BIG NEWS : ಡೆತ್‌ನೋಟ್‌ನಲ್ಲಿ ಬಯಲಾಯ್ತು ಬ್ಯಾಡರಹಳ್ಳಿ ಫ್ಯಾಮಿಲಿ ಸುಸೈಡ್ ಸೀಕ್ರೆಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.19-ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಹಾಗೂ ಮಗು ಸಾವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಮನೆ ಯಜಮಾನ ಶಂಕರ್ ಅವರ ಅಕ್ರಮ ಸಂಬಂಧವೇ ಘಟನೆಗೆ ಕಾರಣ ಎಂಬುದು ಪೋಲೀಸರ ತನಿಖೆಯಿಂದ ತಿಳಿದುಬಂದಿದೆ.ಇಂದು ಬೆಳಗ್ಗೆ ಪೋಲೀಸರು ಶಂಕರ್ ಮನೆಯನ್ನು ಸಂಪೂರ್ಣ ಮೊಹಜರು ನಡೆಸುತ್ತಿದ್ದಾಗ ದೊರೆತ ಡೆತ್ ನೋಟ್‍ಗಳಲ್ಲಿ ಅಪ್ಪನ ಅಕ್ರಮ ಸಂಬಂಧದ ಬಗ್ಗೆ ಹಾಗೂ ಜಗಳದ ಬಗ್ಗೆ ಉಲ್ಲೇಖಿಸಿರುವುದು ಕಂಡುಬಂದಿದೆ.

ಮಗ ಮಧುಸಾಗರ್ ಅವರ ಕೊಠಡಿಯಲ್ಲಿ ದೊರೆತ ಡೆತ್‍ನೋಟ್‍ನಲ್ಲಿ ಅಪ್ಪನಿಗೆ ಅಕ್ರಮ ಸಂಬಂಧವಿದೆ. ಅದೇ ಕಾರಣಕ್ಕೆ ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು. ನನ್ನ ಲ್ಯಾಪ್‍ಟಾಪ್‍ನಲ್ಲಿ ಅದರ ಸಂಪೂರ್ಣ ವಿವರವಿದೆ ಎಂದು ಬರೆದಿದ್ದಾನೆ.ಇದೀಗ ಪೋಲೀಸರು ಆತನ ಕೊಠಡಿಯಲ್ಲಿದ್ದ ಲ್ಯಾಪ್‍ಟಾಪ್‍ನ್ನು ವಶಪಡಿಸಿಕೊಂಡಿದ್ದು, ತಜ್ಞರನ್ನು ಕರೆಸಿ ಲ್ಯಾಪ್‍ಟಾಪ್‍ನಲ್ಲಿನ ಡಾಟಾವನ್ನು ತೆಗೆಸಿ ಅದರಲ್ಲಿರುವ ವಿವರಗಳನ್ನು ಕಲೆಹಾಕಿ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಹೆಣ್ಣುಮಕ್ಕಳಾದ ಸಿಂಚನ ಹಾಗೂ ಸಿಂಧೂರಾಣಿ ಕೊಠಡಿಗಳಲ್ಲಿ ದೊರೆತ ಡೆತ್‍ನೋಟ್‍ಗಳಲ್ಲಿಯೂ ಸಹ ಅಪ್ಪನ ಅಕ್ರಮ ಸಂಬಂಧದ ಬಗ್ಗೆ ಉಲ್ಲೇಖವಾಗಿರುವುದು ಕಂಡುಬಂದಿದೆ.ಡೆತ್‍ನೋಟ್‍ನಲ್ಲಿ ಸಿಂಚನ , ಗಂಡನ ಮನೆಯಲ್ಲಿ ನೆಮ್ಮದಿಯಿಲ್ಲ, ತವರು ಮನೆಯಲ್ಲೂ ನೆಮ್ಮದಿಯಿರಲಿಲ್ಲ ಎಂದು ಬರೆದಿದ್ದು, ಈ ಬಗ್ಗೆಯೂ ಸಹ ಪೋಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಒಟ್ಟಾರೆ ಈ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಶಂಕರ್ ಅವರ ಮಗ ಮಧುಸಾಗರ್ ಅವರ ಲ್ಯಾಪ್‍ಟಾಪ್‍ನಲ್ಲಿರುವ ವಿವರಗಳು ಏನೆಂಬುದು ಪೋಲೀಸರ ತನಿಖೆಯಿಂದಷ್ಟೇ ಹೊರಬರಬೇಕಿದೆ.

# ಅಪಾರ ಚಿನ್ನ ಹಾಗೂ ಹಣ ಪತ್ತೆ:
ಮನೆಯ ಪ್ರತಿಯೊಂದು ಕೊಠಡಿ ಮೂಲೆ ಮೂಲೆಯಲ್ಲಿ ಪೋಲೀಸರು ಪರಿಶೀಲಿಸುತ್ತಿದ್ದಾಗ ಸುಮಾರು 1 ಕೆಜಿ ಚಿನ್ನ ಹಾಗೂ 10ರಿಂದ 12 ಲಕ್ಷ ರೂ. ಹಣ ಕಂಡುಬಂದಿದೆ.

# ಮಹಜರು ವೇಳೆ ಡೆತ್‍ನೋಟ್‍ ಪತ್ತೆ :
ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಹಾಗೂ ಮಗು ಸಾವಿನ ಪ್ರಕರಣಕ್ಕೆ ಸಂಬಂಸಿದಂತೆ ಬ್ಯಾಡರಹಳ್ಳಿ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದು, ಇಂದು ವಿಡಿಯೋ ರೆಕಾರ್ಡ್ ಮೂಲಕ ಮನೆಯನ್ನು ಸಂಪೂರ್ಣ ಮಹಜರು ಮಾಡಿದ ಸಂದರ್ಭದಲ್ಲಿ ಮೂರು ಡೆತ್‍ನೋಟ್‍ಗಳು ಸಿಕ್ಕಿವೆ.

