ಕೊನೆ ಮಾತು:

ಪ್ರಧಾನಿ ಮೋದಿಯವರೇ… ಐಟಿ-ಬಿಟಿ ತವರು, ವೈಮಾನಿಕ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ, ಕಬ್ಬಿಣ, ಚಿನ್ನದ ಅದಿರುಗಳನ್ನು ತನ್ನ ಗರ್ಭದಲ್ಲಿ ತುಂಬಿಕೊಂಡು ರಾಷ್ಟ್ರ ಪ್ರಗತಿಯ ಮುಂಚೂಣಿಯಲ್ಲಿರುವ ಕರ್ನಾಟಕವನ್ನು ಮರೆಯದಿರಿ. ಕೇವಲ ವೋಟಿನ ರಾಜಕೀಯ ಮಾಡಿ ಜನರನ್ನು ಮರುಳು ಮಾಡುವ ತಂತ್ರ ಬಹಳ ದಿನ ಉಳಿಯುವುದಿಲ್ಲ. ಇದನ್ನು ಅರ್ಥ ಮಾಡಿಕೊಂಡು ಜನರ ಭಾವನೆಗಳಿಗೆ ಸ್ಪಂದಿಸುವುದನ್ನು ರೂಢಿಸಿಕೊಳ್ಳಿ. ಕರ್ನಾಟಕದ ಜನ ನಿಮ್ಮ ಮೇಲಿಟ್ಟಿರುವ ವಿಶ್ವಾಸವನ್ನು ದುರುಪಯೋಗ ಮಾಡಿಕೊಳ್ಳಬೇಡಿ… ಇದು ನಿಮ್ಮಲ್ಲಿ ಕನ್ನಡಿಗರ ಮನವಿ.


ಬೆಂಗಳೂರು-ದೆಹಲಿ ಬುಲೆಟ್ ಟ್ರೈನ್ ಬರಲಿ : 

Yadiyuಬೆಂಗಳೂರು, ಸೆ.16- ಮಾಹಿತಿ ತಂತ್ರಜ್ಞಾನದ ರಾಜಧಾನಿ ಬೆಂಗಳೂರು ಹಾಗೂ ರಾಷ್ಟ್ರ ರಾಜಧಾನಿ ದೆಹಲಿ ನಡುವೆ ಬುಲೆಟ್ ಟ್ರೈನ್ ಯೋಜನೆ ಅನುಷ್ಠಾನಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತ್ವರಿತ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಬುಲೆಟ್ ಟ್ರೈನ್ ಯೋಜನೆಯಿಂದ ಮೂಲಭೂತ ಸೌಕರ್ಯಗಳ ಅಭಿವೃದ್ದಿ ಜೊತೆಗೆ ಭಾರೀ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯಸರ್ಕಾರಗಳ ಸಹಭಾಗಿತ್ವದಲ್ಲಿ ಈ ಯೋಜನೆ ಅನುಷ್ಟಾನವಾಗಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಬೆಂಗಳೂರು ವಿಶ್ವದ ಭೂಪಟದಲ್ಲಿ ಸಿಲಿಕಾನ್ ಸಿಟಿಯೆಂದೇ ಗುರುತಿಸಿಕೊಂಡಿದೆ. ಅಂತಾರಾಷ್ಟ್ರೀಯ ಮತ್ತು ರಾಷ್ಟ್ರ ಮಟ್ಟದ ಅನೇಕ ಕಂಪೆನಿಗಳು ಈ ಮಹಾನಗರದಲ್ಲಿ ಬಂಡವಾಳ ಹೂಡಲು ಮುಂದೆ ಬರುತ್ತವೆ. ಇಂತಹ ನಗರಕ್ಕೆ ಬುಲೆಟ್ ಟ್ರೈನ್ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ. ರಾಷ್ಟ್ರದ ರಾಜಧಾನಿಯಿಂದ ಬೆಂಗಳೂರು ಸೇರಿದಂತೆ ಬೇರೆ ಬೇರೆ ರಾಜ್ಯದ ರಾಜಧಾನಿಗಳಿಗೂ ಈ ಯೋಜನೆ ಅನುಷ್ಠಾನಗೊಳಿಸುವುದರಿಂದ ನಾನಾ ರೀತಿಯ ಅನುಕೂಲವಾಗಲಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಕೇಂದ್ರ ಮತ್ತು ರಾಜ್ಯಸರ್ಕಾರಗಳ ಸಹಭಾಗಿತ್ವದಲ್ಲಿ ಬುಲೆಟ್ ಟ್ರೈನ್ ಯೋಜನೆ ಆರಂಭಿಸಲು ಮುಂದಾಗಬೇಕೆಂದು ಯಡಿಯೂರಪ್ಪ ಮನವಿ ಮಾಡಿದ್ದಾರೆ ಎಂದರು. ಇದೀಗ ಸ್ವಾತಂತ್ರ್ಯ ಭಾರತದ ನಂತರ ದೇಶದ ಜನತೆಯ ಬಹುದಿನಗಳ ಕನಸಾಗಿದ್ದ ಬುಲೆಟ್ ಟ್ರೈನ್ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಿರುವುದು ಭಾರತೀಯರು ಎಲ್ಲರೂ ಹೆಮ್ಮೆ ಪಡುವ ವಿಷಯವಾಗಿದೆ. ಇದು ಕೇವಲ ಎರಡು ರಾಜ್ಯಗಳಿಗೆ ಮಾತ್ರ ಸೀಮಿತವಾಗದೆ ಎಲ್ಲಾ ರಾಜ್ಯಗಳಿಗೂ ಇದರ ಪ್ರಯೋಜನ ಸಿಗಬೇಕು ಎಂದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿಗೆ ಬುಲೆಟ್ ಟ್ರೈನ್ ಯೋಜನೆ ಆರಂಭಿಸಲು ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ ಕೊಂಡೊಯ್ದರೆ ಬಿಜೆಪಿ ಅದಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಪತ್ರಿಕಾಪ್ರಕಟಣೆಯಲ್ಲಿ ಯಡಿಯೂರಪ್ಪ ತಿಳಿಸಿದ್ದಾರೆ.


