ಕೋವಿಡ್ ಲಸಿಕೆಗಿಂತ ಫೇಸ್ ಮಾಸ್ಕ್ ಹೆಚ್ಚು ಸುರಕ್ಷಿತವೇ..?!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಸೆ.17-ಕೋವಿಡ್-19 ನಿಯಂತ್ರಣ ಲಸಿಕೆಗಿಂತಲೂ ಫೇಸ್ ಮಾಸ್ಕ್ ಹೆಚ್ಚು ಸುರಕ್ಷಿತವೇ..? ಅಮೆರಿಕದ ರೋಗಗಳ ನಿಯಂತ್ರಣ ಮತ್ತು ತಡೆ ಕೇಂದ್ರಗಳ (ಸಿಡಿಸಿ) ನಿರ್ದೇಶಕ ರಾಬರ್ಟ್ ರೆಡ್‍ಫೀಲ್ಡ್ ಪ್ರಕಾರ ಹೌದು..! ಕೋವಿಡ್ ಪಿಡುಗಿನ ಹಾವಳಿ ಸಂದರ್ಭದಲ್ಲಿ ಫೇಸ್ ಮಾಸ್ಕ್‍ಗಳು ಸಾರ್ವಜನಿಕ ಆರೋಗ್ಯ ರಕ್ಷಣೆಯಲ್ಲಿ ಅತ್ಯಂತ ಮುಖ್ಯ ಮತ್ತು ಶಕ್ತಿಶಾಲಿ ಸಾಧನ ಎಂದು ಅವರು ಹೇಳಿದ್ದಾರೆ.

ಅಮೆರಿಕದ ಸೆನೆಟ್ ಅಪ್ರಾಪ್ರಿಯೇಷನ್ ಕಮಿಟಿ ಮುಂದೆ ತಮ್ಮ ಹೇಳಿಕೆಯನ್ನು ದ್ಢಢಪಡಿಸಿದ ರಾಬರ್ಟ್ ರೆಡ್‍ಫೀಲ್ಡ್, ನಾನು ಖಚಿತವಾಗಿ ಹೇಳುವುದೇನೆಂದರೆ ಕೋವಿಡ್-19 ಲಸಿಕೆಗಿಂತಲೂ ಫೇಸ್ ಮಾಸ್ಕ್‍ಗಳು ಹೆಚ್ಚು ಸುರಕ್ಷತೆಯ ಖಾತರಿ ಒದಗಿಸುತ್ತದೆ.

ವೈಯಕ್ತಿಕವಾಗಿ ನಾನು ಕೊರೊನಾ ಚುಚ್ಚುಮದ್ದು ತೆಗೆದುಕೊಳ್ಳುವುದಕ್ಕಿಂತ ಫೇಸ್‍ಮಾಸ್ಕ್ ಬಳಕೆ ಮೇಲೆಯೇ ಹೆಚ್ಚು ನಂಬಿಕೆ ಹೊಂದಿದ್ದೇನೆ ಎಂದು ಹೇಳುವ ಮೂಲಕ ಸಿಡಿಸಿ ನಿರ್ದೇಶಕರು ಅಮೆರಿಕ ಸಂಸದರನ್ನು ತಬ್ಬಿಬ್ಬುಗೊಳಿಸಿದ್ದಾರೆ.

ನವೆಂಬರ್ ಮೊದಲ ವಾರದಲ್ಲಿ ಅಮೆರಿಕದ ಪ್ರಥಮ ಕೋವಿಡ್ ಲಸಿಕೆ ಲಭ್ಯವಾಗುತ್ತಿರುವ ಸಂದರ್ಭದಲ್ಲೇ ರಾಬರ್ಟ್ ಹೇಳಿಕೆ ಭಾರೀ ಮಹತ್ವ ಪಡೆದುಕೊಂಡಿದೆ.  ಫೇಸ್ ಮಾಸ್ಕ್ ಧರಿಸುವುದು ಲಸಿಕೆಗಿಂತ ಹೆಚ್ಚು ಪರಿಣಾಮಕಾರಿ ಇದು ಕೊರೊನಾ ವೈರಸ್ ಹರಡುವುದರ ವಿರುದ್ಧ ಹೆಚ್ಚು ರಕ್ಷಣೆ ನೀಡುತ್ತದೆ.

ಅಲ್ಲದೇ ರೋಗ ಪ್ರತಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ ಎಂದು ಅಮೆರಿಕ ಸಂಸತ್ತಿನ ಉಪ ಸಮಿತಿ ಮುಂದೆ ಅವರು ದೃಢಪಡಿಸಿದರು. ಲಸಿಕೆ ಅಥವಾ ಚುಚ್ಚುಮದ್ದು ಕೇವಲ ಒಬ್ಬರಿಗಷ್ಟೇ ಪ್ರಯೋಜನವಾಗುತ್ತದೆ. ಕೆಲವು ಸಂದರ್ಭದಲ್ಲಿ ಇದು ಪರಿಣಾಮಕಾರಿಯಾಗುವುದಿಲ್ಲ.

ಆದರೆ ಫೇಸ್‍ಮಾಸ್ಕ್ ಪ್ರತಿಯೊಬ್ಬರಿಗೂ ವೈಯಕ್ತಿಕ ರಕ್ಷಣೆ ನೀಡುವ ಜೊತೆಗೆ ಸಾಂಕ್ರಾಮಿಕ ಸೋಂಕು ಇತರರಿಗೆ ಹರಡದಂತೆ ತಡೆಯುತ್ತದೆ. ಹೀಗಾಗಿ ನಾನು ಸ್ಪಷ್ಟವಾಗಿ ಹೇಳುವುದು ಏನೆಂದರೆ, ಲಸಿಕೆಗಿಂತಲೂ ಫೇಸ್‍ಮಾಸ್ಕ್ ಹೆಚ್ಚು ಸುರಕ್ಷತೆ ಮತ್ತು ಆರೋಗ್ಯ ರಕ್ಷಣೆಯ ಖಾತರಿ ಒದಗಿಸುತ್ತದೆ ಎಂದು ಅವರು ಹೇಳಿದ್ದಾರೆ.

Facebook Comments