ಕುಸಿಯುತ್ತಿದ್ದ ಕಟ್ಟಡ ನೆಲಸಮ, ತಪ್ಪಿದ ಅನಾಹುತ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.13- ಇತ್ತಿಚೆಗೆ ಬಿದ್ದ ಭಾರಿ ಮಳೆಯಿಂದ ಬಿರುಕು ಕಾಣಿಸಿಕೊಂಡಿದ್ದ ಮೂರಂತಸ್ತಿನ ಮನೆ ತೆರವು ಮಾಡುವಲ್ಲಿ ಬಿಬಿಎಂಪಿ ಯಶಸ್ವಿಯಾಗಿದೆ. ಮಹಾಲಕ್ಷ್ಮೀ ಬಡಾವಣೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಮಲಾನಗರದಲ್ಲಿರುವ ಶಂಕರ್‍ನಾಗ್ ಬಸ್ ನಿಲ್ದಾಣದ ಹಿಂಭಾಗದಲ್ಲಿ ನಿರ್ಮಿಸಿದ್ದ ಮೂರಂತಸ್ತಿನ ಕಟ್ಟಡದ ಹಿಂಬದಿ ಪಾಯದ ಸಮೀಪ ಮಣ್ಣು ಕುಸಿದುಬಿದ್ದ ಪರಿಣಾಮ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿತ್ತು.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಅಬಕಾರಿ ಸಚಿವ ಕೆ.ಗೋಪಾಲಯ್ಯ ಅವರು ಮನೆ ತೆರವುಗೊಳಿಸುವಂತೆ ಸೂಚನೆ ನೀಡಿದ್ದರು.
ಸಚಿವರ ಸೂಚನೆ ಮೇರೆಗೆ ಇಂದು ಬಿಬಿಎಂಪಿ ಅಧಿಕಾರಿಗಳು ಕಟ್ಟಡ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಟ್ಟಡದಲ್ಲಿ ವಾಸಿಸುತ್ತಿದ್ದವರು ಹಾಗೂ ಅಕ್ಕಪಕ್ಕದ ಮನೆಯವರನ್ನು ಪಕ್ಕದ ಶಾಲಾ ಕೊಠಡಿಗೆ ಸ್ಥಳಾಂತರಿಸಿ ಅವರಿಗೆ ಸಕಲ ವ್ಯವಸ್ಥೆ ಮಾಡಿಕೊಡಲಾಗಿದೆ.

ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಿ ಜೆಸಿಬಿ ಯಂತ್ರಗಳೊಂದಿಗೆ ಆಗಮಿಸಿದ ಬಿಬಿಎಂಪಿ ಸಿಬ್ಬಂದಿಗಳು ಮನೆಯಲ್ಲಿದ್ದವರು, ಹಾಗೂ ಅಕ್ಕಪಕ್ಕದ ಕೆಲವು ಮನೆಗಳನ್ನು ಖಾಲಿ ಮಾಡಿಸಲು ಮುಂದಾದರೂ. ಆ ಸಂದರ್ಭದಲ್ಲಿ ಪಕ್ಕದ ಮನೆಯಲ್ಲಿ ವಾಸವಿದ್ದ ವಯೋವೃದ್ದರೊಬ್ಬರು ನಾನು ಮನೆ ಖಾಲಿ ಮಾಡುವುದಿಲ್ಲ ಎಂದು ಪಟ್ಟು ಹಿಡಿದರು.

ಆಗ ಪೊಲೀಸರು ಅವರನ್ನು ಬಲವಂತವಾಗಿ ಅಲ್ಲಿಂದ ಜಾಗ ಖಾಲಿ ಮಾಡಿಸಿ ನಂತರ ಯಾವುದೆ ಅಪಾಯವಾಗದಂತೆ ಮನೆ ತೆರವು ಕಾರ್ಯಚರಣೆ ಕೈಗೊಂಡರು. ತೆರವು ಕಾರ್ಯಚರಣೆ ಸಂದರ್ಭದಲ್ಲಿ ಅಕ್ಕಪಕ್ಕದ ಕೆಲವು ಮನೆಗಳಿಗೂ ಹಾನಿಯಾಗಿರುವುದು ಕಂಡು ಬಂತು. ಕಟ್ಟಡ ಯಾವುದೇ ಸಂದರ್ಭದಲ್ಲಿ ಕುಸಿದುಬೀಳಬಹುದು ಎಂಬ ಆತಂಕದಲ್ಲಿ ಆ ಮನೆಯಲ್ಲಿ ವಾಸಿಸುತ್ತಿದ್ದವರು ಮನೆಯಲ್ಲಿದ್ದ ಎಲ್ಲಾ ವಸ್ತುಗಳನ್ನು ಹಾಗೆ ಬಿಟ್ಟುಬಂದಿದ್ದರು.

