ಡಿಜೆಹಳ್ಳಿ ಗಲಭೆ : ಸತ್ಯ ಶೋಧನಾ ಸಮಿತಿಯಿಂದ ಆಘಾತಕಾರಿ ಮಾಹಿತಿ ಬಹಿರಂಗ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.4- ರಾಜಧಾನಿ ಬೆಂಗಳೂರಿನ ಡಿಜೆಹಳ್ಳಿ ಮತ್ತು ಕೆಜಿಹಳ್ಳಿಯಲ್ಲಿ ನಡೆದ ಗಲಭೆಯು ಪ್ರಮುಖ ಹಿಂದೂ ನಾಯಕರನ್ನು ಗುರಿಯಾಗಿಟ್ಟುಕೊಂಡು ನಡೆಸಿದ ಸಂಘಟಿತ ಮತ್ತು ಪೂರ್ವನಿಯೋಜಿತ ಗಲಭೆ ಎಂಬುದನ್ನು ಸತ್ಯ ಶೋಧನಾ ಸಮಿತಿ ಪತ್ತೆಹಚ್ಚಿದೆ. ಈ ಘಟನೆಯು ಆಕಸ್ಮಿಕವಾಗಿ ನಡೆದಿಲ್ಲ.

ಉದ್ದೇಶಪೂರ್ವಕವಾಗಿ ಪ್ರಮುಖ ಹಿಂದೂಗಳನ್ನು ಗುರಿಯಾಗಿಟ್ಟುಕೊಂಡು ವ್ಯವಸ್ಥಿತವಾಗಿ ನಡೆಸಿದ ಪೂರ್ವನಿಯೋಜಿತ ಕೃತ್ಯ ಎಂಬ ಆಘಾತಕಾರಿ ಸುದ್ದಿಯನ್ನು ಸಮಿತಿ ಬಹಿರಂಗಪಡಿಸಿದೆ.ಸಿಟಿಜನ್ ಫಾರ್ ಡೆಮೊಕ್ರಸಿ ಎಂಬ ಸಂಘಟನೆಯು ನಡೆಸಿರುವ ಸತ್ಯಶೋಧನಾ ಸಮಿತಿಯು ಕೆಲವು ಆಘಾತಕಾರಿ ಅಂಶಗಳನ್ನು ಪತ್ತೆ ಮಾಡಿದೆ.

ನಿವೃತ್ತ ಜಿಲ್ಲಾ ನ್ಯಾಯಾಧೀಶ ಶ್ರೀಕಾಂತ್.ಡಿ ಬಬಲಾಡಿ ನೇತೃತ್ವದ ಸತ್ಯ ಶೋಧನಾ ಸಮಿತಿಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್, ನಿವೃತ್ತ ಐಎಸ್‍ಎಫ್ ಅಧಿಕಾರಿಗಳಾದ ಡಾ.ಆರ್.ರಾಜು, ಡಾ.ಪ್ರಕಾಶ್, ನಿವೃತ್ತ ಡಿಜಿಪಿ ಎಂ.ಎನ್.ಕೃಷ್ಣಮೂರ್ತಿ, ಪತ್ರಕರ್ತರಾದ ಆರ್.ಕೆ.ಮ್ಯಾಥ್ಯೂ, ಸಂತೋಷ್ ತಮಯ್ಯ, ಪ್ರೊಫೆಸರ್‍ಗಳಾದ ಡಾ.ಎಂ.ಜಯಪ್ಪ, ಡಾ.ಎಚ್.ಟಿ.ಅರವಿಂದ,

ಸಾಮಾಜಿಕ ಕಾರ್ಯಕರ್ತರಾದ ಮುನಿರಾಜು, ಜರೋಮ್ ಆ್ಯಂಟೋ, ವಕೀಲ ಕ್ಷೇಮನರಗುಂದ್ ಅವರು ಈ ಸಮಿತಿಯಲ್ಲಿದ್ದರು. ಗೃಹ ಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾದ ಸಮಿತಿಯ ಸದಸ್ಯರು 49 ಪುಟಗಳ ವರದಿಯನ್ನು ಹಸ್ತಾಂತರ ಮಾಡಿದರು.

# ವರದಿಯಲ್ಲಿ ಏನಿದೆ?:
ರಾಜಕೀಯ ಉದ್ದೇಶಕ್ಕಾಗಿ ಈ ಗಲಭೆ ನಡೆದಿಲ್ಲ. ಇದು ಪೂರ್ವನಿಯೋಜಿತವಾಗಿ ಎಸಗಿರುವ ಕೃತ್ಯವಾಗಿದೆ. ಇದಕ್ಕೆ ಎಸ್‍ಡಿಪಿಐ ಮತ್ತು ಪಿಎಫ್‍ಐ ಸಂಘಟನೆಗಳು ನೇರ ಕಾರಣ ಎಂದು ವರದಿ ಹೇಳಿದೆ.  ವರದಿಯನ್ನು ಸಿಎಂಗೆ ಹಸ್ತಾಂತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿಯ ಸದಸ್ಯ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್, ಡಿಜೆಹಳ್ಳಿ-ಕೆಜಿಹಳ್ಳಿ ಘಟನೆಯು ತಕ್ಷಣಕ್ಕಾಗಲಿ ಇಲ್ಲವೇ ಆಕಸ್ಮಿಕವಾಗಿ ನಡೆದಿಲ್ಲ. ಪೂರ್ವಭಾವಿ ಸಿದ್ದತೆ ಹಾಗೂ ಹಿಂದೂಗಳನ್ನು ಗುರಿಯಾಗಿಟ್ಟುಕೊಂಡು ನಡೆಸಲಾಗಿದೆ.