ಬುಲೆಟ್ ಅಲ್ಲ ಬ್ಯಾಲೆಟ್ :

sfasfafgನವದೆಹಲಿ, ಸೆ.16- ಇದು ಬುಲೆಟ್ ಟ್ರೈನಲ್ಲ. ಪಕ್ಕಾ ಬ್ಯಾಲೆಟ್ ಟ್ರೈನ್. ಗುಜರಾತ್ ರಾಜಧಾನಿ ಅಹಮದಾಬಾದ್‍ನಲ್ಲಿ ಇನ್ನು ಮೆಟ್ರೋ ಟ್ರೈನ್ ಇಲ್ಲ. ಆಗಲೇ ಪ್ರಧಾನಿ ನರೇಂದ್ರಮೋದಿಯವರು ಬುಲೆಟ್ ಟ್ರೈನ್ ಬಿಡುತ್ತಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಟೀಕಿಸಿದರು.  ಈ ಸಂಜೆಯೊಂದಿಗೆ ಮಾತನಾಡಿದ ಅವರು, ಅಹಮದಾಬಾದ್‍ನಲ್ಲಿ 2013ರಲ್ಲಿ ಮೆಟ್ರೋ ಕಾಮಗಾರಿ ಪ್ರಾರಂಭವಾಗಿದೆ. ಆಗಲೇ ಮುಂಬೈನಿಂದ ಅಹಮದಾಬಾದ್‍ಗೆ ಬುಲೆಟ್ ಟ್ರೈನ್‍ಗೆ ಶಂಕುಸ್ಥಾಪನೆ ಮಾಡಲಾಗಿದೆ. ಅದು ಪಕ್ಕಾ ಬ್ಯಾಲೆಟ್ ಟ್ರೈನ್ ಆಗಿದೆ.

