ಶಾಸಕರ ಸಹಿ ನಕಲು ಮಾಡಿದ್ದ ಆರೋಪಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.10- ಸರ್ಕಾರಿ ಅಧಿಕಾರಿಗಳ ವರ್ಗಾವಣೆಗೆ ಶಾಸಕರ ನಕಲಿ ಲೆಟರ್‍ಹೆಡ್ ಹಾಗೂ ಸಹಿ ಬಳಸಿ ಹಣ ಸಂಪಾದನೆಗೆ ಮುಂದಾಗಿದ್ದ ಆರೋಪಿಯೊಬ್ಬನನ್ನು ವಿಧಾನಸಭೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ವಸಂತಪುರದ ನಿವಾಸಿ ಬಿ.ಬಸವಲಿಂಗಯ್ಯ ಅವರನ್ನು ಬಂಧಿಸಲಾಗಿದ್ದು, ವರ್ಗಾವಣೆಗೆ ನಕಲಿ ಲೆಟರ್‍ಹೆಡ್ ಬಳಸಿರುವುದನ್ನು ಪತ್ತೆ ಮಾಡಲಾಗಿದೆ.

ಯಲಹಂಕ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ಅವರು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿ ತಮ್ಮ ಲೆಟರ್‍ಹೆಡ್ ಬಳಸಿ ಸರ್ಕಾರಿ ಅಧಿಕಾರಿ ವರ್ಗಾವಣೆಗೆ ಮುಖ್ಯಮಂತ್ರಿ ಕಚೇರಿಗೆ ಶಿಫಾರಸು ಮಾಡಲಾಗಿದೆ. ಆದರೆ ಲೆಟರ್‍ಹೆಡ್ ಹಾಗೂ ಅದರಲ್ಲಿರುವ ಸಹಿ ನನ್ನದಲ್ಲ ಎಂದು ತಿಳಿಸಿದ್ದಾರೆ. ಇದರ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಕೈಗೊಂಡಾಗ ಬಸವಲಿಂಗಯ್ಯ ಸಿಕ್ಕಿ ಬಿದ್ದಿದ್ದಾರೆ. ಹೆಚ್ಚಿನ ಹಣ ಸಂಪಾದನೆ ಮಾಡಬೇಕೆಂಬ ಉದ್ದೇಶದಿಂದ ಆರೋಪಿ ಎರಡು ತಿಂಗಳ ಹಿಂದೆ ನಕಲಿ ಲೆಟರ್‍ಹೆಡ್ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ.

ಪರಿಚಿತವಿರುವ ರಾಜಕೀಯ ನಾಯಕರ ಸಹಾಯದಿಂದ ಸರ್ಕಾರಿ ನೌಕರರ ವರ್ಗಾವಣೆ ಹಾಗೂ ಇತರ ಕೆಲಸಗಳನ್ನು ಮಾಡಿಕೊಡುವುದಾಗಿ ನಂಬಿಸಿ ತಮ್ಮ ಗ್ರಾಮದವರೇ ಆದ ಹೇಮಂತ್ ಪ್ರಸಾದ್ ಅವರಿಗೆ ಪರಿಚಿತರಿರುವ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯ್ತಿ ಸಹಾಯಕ ಕಾರ್ಯದರ್ಶಿ ಬಿ.ಕೆ.ಚಂದ್ರಕಾಂತ್ ಅವರನ್ನು ಬೆಂಗಳೂರು ನಗರ ಜಿಲ್ಲಾ ಪಂಚಾಯಿಯ ಸಹಾಯಕ ಯೋಜನಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡಬೇಕೆಂದು ನಕಲಿ ಲೆಟರ್‍ಹೆಡ್‍ನಲ್ಲಿ ಮನವಿ ಮಾಡಲಾಗಿತ್ತು.

ಲೆಟರ್‍ಹೆಡ್‍ನ್ನು ಮುಖ್ಯಮಂತ್ರಿಯವರ ಕಚೇರಿಯ ಟಪಾಲು ಸೆಕ್ಷನ್‍ಗೆ ಸಲ್ಲಿಸಲಾಗಿತ್ತು. ಪೊಲೀಸರ ವಿಚಾರಣೆ ವೇಳೆ ಆರೋಪಿ ತಪೆಪೊಪ್ಪಿಕೊಂಡಿದ್ದು, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ ಎಂದು ಕಬ್ಬನ್‍ಪಾರ್ಕ್ ಉಪವಿಭಾಗದ ಎಸಿಪಿ ಪ್ರತಾಪ್‍ರೆಡ್ಡಿ, ವಿಧಾನಸೌಧ ಠಾಣೆ ಇನ್ಸ್‍ಪೆಕ್ಟರ್ ಕೆ.ಟಿ.ನಾಗರಾಜ್ ಪತ್ರಿಕಾಹೇಳಿಕೆಯಲ್ಲಿ ತಿಳಿಸಿದ್ದಾರೆ.

Facebook Comments