ನಕಲಿ ಸಿಬಿಐ ಅಧಿಕಾರಿ ಬಂಧನ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.22- ಟಾಕು ಟೀಕಾಗಿ ಕಾರಿನಲ್ಲಿ ಓಡಾಡುತ್ತಾ ಉದ್ಯಮಿಗಳಿಂದ ಹಣ ಪೀಕುತ್ತಿದ್ದ ನಕಲಿ ಸಿಬಿಐ ಅಧಿಕಾರಿಯನ್ನು ಸಿಸಿಬಿ ಪೊಲೀಸರು ಬಂಧಿಸಿ 24 ಲಕ್ಷ ಹಣ ಮತ್ತು ಬೆಂಜ್ ಕಾರನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಎಚ್‍ಎಎಲ್ ಬಳಿ ಅನ್ನಸಂದ್ರಪಾಳ್ಯದ ನಿವಾಸಿ ಅಭಿಲಾಷ್ (34) ಸಿಸಿಬಿ ಬಲೆಗೆ ಸಿಕ್ಕಿಬಿದ್ದಿರುವ ನಕಲಿ ಅಧಿಕಾರಿ.  ಹಿನ್ನೆಲೆ: ಇಬ್ಬರು ಸ್ನೇಹಿತ ರಾದ ವಿಜಯಕುಮಾರ್ ಮತ್ತು ವಿಜಯರೆಡ್ಡಿ ಎಂಬುವರು ಸಾಫ್ಟ್‍ವೇರ್ ಡೆವಲಪ್ ಮಾಡಲು 50 ರಿಂದ 70 ಕೋಟಿ ಹಣ ಹೊಂದಿಸ ಬೇಕಿತ್ತು.

ಹಣದ ನೆರವಿಗಾಗಿ ರಿಯಲ್ ಎಸ್ಟೇಟ್ ಉದ್ಯಮಿ ರಾಘವರೆಡ್ಡಿ ಎಂಬುವರನ್ನು ಭೇಟಿ ಮಾಡಿ ತಮ್ಮ ಯೋಜನೆ ಬಗ್ಗೆ ವಿವರಿಸುತ್ತಾರೆ. ಅಷ್ಟೊಂದು ಹಣ ಬೇಕಾದರೆ ಸ್ನೇಹಿತ ಅಭಿಲಾಷ್ ಎಂಬುವರಿದ್ದಾರೆ. ಅವರಿಗೆ ನಿಮ್ಮ ಪರಿಚಯ ಮಾಡಿಕೊಡುತ್ತೇನೆ. ಅವರ ಬಳಿ ಕೇಳಿ ಎಂದು ಹೇಳಿದ್ದಾರೆ. ಅಭಿಲಾಷ್‍ನನ್ನು ಭೇಟಿ ಮಾಡಿ ವಿಜಯಕುಮಾರ್, ವಿಜಯರೆಡ್ಡಿ ಮಾತನಾಡಿದ್ದಾರೆ. ಅಷ್ಟೊಂದು ಹಣ ಬೇಕಿದ್ದರೆ ನೀವು ಯಾವ ದಾಖಲಾತಿ ನೀಡುತ್ತೀರಿ ಎಂದು ವಿಚಾರಿಸಿದಾಗ ಬೆಂಗಳೂರಿನ ವಿವಿಧ ಕಡೆ ಆಸ್ತಿ ಇದೆ ಎಂದು ಹೇಳಿದ್ದಾರೆ.