2014ರ ಪ್ರಥಮ ಬಜೆಟ್‍ನಲ್ಲೇ ಮೋದಿಯವರು ಬುಲೆಟ್ ಟ್ರೈನ್ ಪ್ರಸ್ತಾಪ ಮಾಡಿದ್ದರು. ಆದರೆ, ಮೂರು ವರ್ಷ ನಾಲ್ಕು ತಿಂಗಳ ನಂತರ ಗುಜರಾತ್ ಚುನಾವಣೆ. ಇನ್ನು ಕೆಲವೇ ತಿಂಗಳು ಇರುವ ಸಂದರ್ಭದಲ್ಲಿ ಬುಲೆಟ್‍ಟ್ರೈನ್‍ಗೆ ಶಂಕುಸ್ಥಾಪನೆ ಮಾಡಿದ್ದಾರೆ.  ಇವರ ಯೋಜನೆಗಳೆಲ್ಲವೂ 2022ಕ್ಕೆ ಮುಗಿಯುತ್ತವೆ ಎಂದು ದೂರದ ಬೆಟ್ಟವನ್ನು ಸೃಷ್ಟಿಸುತ್ತಿದ್ದಾರೆ. ಬುಲೆಟ್ ಟ್ರೈನ್ ಹಣವಂತರಿಗೆ ಮಾತ್ರ ಸಿಗುತ್ತದೆ. ಜನಸಾಮಾನ್ಯರ ಕೈಗೆಟಕುವುದಿಲ್ಲ. ನಮ್ಮ ದೇಶದಲ್ಲಿ ಇನ್ನು ನ್ಯಾರೋಗೇಜ್, ಮೀಟರ್‍ಗೇಜ್ ಹಳಿಗಳಿವೆ. ಅವುಗಳನ್ನು ಬ್ರಾಡ್‍ಗೇಜ್ ಆಗಿ ಬದಲಿಸಬೇಕು. ಜಾಫರ್ ಶರೀಫ್ ಅವರು ರೈಲ್ವೆ ಸಚಿವರಾಗಿದ್ದಾಗ ಇಂತಹ ಒಂದು ಮಹತ್ಕಾರ್ಯ ಮಾಡಿದ್ದರು.

ಸಾಮಾನ್ಯ ಜನರಿಗೆ ರೈಲ್ವೆ ಸೌಲಭ್ಯಗಳನ್ನು ಕೈಗೆಟಕುವ ದರದಲ್ಲಿ ಒದಗಿಸಬೇಕು. ಅಭಿವೃದ್ಧಿಗೆ ನಮ್ಮ ವಿರುದ್ಧವಿಲ್ಲ. ಹೊಸ ಯೋಜನೆಗಳಿಗೆ ತಕರಾರಿಲ್ಲ. ಆದರೆ, ನಮ್ಮಲ್ಲಿರುವ ನ್ಯೂನ್ಯತೆಗಳನ್ನು ಮೊದಲು ಸರಿಪಡಿಸಿಕೊಳ್ಳಬೇಕಾಗಿರುವುದು ನಮ್ಮ ಕರ್ತವ್ಯ. ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಿ ಜನರ ಹಣವನ್ನು ಹಾಳು ಮಾಡುವುದು ಸಮಂಜಸವಲ್ಲ ಎಂದರು.


ನಿರ್ಲಕ್ಷ್ಯ ದುರದೃಷ್ಟ

nilaಇಡೀ ದೇಶದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ನಗರ ಎಂಬ ಖ್ಯಾತಿ ಪಡೆದಿರುವ ಬೆಂಗಳೂರಿಗೆ ಮೊದಲ ಆದ್ಯತೆ ನೀಡಬೇಕಾದುದು ಕೇಂದ್ರ ಸರ್ಕಾರದ ಜವಾಬ್ದಾರಿ. ಆದರೆ, ಸರ್ಕಾರಗಳ ಇಚ್ಛಾಶಕ್ತಿ ಕೊರತೆಯಿಂದ ಜನರು ಪರಿತಪಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಮಾತ್ರ ದುರದೃಷ್ಟಕರ.
ಪ್ರಸ್ತುತ ಬೆಂಗಳೂರು ನಗರದ ಬೆಳವಣಿಗೆ ನೋಡಿದರೆ ಮುಂದಿನ ದಿನಗಳಲ್ಲಿ ಇಲ್ಲಿ ಭೂಮಿ ಬೆಲೆಯೂ ಗಗನಕ್ಕೇರಲಿದೆ. ಇದನ್ನು ಅರಿತು ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಿ ದುಡಿಯುವ ಕೈಗಳಿಗೆ ಕೆಲಸ ನೀಡುವಂತಹ ತ್ವರಿತಗತಿ ಯೋಜನೆಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳಬೇಕು. ಇದರಲ್ಲಿ ಬುಲೆಟ್ ಟ್ರೈನ್ ಬದಲಿಗೆ ವೇಗದ ರೈಲ್ವೆ ಸಂಪರ್ಕ ಕೊಟ್ಟರೂ ಅದು ದೊಡ್ಡ ಕೆಲಸವೇ. ಕಳೆದ ಹಲವಾರು ವರ್ಷಗಳಿಂದ ಕರ್ನಾಟಕವನ್ನು ಕಡೆಗಣಿಸಲಾಗುತ್ತಿದೆ. ಕೇಂದ್ರದ ಮುಂದೆ ಬೇಡಿ ಪಡೆಯುವಂತಹ ಪರಿಸ್ಥಿತಿ ಎದುರಾಗಿರುವುದು ದುರದೃಷ್ಟಕರ ಸಂಗತಿ.
ಹನುಮಂತೇಗೌಡ, ಕಾಸಿಯಾ ಅಧ್ಯಕ್ಷ


ಆರ್ಥಿಕ ಸುಸ್ಥಿರತೆ ಇಲ್ಲ : 

Parameshwar--01ಬೆಂಗಳೂರು, ಸೆ.16-ಬುಲೆಟ್ ಟ್ರೈನ್ ದುಬಾರಿ ವೆಚ್ಚದ್ದಾಗಿದ್ದು, ಅಷ್ಟು ಮಟ್ಟದ ಆರ್ಥಿಕ ಧಾರಣೆ ಸಹಿಸಿಕೊಳ್ಳುವಷ್ಟು ಸಾಮಥ್ರ್ಯ ನಮ್ಮ ದೇಶಕ್ಕಿದ್ದಂತಿಲ್ಲ. ಈ ವೆಚ್ಚದಲ್ಲಿ 10 ಏರೋಪ್ಲೇನ್‍ಗಳನ್ನು ಖರೀದಿಸಬಹುದಿತ್ತು ಎಂದು ಬುಲೆಟ್ ಟ್ರೈನ್ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಯೋಜನೆ ಬಗ್ಗೆ ಆರ್ಥಿಕ ಸುಸ್ಥಿರತೆ ಇಲ್ಲ ಮತ್ತು ಪ್ರಾದೇಶಿಕವಾಗಿ ಅನ್ಯಾಯವಾಗಿರುವುದಂತೂ ಸತ್ಯ. ಚೆನ್ನೈ ಮತ್ತು ಬೆಂಗಳೂರಿಗೆ ಯೋಜನೆಯನ್ನು ಮಾಡಬಹುದಿತ್ತು. ದಕ್ಷಿಣ ರಾಜ್ಯಗಳಿಗೆ ಮಲತಾಯಿ ಧೋರಣೆ ಮಾಡಲಾಗಿದೆ. ಯೋಜನೆಯಲ್ಲಿ ಪ್ರಾದೇಶಿಕ ತಾರತಮ್ಯ ಕಂಡು ಬಂದಿದೆ. ಎಷ್ಟು ಜನ ಈ ರೈಲಿನಲ್ಲಿ ಓಡಾಡುತ್ತಾರೆ, ಎಷ್ಟು ವರ್ಷದಲ್ಲಿ ಮುಗಿಯುತ್ತದೆ. ಎಷ್ಟು ವೆಚ್ಚವಾಗುತ್ತದೆ ಎಂಬ ಸ್ಪಷ್ಟ ಮಾಹಿತಿ ಸಾರ್ವಜನಿಕವಾಗಿ ಇಲ್ಲ ಎಂದು ಪರಮೇಶ್ವರ್ ಹೇಳಿದರು.


ಇದು ಚುನಾವಣಾ ಗಿಮಿಕ್ : 

