ಬೆಳಗಾವಿಯಲ್ಲಿ 23.88 ಲಕ್ಷ ರೂ. ನಕಲಿ ನೋಟು ವಶ, ಐವರ ಬಂಧನ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ, ಫೆ.22- ನಕಲಿ ನೋಟು ಸರಬರಾಜು ಮಾಡುತ್ತಿದ್ದ ಐವರು ಅಂತಾರಾಜ್ಯ ಕಳ್ಳರನ್ನು ಬೆಳಗಾವಿ ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಮತನೂರ ಕ್ರಾಸ್ ಬಳಿ ಎರಡು ಪ್ರತ್ಯೇಕ ವಾಹನಗಳಲ್ಲಿ 23.88 ಲಕ್ಷ ರೂ. ನಕಲಿ ಮತ್ತು 12 ಸಾವಿರ ರೂ. ಮೌಲ್ಯದ ಅಸಲಿ ನೋಟು ಸಾಗಿಸುವ ಸಂದರ್ಭದಲ್ಲಿ ದಾಳಿ ನಡೆಸಿದ ಡಿಸಿಐಬಿ ಹಾಗೂ ಸಂಕೇಶ್ವರ ಠಾಣೆಯ ಪೊಲೀಸರು ಐವರು ಅಂತಾರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಾರಾಷ್ಟ್ರದ ಕೊಲ್ಲಾಪುರದ ಅಮರ್ ಶಂಕರ್ ಅಂಬೇಕರ (28), ಕಾಗಲ್ ತಾಲೂಕಿನ ಬೆಲ್ಲೊಳಿ ಬಾಚಲಿ ಗ್ರಾಮದ ಧೈರ್ಯಶೀಲ ಬಾಬುರಾವ್ ಪಾಟೀಲ್(42), ಬಾಬಾಸೋ ವಸಂತ್ ಪಾಟೀಲ್(31), ನಿಪ್ಪಾಣಿ ಪಟ್ಟಣದ ರಾಜೇಶ್ ಮಾರುತಿ ಮೋಹಿತೆ (48) ಮತ್ತು ಚಿಕ್ಕೋಡಿ ತಾಲೂಕಿನ ಕಲ್ಲೊಳ ಗ್ರಾಮದ ಅಶೋಕ್ ಶಂಕರ್ ತೇಲಿ(50) ಬಂಧಿತ ಆರೋಪಿಗಳು.

ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ನೋಟಿನ ಬಂಡಲ್ ಮೇಲೆ ಕೆಳಗೆ 500ರೂ. ಮುಖ ಬೆಲೆಯ ನೋಟು ಇಟ್ಟು ಮಧ್ಯದಲ್ಲಿ ನೋಟಿನ ಮಾದರಿಯ ಬಿಳಿ ಹಾಳೆಗಳನ್ನು ಇಡಲಾಗಿದೆ. ಇಂತಹ 12 ಬಂಡಲ್ ನಕಲಿ ನೋಟುಗಳು ಪತ್ತೆಯಾಗಿವೆ. ಪ್ರತಿ ಬಂಡಲ್‍ನಲ್ಲಿ 2 ಲಕ್ಷ ರೂ. ನಕಲಿ ನೋಟುಗಳಿವೆ ಎಂದು ನಂಬುವ ಹಾಗೆ ಮಾಡಿ 1 ಲಕ್ಷ ರೂ. ಅಸಲಿ ನೋಟು ಕೊಟ್ಟರೆ 3 ಲಕ್ಷ ರೂ. ನಕಲಿ ನೋಟು ಕೊಡುವುದಾಗಿ ನಂಬಿಸಿ, ಮೋಸ ಮಾಡುವ ಪ್ರಯತ್ನ ಮಾಡುತ್ತಿದ್ದ ವೇಳೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ನಕಲಿ ನೋಟಿನ ಬಂಡಲ್‍ನ ಎರಡೂ ಬದಿಗೆ ಅಸಲಿ ನೋಟು ಕಾಣುವ ರೀತಿಯಲ್ಲಿ ಬಣ್ಣ ಮಾಡಿ ಪ್ಲಾಸ್ಟಿಕ್‍ನಿಂದ ಸುತ್ತಿಡಲಾಗಿತ್ತು. ಒಟ್ಟು 12 ಸಾವಿರ ರೂ. ಅಸಲಿ ನೋಟು ಮತ್ತು 23.88 ಲಕ್ಷ ರೂ. ನಕಲಿ ನೋಟನ್ನು ವಶಪಡಿಸಿಕೊಳ್ಳಲಾಗಿದೆ.

ದಾಳಿ ಸಂದರ್ಭದಲ್ಲಿ ನೋಟುಗಳ ಜತೆಗೆ ಸಾಗಣಿಕೆಗೆ ಬಳಸುತ್ತಿದ್ದ ಬುಲೇರೋ ಜೀಪ್, ಸುಜುಕಿ ಸ್ವಿಫ್ಟ್ ಕಾರು ಹಾಗೂ 5 ವಿವಿಧ ಕಂಪೆನಿಯ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin