ಕಾಶ್ಮೀರದಲ್ಲಿ ಉಗ್ರರ ದಾಳಿ ಸಂಚು ವಿಫಲ, 40 ಕೆಜಿ ಸ್ಫೋಟಕ ವಶ
ಕತುವಾ, ಸೆ.24- ಕಣಿವೆ ಪ್ರಾಂತ್ಯ ಕಾಶ್ಮೀರದಲ್ಲಿ ಭಾರೀ ವಿಧ್ವಂಸಕ ಕೃತ್ಯ ಎಸಗಲು ಪಾಕ್ ಕೃಪಾ ಪೋಷಿತ ಉಗ್ರಗಾಮಿಗಳು ನಡೆಸುತ್ತಿರುವ ನಿರಂತರ ಕುತಂತ್ರವನ್ನು ಭಾರತೀಯ ಸೇನಾ ಪಡೆ ವಿಫಲಗೊಳಿಸುತ್ತಲೇ ಇದೆ. ನಿನ್ನೆಯೂ ಕೂಡ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿದ್ದ ಉಗ್ರರ ದಾಳಿ ಸಂಚನ್ನು ಯೋಧರು ನಿಷ್ಕ್ರಿಯಗೊಳಿಸಿದ್ದಾರೆ.
ಕತುವಾದಲ್ಲಿ 40 ಕೆ.ಜಿ ಸ್ಫೋಟಕ ಸಾಮಗ್ರಿಗಳನ್ನು ಭಾರತೀಯ ಸೇನೆ ವಶಕ್ಕೆ ಪಡೆದಿದೆ. ದೇವಲ್ ಗ್ರಾಮದಲ್ಲಿ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಈ ಸಾಮಗ್ರಿಗಳು ದೊರೆತಿವೆ. ವಶಪಡಿಸಿಕೊಳ್ಳಲಾಗಿರುವ ಸ್ಫೋಟಕ ಸಾಮಗ್ರಿಗಳನ್ನು ಸ್ಥಳೀಯವಾಗಿ ತಯಾರಿಸಲಾಗಿತ್ತು.
ಇದಕ್ಕೂ ಕೆಲವೇ ಗಂಟೆಗಳ ಮುನ್ನ ಮಾತನಾಡಿದ್ದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಪಾಕಿಸ್ತಾನ ಬಾಲಾಕೋಟ್ನಲ್ಲಿ ಉಗ್ರ ನೆಲೆಗಳನ್ನು ಮರು ಸ್ಥಾಪಿಸಿದ್ದು, 500 ಭಯೋತ್ಪಾದಕರು ಒಳ ನುಸುಳಲು ಸಿದ್ಧರಾಗಿದ್ದಾರೆ ಎಂದು ಹೇಳಿದ್ದರು.
ಭಾರೀ ಸ್ಫೋಟಕವನ್ನು ವಶಪಡಿಸಿಕೊಂಡಿರುವುದರಿಂದ ಕಣಿವೆ ಪ್ರಾಂತ್ಯದಲ್ಲಿ ನಡೆಯಬಹುದಾದ ಭಾರೀ ವಿಧ್ವಂಸಕ ದಾಳಿ ತಪ್ಪಿದಂತಾಗಿದೆ. ಕಾಶ್ಮೀರದಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು ಉಗ್ರರಿಂದ ಎದುರಾಗಬಹುದಾದ ಆತಂಕದ ಪರಿಸ್ಥಿತಿಯನ್ನು ನಿಭಾಯಿಸಲು ಯೋಧರು ಸರ್ವ ಸನ್ನದ್ಧರಾಗಿದ್ದಾರೆ.