khargeಅಹಮದಾಬಾದ್ ನಗರ ನಮ್ಮ ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್‍ಗಿಂತಲೂ ದೊಡ್ಡ ವಾಣಿಜ್ಯ ನಗರವೇನಲ್ಲ. ಆದರೆ, ಗುಜರಾತ್‍ನಲ್ಲಿ ಚುನಾವಣೆ ಹತ್ತಿರ ಬರುತ್ತಿದೆ ಎಂಬ ಒಂದೇ ಕಾರಣಕ್ಕಾಗಿ ಅಲ್ಲಿಗೆ ಬುಲೆಟ್ ಟ್ರೈನ್ ಯೋಜನೆ ರೂಪಿಸಲಾಗಿದೆ. ಇದು ಕೇವಲ ಚುನಾವಣೆ ಗಿಮಿಕ್ ಅಷ್ಟೇ. ಇದರಿಂದ ಯಾವ ಪ್ರಯೋಜನವೂ ಇಲ್ಲ. ಬುಲೆಟ್ ಟ್ರೈನ್‍ನ ಒಂದು ಕಿಲೋ ಮೀಟರ್‍ಗೆ 200 ಕೋಟಿ ರೂ. ವೆಚ್ಚವಾಗುತ್ತದೆ. ಜತೆಗೆ ಭೂ ಸ್ವಾಧೀನ ಮತ್ತಿತರ ವೆಚ್ಚಗಳಿವೆ.
ಆದರೆ, ಇದರಿಂದ ಎಷ್ಟು ಉದ್ಯೋಗ ಸೃಷ್ಟಿಯಾಗುತ್ತವೆ ಎಂಬ ಬಗ್ಗೆ ನಿಖರತೆ ಇಲ್ಲ. ಹಗ್ಗದ ಜನಪ್ರಿಯತೆಗಾಗಿ ಇಂತಹ ದುಬಾರಿ ಯೋಜನೆಗಳನ್ನು ರೂಪಿಸುವ ಬದಲು ವೈಜ್ಞಾನಿಕವಾಗಿ ಕಡಿಮೆ ವೆಚ್ಚದ ಮತ್ತು ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ರೂಪಿಸಬೇಕು. ಆದರೆ, ಮೋದಿ ಸರ್ಕಾರ ಗುಜರಾತ್ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಇಂತಹ ಯೋಜನೆಗಳಿಗೆ ಕೈ ಹಾಕಿದೆ.

ದಕ್ಷಿಣದ ರಾಜ್ಯಗಳ ಬಗ್ಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಬೇಸರದ ವಿಷಯ. 2013ರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ರೈಲ್ವೆ ಸಚಿವರಾಗಿದ್ದಾಗ ಬುಲೆಟ್ ಟ್ರೈನ್ ಯೋಜನೆ ಜಾರಿಗೊಳಿಸುವ ಬಗ್ಗೆ ಜಪಾನ್‍ಗೆ ತಾಂತ್ರಿಕ ಅಧ್ಯಯನ ಸಮಿತಿಯೊಂದನ್ನು ಕಳುಹಿಸಿದ್ದರು. ದುಬಾರಿ ವೆಚ್ಚವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಆ ಪ್ರಸ್ತಾಪವನ್ನು ತಿರಸ್ಕರಿಸಲಾಗಿತ್ತು. ಯೋಜನಾ ವೆಚ್ಚ ಕಡಿಮೆ ಮಾಡಿ ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ರೈಲ್ವೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಮಲ್ಲಿಕಾರ್ಜು ಖರ್ಗೆ ಅವರು ಚಿಂತನೆ ನಡೆಸಿದ್ದರು.

ಸರ್ಕಾರ ಬದಲಾಯಿತು. ಮೋದಿಯವರು ಪ್ರಧಾನಿಯಾದ ಮೇಲೆ ಯಾವುದೇ ವೈಜ್ಞಾನಿಕ ತಳಹದಿ ಇಲ್ಲದೆ ಬುಲೆಟ್ ಟ್ರೈನ್ ಯೋಜನೆಗೆ ಕೇವಲ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಚಾಲನೆ ನೀಡಲಾಗಿದೆ.  ಸಂಪನ್ಮೂಲ ನಗರಗಳಾದ ಹೈದರಾಬಾದ್, ಚೆನ್ನೈ, ಬೆಂಗಳೂರು ಮುಂತಾದ ಸಿಟಿಗಳನ್ನೆಲ್ಲ ನಿರ್ಲಕ್ಷ್ಯ ಮಾಡಿ ಅಹಮದಾಬಾದ್, ಮುಬೈ ಮಾತ್ರ ಕೇಂದ್ರೀಕರಿಸಿ ಈ ಯೋಜನೆ ಜಾರಿಗೊಳಿಸಲಾಗಿದೆ. ಇದರ ಕಾರ್ಯಸಾಧು ಎಷ್ಟರ ಮಟ್ಟಿಗೆ ಎಂಬುದಕ್ಕೆ ವಿವರಗಳಿಲ್ಲ. ಕೇಂದ್ರ ಸರ್ಕಾರ ಗಿಮಿಕ್ ಮಾಡುತ್ತಿದೆ ಎಂದು ಹೇಳಿದರು.
– ಪ್ರಿಯಾಂಕ್ ಖರ್ಗೆ ಐಟಿ-ಬಿಟಿ, ಪ್ರವಾಸೋದ್ಯಮ ಸಚಿವರು

