ರಷ್ಯಾ ಕೊರೊನಾ ಲಸಿಕೆ ಸುರಕ್ಷತೆ ಬಗ್ಗೆ ಹೆಚ್ಚಿದ ಅನುಮಾನ ಮತ್ತು ಗೊಂದಲ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.12- ಕಿಲ್ಲರ್ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ರಷ್ಯಾ ಅಭಿವೃದ್ಧಿಗೊಳಿಸಿರುವ ವಿಶ್ವದ ಪ್ರಪ್ರಥಮ ಲಸಿಕೆ ಸ್ಪುಟ್ನಿಕ್ ಕಾರ್ಯಕ್ಷಮತೆ ಮತ್ತು ಸುರಕ್ಷತೆ ಬಗ್ಗೆ ವ್ಯಾಪಕ ಅನುಮಾನ ಮತ್ತು ಗೊಂದಲ ವ್ಯಕ್ತವಾಗಿದೆ.

ಭಾರತ ಸೇರಿದಂತೆ ಅನೇಕ ದೇಶಗಳು ರಷ್ಯಾದ ಕೋವಿಡ್-19 ವೈರಸ್ ನಿಗ್ರಹ ಲಸಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ. ಸಮರ್ಪಕ ಪ್ರಯೋಗ ಮತ್ತು ದತ್ತಾಂಶ ಮಾಹಿತಿ ಇಲ್ಲದೆ ರಷ್ಯಾ ಲಸಿಕೆಯ ಸುರಕ್ಷತೆ ಮತ್ತು ಕಾರ್ಯಕ್ಷಮತೆ ಬಗ್ಗೆ ನಂಬುವುದು ಕಷ್ಟ ಎಂದು ವಿವಿಧ ಸಂಶೋಧನಾ ಸಂಸ್ಥೆಗಳು ಮತ್ತು ವೈದ್ಯಕೀಯ ಅಧ್ಯಯನ ತಂಡಗಳು ಹೇಳಿವೆ.

ರಷ್ಯಾ ಸಮಗ್ರ ಪರೀಕ್ಷೆ ನಡೆಸದೆ ತರಾತುರಿಯಲ್ಲಿ ಸ್ಪುಟ್ನಿಕ್ ಲಸಿಕೆಯನ್ನು ಬಿಡುಗಡೆ ಮಾಡಿದೆ. ಇದು ಎಷ್ಟರ ಮಟ್ಟಿಗೆ ರೋಗಿಗಳಿಗೆ ಸುರಕ್ಷಿತ ಎಂಬ ಬಗ್ಗೆ ಕೂಲಂಕಶ ಅಧ್ಯಯನ ನಡೆಸಲಾಗಿಲ್ಲ.

ಕ್ಲಿನಿಕಲ್ ಟ್ರಯಲ್ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ ಎಂದು ಭಾರತ ಮತ್ತು ವಿವಿಧ ದೇಶಗಳ ಸಂಶೋಧಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಸೋಂಕು ರೋಗಗಳಿಗೆ ಯಾವುದೇ ಲಸಿಕೆಯನ್ನು ಅಭಿವೃದ್ಧಿಗೊಳಿಸುವುದಕ್ಕೂ ಮುನ್ನ ಸಮಗ್ರ ಅಧ್ಯಯನ, ಸಂಶೋಧನೆ, ಪ್ರಯೋಗಗಳನ್ನು ನಡೆಸಿ ಸುರಕ್ಷಿತ ರೀತಿಯಲ್ಲಿ ಇದನ್ನು ಪರೀಕ್ಷೆಗೊಳಪಡಿಸಬೇಕು.

ಆದರೆ, ರಷ್ಯಾ ಮೂರನೆ ಹಂತದ ಕ್ಲಿನಿಕಲ್ ಟ್ರಯಲ್‍ನಲ್ಲೇ ಸ್ಪುಟ್ನಿಕ್ ಲಸಿಕೆಯನ್ನು ಬಿಡುಗಡೆಗೊಳಿಸಿರುವುದರ ಔಚಿತ್ಯವೇನು ಎಂದು ಭಾರತದ ವೈದ್ಯಕೀಯ ಕ್ಷೇತ್ರದ ಖ್ಯಾತ ಸಂಶೋಧಕರು ಪ್ರಶ್ನಿಸಿದ್ದಾರೆ.

Facebook Comments

Sri Raghav

Admin