ಇವರಿಬ್ಬರ ಅಸಹಾಯಕತೆಯನ್ನು ಅರಿತ ಅಭಿಲಾಷ್ ನಿಮ್ಮ ಜೊತೆ ಮಾತನಾಡಬೇಕೆಂದು ಐಷಾರಾಮಿ ಹೊಟೇಲ್‍ಗೆ ಒಬ್ಬರು ಬರುವಂತೆ ಹೇಳಿದ್ದಾನೆ. ಈತನ ಮಾತನ್ನು ನಂಬಿದ ಇಬ್ಬರೂ ಹೊಟೇಲ್‍ಗೆ ಹೋಗಿದ್ದಾರೆ. ಇಬ್ಬರೂ ಬಂದಿರುವುದನ್ನು ನೋಡಿದ ನೋಡಿದ ಅಭಿಲಾಷ್ ಒಬ್ಬಾತನನ್ನು ಹೊರಗೆ ಕಳುಹಿಸಿ ಒಬ್ಬರ ಜೊತೆ ಮಾತ್ರ ಹೊಟೇಲ್‍ನಲ್ಲಿ ಕುಳಿತು ಮಾತನಾಡುತ್ತಾ, ನಾನು ಸಿಬಿಐ ಅಧಿಕಾರಿ. ನಿಮ್ಮ ಬಳಿ ಹೆಚ್ಚಿನ ಆಸ್ತಿ ಇದೆ. ನನಗೆ ಒಂದುಕೋಟಿ ಹಣ ಕೊಡದಿದ್ದರೆ ನಿಮ್ಮ ಮೇಲೆ ಪ್ರಕರಣ ದಾಖಲಿಸುವೆ ಎಂದು ಹೆದರಿಸಿದ್ದಾನೆ.

ಈತ ಮಾತನ್ನು ಕೇಳಿ ಬೆಚ್ಚಿದ ವಿಜಯ್ ಅಷ್ಟೊಂದು ಹಣ ಕೊಡಲು ಸಾಧ್ಯವಿಲ್ಲ. 24 ಲಕ್ಷ ಕೊಡುವುದಾಗಿ ಹೇಳಿದ್ದಾನೆ. ಇದಕ್ಕೆ ಒಪ್ಪಿಕೊಂಡ ಅಭಿಲಾಷ್ ಹಣ ತೆಗೆದುಕೊಂಡು ಬರುವಂತೆ ಹೇಳಿ ಕಳುಹಿಸಿದ್ದಾನೆ. ಅದರಂತೆ ಒಂದು ದಿನ 24 ಲಕ್ಷ ಹಣ ತೆಗೆದುಕೊಂಡು ವಿಜಯ್‍ಕುಮಾರ್ ಸ್ನೇಹಿತರು ಬಂದಾಗ ಬೆಂಜ್ ಕಾರಿನಲ್ಲಿ ಅಭಿಲಾಷ್ ಬಂದಿರುವುದನ್ನು ಗಮನಿಸಿ ಹಣ ಕೊಟ್ಟಿದ್ದಾರೆ. ನಂತರ ಈತನ ನಡವಳಿಕೆ ಬಗ್ಗೆ ಅನುಮಾನಗೊಂಡು ಕಾರಿನ ನಂಬರ್ ಹಾಗೂ ಕಾರಿನ ಫೋಟೋವನ್ನು ತೆಗೆದು ಸಿಸಿಬಿ ಪೊಲೀಸರಿಗೆ ತಿಳಿಸಿದ್ದಾರೆ.

ಸಿಸಿಬಿ ಪೊಲೀಸರು ತನಿಖೆ ನಡೆಸಿ ನಕಲಿ ಸಿಬಿಐ ಅಧಿಕಾರಿ ಅಭಿಲಾಷ್‍ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.  ಈತ ಕಾರಿನಲ್ಲಿ ಓಡಾಡುತ್ತಾ ಉದ್ಯಮಿಗಳು, ಹಣವಂತರನ್ನು ಗುರುತಿಸಿ, ಸಿಬಿಐ ಅಧಿಕಾರಿ ಎಂದು ಹೇಳಿಕೊಂಡು ಅವರನ್ನು ಬೆದರಿಸಿ ಹಣ ಪಡೆಯುತ್ತಿದ್ದೆ, ಹಣ ಕೊಡದಿದ್ದರೆ ನಿಮ್ಮ ಮೇಲೆ ಕೇಸ್ ಹಾಕುತ್ತೇನೆಂದು ಬೆದರಿಕೆ ಹಾಕುತ್ತಿದ್ದುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ. ಇದೀಗ ಅಭಿಲಾಷ್ ಸಿಸಿಬಿ ಪೊಲೀಸರ ಅತಿಥಿಯಾಗಿದ್ದು, ಈತನನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

Facebook Comments