ಸ್ವಾರ್ಥಕ್ಕೆ ಬಳಕೆ : 

Byreಬೆಂಗಳೂರು, ಸೆ.16- ಬುಲೆಟ್ ಟ್ರೈನ್ ಯೋಜನೆಯಲ್ಲಿ ಪ್ರಧಾನಿ ನರೇಂದ್ರಮೋದಿಯವರ ರಾಜಕೀಯ ಸ್ವಾರ್ಥವಿದೆ. ಗುಜರಾತ್‍ನವರು ಎಂಬ ಕಾರಣಕ್ಕೆ ವೈಜ್ಞಾನಿಕ ಚಿಂತನೆಗಳನ್ನು ನಡೆಸದೆ ಮುಂಬೈ ಮತ್ತು ಅಹಮದಾಬಾದ್‍ಗೆ ಬುಲೆಟ್ ಟ್ರೈನ್ ಯೋಜನೆಗೆ ಶಂಕುಸ್ಥಾಪನೆ ಮಾಡಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಚಿವ ದಿನೇಶ್ ಗುಂಡೂ ರಾವ್ ತಿಳಿಸಿದ್ದಾರೆ.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ಮುಂಬೈ-ಚೆನ್ನೈ- ಪುಣೆ ಸಂಪರ್ಕ ಕಲ್ಪಿಸುವ ಬುಲೆಟ್ ಟ್ರೈನ್ ಯೋಜನೆ ಜಾರಿಗೊಳಿಸಿದರೆ ದೇಶದ ಆರ್ಥಿಕ ಅಭಿವೃದ್ಧಿಗೆ ಮೈಲುಗಲ್ಲಾಗುತ್ತಿತ್ತು. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಎಕನಾಮಿಕ್ ಮತ್ತು ಇಂಡಸ್ಟ್ರೀಸ್ ಕಾರಿಡಾರ್ ಯೋಜನೆ ಜಾರಿಗೊಳಿಸಿತ್ತು. ಈ ಮಾರ್ಗ ಹೆಚ್ಚು ಉಪಯೋಗವಾಗುತ್ತಿತ್ತು. ಇದಾವುದನ್ನೂ ಪರಿಗಣಿಸದೆ ತೆರಿಗೆದಾರರ ಹಣವನ್ನು ಪೋಲು ಮಾಡಲಾಗುತ್ತಿದೆ. ಮುಂಬೈ-ಅಹಮದಾಬಾದ್ ಬುಲೆಟ್ ಟ್ರೈನ್ ಯೋಜನೆಯಿಂದ ದೇಶದ ಆರ್ಥಿಕ ಮೇಲೆ ಅಷ್ಟು ಪರಿಣಾಮ ಬೀರುವ ಸಾಧ್ಯತೆ ಇಲ್ಲ. ಇದು ಚುನಾವಣಾ ದೃಷ್ಟಿಕೋನದ ಟ್ರೈನ್ ಆಗಿದೆ ಎಂದು ಅವರು ಹೇಳಿದ್ದಾರೆ.


ಆಲೋಚನೆ ಮಾಡಬೇಕಿತ್ತು : 
adadadadದೇಶದಲ್ಲಿ ಇದೇ ಮೊದಲ ಬಾರಿಗೆ ಮಹತ್ವಾಕಾಂಕ್ಷೆಯ ಬುಲೆಟ್ ಟ್ರೈನ್ ಯೋಜನೆ ಜಾರಿಗೊಳ್ಳುತ್ತಿದೆ. ಅದು ಒಳ್ಳೆಯ ಬೆಳವಣಿಗೆ. ಇದು ದೊಡ್ಡ ಮೊತ್ತದ ಯೋಜನೆಯಾಗಿರುವುದರಿಂದ ಸರ್ಕಾರಕ್ಕೆ ಸ್ವಲ್ಪ ಮಟ್ಟಿಗೆ ಸಹಕಾರ ನೀಡುವುದು ಅಗತ್ಯವಾಗುತ್ತದೆ.  ಆದರೆ, ಮುಂದಿನ ದಿನಗಳಲ್ಲಿ ಕರ್ನಾಟಕವನ್ನು ಪರಿಗಣಿಸುವುದು ಅಗತ್ಯವಾಗಿದೆ.   ಬೆಂಗಳೂರಿಗೂ ಬುಲೆಟ್ ಟ್ರೈನ್ ಸಂಪರ್ಕ ಕಲ್ಪಿಸಬೇಕು. ಅದರಲ್ಲಿ ಎರಡು ಮಾತಿಲ್ಲ. ನಮಗೂ ಇದರ ಬಗ್ಗೆ ಕನಸಿದೆ. ಅದನ್ನು ಸಾಕಾರಗೊಳಿಸುವ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದೆ.