ತೆರವು ಕಾರ್ಯಚರಣೆ ಸಂದರ್ಭದಲ್ಲಿ ಮನೆಯಲ್ಲಿದ್ದ ಎಲ್ಲಾ ಪಿಠೋಪಕರಣಗಳು, ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಮತ್ತಿತರ ವಸ್ತುಗಳು ನೆಲಸಮವಾಯಿತು. ತಾವು ಕೂಡಿಟ್ಟ ಹಣದಿಂದ ಸಂಪಾದಿಸಿದ್ದ ವಸ್ತುಗಳು ನೆಲಸಮವಾಗುತ್ತಿರುವುದನ್ನು ಕಂಡ ಮಹಿಳೆಯೊಬ್ಬರು ಕಣ್ಣೀರು ಸುರಿಸುತ್ತ ನಿಂತಿದ್ದ ದೃಶ್ಯ ಕಂಡುಬಂತು.

ಮಾಲೀಕರು ನಾಪತ್ತೆ: ಕಟ್ಟಡದ ಮಾಲೀಕರಾದ ರಾಜೇಶ್ವರಿ ಎಂಬುವರು ಕಳೆದ ಆರು ತಿಂಗಳಿನಿಂದ ನಾಪತ್ತೆಯಾಗಿದ್ದಾರೆ. ರಾಜೇಶ್ವರಿ ಅವರು ಮನೆ ನಿರ್ಮಿಸುವಾಗ ಶೇಷಾದ್ರಿಪುರಂನ ಸಿಂಡಿಕೇಟ್ ಬ್ಯಾಂಕ್‍ನಿಂದ ಸಾಲ ಪಡೆದಿದ್ದರು. ಆದರೆ, ಅವರು ಸಕಾಲಕ್ಕೆ ಸಾಲ ಪಾವತಿಸದಿರುವ ಹಿನ್ನಲೆಯಲ್ಲಿ ಕಟ್ಟಡವನ್ನು ಬ್ಯಾಂಕ್‍ನವರು ಜಪ್ತಿ ಮಾಡಿದ್ದರು.

ಬ್ಯಾಂಕ್‍ನವರು ಮನೆ ಜಪ್ತಿ ಮಾಡುತ್ತಿದ್ದಂತೆ ರಾಜೇಶ್ವರಿ ನಾಪತ್ತೆಯಾಗಿದ್ದಾರೆ ಪರ್ಯಾಯ ವ್ಯವಸ್ಥೆ: ತೆರವು ಕಾರ್ಯಚರಣೆ ಪ್ರದೇಶಕ್ಕೆ ಭೇಟಿ ನೀಡಿದ ಅಬಕಾರಿ ಸಚಿವ ಕೆ.ಗೋಪಾಲಯ್ಯ ಅವರು, ಕಟ್ಟಡದಲ್ಲಿ ವಾಸಿಸುತ್ತಿದ್ದವರು ಹಾಗೂ ಅಕ್ಕಪಕ್ಕದ ಕೆಲವು ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.

15 ವರ್ಷ ಹಳೆಯದಾದ ಕಟ್ಟಡದಲ್ಲಿ ಐದಾರು ಕುಟುಂಬಗಳು ವಾಸಿಸುತ್ತಿದ್ದವು. ತೆರವು ಕಾರ್ಯಚರಣೆಯಿಂದ ತೊಂದರೆಗೊಳಗಾಗಿರುವ ಅಕ್ಕಪಕ್ಕದ ಮನೆಯವರಿಗೆ ಹಾಗೂ ಕಟ್ಟಡದಲ್ಲಿದ್ದವರಿಗೆ ಸಮೀಪದ ಸರ್ಕಾರಿ ಶಾಲೆಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.
ತೆರವು ಕಾರ್ಯಚರಣೆ ಪೂರ್ಣಗೊಳ್ಳುವವರೆಗೆ ಎಲ್ಲರಿಗೂ ಶಾಲೆಯಲ್ಲಿ ಸಕಲ ವ್ಯವಸ್ಥೆ ಮಾಡಿಕೊಟ್ಟಿರುವುದಾಗಿ ಗೋಪಾಲಯ್ಯ ತಿಳಿಸಿದರು.

Facebook Comments