ಇದು ಕೇವಲ ಕೋಮುಗಲಭೆಯಲ್ಲ. ವ್ಯವಸ್ಥೆಯ ವಿರುದ್ದ ಆಕ್ರೋಶ ಹಾಕುವ ಪ್ರಯತ್ನ ಇದಾಗಿದೆ. ಸ್ಥಳೀಯರು ಮತ್ತು ಒಳಗಡೆ ಇರುವವರೆ ಈ ಕೃತ್ಯ ಎಸಗಿದ್ದಾರೆ ಎಂದು ಸಮಿತಿಯಲ್ಲಿ ಉಲ್ಲೇಖವಾಗಿದೆ.  ಸ್ಥಳೀಯ ಜನರು ಗಲಭೆಯಲ್ಲಿ ಶಾಮೀಲಾಗಿದ್ದಾರೆ.

ಅವರ ಪಾಲ್ಗೊಳ್ಳುವಿಕೆ ಇಲ್ಲದಿದ್ದರೆ ಇಷ್ಟು ದೊಡ್ಡ ಮಟ್ಟದಲ್ಲಿ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಒಂದು ನಿರ್ಧಿಷ್ಟ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ನಡೆಸಿರುವ ಕೃತ್ಯ ಇದಾಗಿದೆ.

ಡಿಜೆಹಳ್ಳಿ-ಕೆಜಿಹಳ್ಳಿಯಲ್ಲಿ ನಡೆದ ಘಟನೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಇಡೀ ದೇಶದ ಅರ್ಥವ್ಯವಸ್ಥೆಯನ್ನು ಹಾಳುವ ಮಾಡುವ ವ್ಯರ್ಥ ಪ್ರಯತ್ನ ಇದಾಗಿದೆ. ಎಸ್‍ಡಿಪಿಐ ಹಾಗೂ ಎಸ್‍ಎಫ್‍ಐ ದೇಶದ ಬೇರೆ ಬೇರೆ ಭಾಗಗಳಲ್ಲಿ ನಡೆಸಿರುವ ಕೃತ್ಯದಂತೆ ಬೆಂಗಳೂರಿನಲ್ಲೂ ಗಲಭೆ ಮಾಡಿದ್ದಾರೆ.

ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸಿ ಗಲಭೆ ನಡೆಸಲಾಗಿದೆ. ಉತ್ತರಪ್ರದೇಶದಲ್ಲಿ ನಡೆದ ಘಟನೆಯಂತೆ ಇಲ್ಲಿಯೂ ಕೂಡ ಅದೇ ಮಾದರಿಯಂತೆ ಸಾರ್ವಜನಿಕರ ಆಸ್ತಿ ಹಾಳು ಮಾಡಿ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.

ಚಿಕ್ಕ ಘಟನೆ ಸೃಷ್ಟಿಸಿ ಸ್ಥಳೀಯ ಜನರನ್ನು ಭಯಭೀತರನ್ನಾಗಿ ಮಾಡುವುದೇ ಇದರ ಉದ್ದೇಶವಾಗಿತ್ತು. ಒಂದು ಸಲ ಭಯದ ವಾತಾವರಣ ನಿರ್ಮಾಣವಾದರೆ ಜನರು ದೇಶದ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಳ್ಳುತ್ತಾರೆ ಎಂಬ ಕಾರಣಕ್ಕಾಗಿಯೇ ಈ ಕೃತ್ಯ ಎಸೆಗಲಾಗಿದೆ ಎಂದು ವರಿದಿ ಮಾಡಿದೆ.ರಾಷ್ಟ್ರೀಯ ಮೌಲ್ಯಗಳ ವಿರುದ್ಧ ಜನರನ್ನು ಸಂಘಟನೆ ಮಾಡಲಾಗುತ್ತದೆ.

ಈ ಬಗ್ಗೆ ತಕ್ಷಣವೇ ಎಲ್ಲರೂ ಜಾಗೃತರಾಗಬೇಕು. ಇನ್ನು ಮುಂದೆ ಗುಪ್ತಚರ ವಿಭಾಗವನ್ನು ಆಧುನಿಕತೆಗೆ ತಕ್ಕಂತೆ ಬಲಪಡಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ. ನಾವು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ವರದಿಯನ್ನು ಸಿದ್ದಪಡಿಸಿದ್ದೇವೆ. ಸರ್ಕಾರ ಈ ಬಗ್ಗೆ ಅಗತ್ಯಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದು ಮದನ್ ಗೋಪಾಲ್ ಹೇಳಿದ್ದಾರೆ.

Facebook Comments