ಮುಂದಿನ ದಿನಗಳಲ್ಲಿ ಉಪಯೋಗವಾಗುವಂತಹ ಯೋಜನೆಗಳನ್ನು ತಂದರೆ ನಮಗೂ ಸಂತಸ, ಜನತೆಗೂ ಖುಷಿ. ಮೋದಿಯವರು ಗುಜರಾತ್‍ನವರಾದ್ದರಿಂದ ಸ್ವಾಭಾವಿಕವಾಗಿ ಅವರು ರಾಜ್ಯದಲ್ಲಿ ಬುಲೆಟ್ ಟ್ರೈನ್ ಯೋಜನೆಯನ್ನು ಆರಂಭಿಸಿದ್ದಾರೆ. ದೇಶದ ಇತರೆ ರಾಜ್ಯಗಳನ್ನೂ ಕೂಡ ಸಮಾನವಾಗಿ ಕಾಣಬೇಕಾಗಿದೆ ಎಂದು ಎಫ್‍ಕೆಸಿಸಿಐ ಅಧ್ಯಕ್ಷ ರವಿ ಅವರು ತಿಳಿಸಿದ್ದಾರೆ.


ಪ್ರತಿವರ್ಷ 4,500 ಕೋಟಿ  ಕಟ್ಟಬೇಕು : 

ಬೆಂಗಳೂರು, ಸೆ.16- ಬುಲೆಟ್ ಟ್ರೈನ್ ಕಥೆಯನ್ನೊಮ್ಮೆ ಕೇಳಿ… ಒಂದು ನಿಮಿಷ ಓದಿ… 50 ವರ್ಷದಲ್ಲಿ ನಾವು ಒಟ್ಟಾರೆ 90 ಸಾವಿರ ಕೋಟಿ ರೂ. ಸಾಲವನ್ನು ಜಪಾನ್‍ಗೆ (1% ಬಡ್ಡಿಯೊಂದಿಗೆ) ಹಿಂತಿರುಗಿಸಬೇಕು.  90 ಸಾವಿರ ಕೋಟಿ ರೂ./50 ವರ್ಷ = 4500 ಕೋಟಿ ರೂ. ಪ್ರತಿ ವರ್ಷಕ್ಕೆ. 4500 ಕೋಟಿ ರೂ./350 ದಿವಸ = 12.3 ಕೋಟಿ ರೂ. ಪ್ರತಿ ದಿನಕ್ಕೆ.  ಅಹಮದಾಬಾದ್‍ನಿಂದ ಮುಂಬೈಗೆ ವಿಮಾನಯಾನ ಟಿಕೆಟ್ ಮೊತ್ತ 1500ರೂ. ಆದರೆ ಬುಲೆಟ್ ಟ್ರೈನ್ ಯಾನದ ಟಿಕೆಟ್ ಮೊತ್ತ 2000 ಅಂತೆ.   ದಿನಕ್ಕೆ 12.3 ಕೋಟಿ ರೂ. ಗಳಿಸಲು ಪ್ರತಿನಿತ್ಯ ಅಹಮದಾಬಾದ್‍ನಿಂದ ಮುಂಬೈಗೆ, ಮುಂಬೈನಿಂದ ಅಹಮದಾಬಾದ್‍ಗೆ 61,500 ಪ್ರಯಾಣಿಕರು ನಿತ್ಯ ಪ್ರಯಾಣಿಸಬೇಕು. ಇನ್ನು ಬುಲೆಟ್ ಟ್ರೈನ್ ಓಡಿಸುವ ಖರ್ಚು-ವೆಚ್ಚದ ಲೆಕ್ಕಾಚಾರ ಇಲ್ಲ.
– ವಾಟ್ಸಾಪ್ ಸಂದೇಶ

(ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕೆಳಗಿನ ಫೇಸಬುಕ್ ಕಾಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ )

Facebook Comments

Sri Raghav

Admin