ಮಹಜರು ವೇಳೆ ಸಿಂಚನಾ ಕೊಠಡಿಯಲ್ಲಿ ಒಂದು ಡೆತ್‍ನೋಟ್, ಸಿಂಧುರಾಣಿ ಕೊಠಡಿಯಲ್ಲಿ ಮತ್ತೊಂದು ಡೆತ್‍ನೋಟ್ ಹಾಗೂ ಮಧುಸಾಗರ್ ಕೊಠಡಿಯಲ್ಲಿ ಇನ್ನೊಂದು ಪ್ರತ್ಯೇಕ ಡೆತ್‍ನೋಟ್ ಪತ್ತೆಯಾಗಿದೆ.

ಈ ಡೆತ್‍ನೋಟ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅದರಲ್ಲಿರುವ ಮಾಹಿತಿಗಳನ್ನು ಕೂಲಂಕಶವಾಗಿ ಪರಿಶೀಲಿಸುತ್ತಿದ್ದಾರೆ. ತಿಗಳರಪಾಳ್ಯದ ಮನೆಯಲ್ಲಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಹಾಗೂ ಮಗುವೊಂದು ಮೃತಪಟ್ಟಿರುವ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬ್ಯಾಡರಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ನಂತರ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವ ದೃಷ್ಟಿಯಿಂದ ಈ ಮನೆಗೆ ಬೀಗ ಹಾಕಿದ್ದರು.

ಇಂದು ಮಾಲೀಕ ಶಂಕರ್ ಅವರ ಮನೆಯ ಸಂಪೂರ್ಣ ವಿಡಿಯೋ ಚಿತ್ರಣಕ್ಕಾಗಿ ವಿಜಯನಗರದ ಎಸಿಪಿ ನಂಜುಂಡೇಗೌಡ ಅವರ ಮುಂದಾಳತ್ವದಲ್ಲಿ ಇನ್ಸ್‍ಪೆಕ್ಟರ್ ರಾಜೀವ್ ಅವರು ಸಿಬ್ಬಂದಿ ಹಾಗೂ ವಿಡಿಯೋಗ್ರಾಫರ್‍ನೊಂದಿಗೆ ಬಂದು ಮನೆಯ ಬೀಗ ತೆಗೆದು ಚಿತ್ರೀಕರಣ ಮಾಡಿದ್ದಾರೆ.

ಮನೆಯ ಮಹಜರು ವೇಳೆ ನನ್ನ ಆಪ್ತರು ಹಾಗೂ ಅಳಿಯಂದಿರು ನನ್ನ ಜತೆ ಇರಬೇಕೆಂದು ಶಂಕರ್ ಹಿರಿಯ ಪೊಲೀಸ್ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದರು.

ಮನೆಯಲ್ಲಿ ಹಣ, ಬಂಗಾರವಿದೆ. ಹಾಗಾಗಿ ಮನೆ ಮಹಜರು ವೇಳೆ ಅಳಿಯಂದಿರಾದ ಪ್ರವೀಣ್, ಶ್ರೀಕಾಂತ್ ಹಾಗೂ ಇಬ್ಬರು ಸ್ನೇಹಿತರು ಜತೆಯಲ್ಲಿರಬೇಕು ಎಂದು ಡಿಸಿಪಿ ಸಂಜೀವ್ ಪಾಟೀಲ್ ಅವರಲ್ಲಿ ಶಂಕರ್ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಅವರ ಮನವಿಯಂತೆ ಇಂದು ಅವರ ಸಮ್ಮುಖದಲ್ಲೇ ಸಂಪೂರ್ಣ ಮನೆಯನ್ನು ವಿಡಿಯೋ ಚಿತ್ರೀಕರಣ ಮಾಡಲಾಯಿತು.

# ಶಂಕರ್ ರೋಧನೆ :
ಅಂತ್ಯಕ್ರಿಯೆ ವೇಲೆ ಪತ್ನಿಯ ಹಠದಿಂದಲೇ ಇಡೀ ಕುಟುಂಬ ಮಣ್ಣಾಯಿತು ಎಂದು ಶಂಕರ್ ರೋದಿಸುತ್ತಿದ್ದುದು ಕಂಡುಬಂತು. ಮಗು ಸಾವನ್ನಪ್ಪಿರುವ ಕಾರಣದ ಬಗ್ಗೆ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಮಗುವನ್ನು ಸಾಯಿಸಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಹಸಿವಿನಿಂದ ಮೃತಪಟ್ಟಿದೆಯೇ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳದಲ್ಲಿ ದೊರೆತ ನಾಲ್ವರ ಮೊಬೈಲ್‍ಗಳನ್ನು ಪೊಲೀಸರು ಈಗಾಗಲೇ ವಶಕ್ಕೆ ತೆಗೆದುಕೊಂಡಿದ್ದು, ಆ ಮೊಬೈಲ್‍ಗಳಿಂದ ಕೊನೆಯ ಬಾರಿ ಯಾರಿಗೆ ಕರೆ ಹೋಗಿದೆ, ಏನು ಮಾತನಾಡಿದ್ದಾರೆ, ಆತ್ಮಹತ್ಯೆಗೂ ಮುನ್ನ ಮೊಬೈಲ್‍ನಲ್ಲೇನಾದರೂ ವಿಡಿಯೋ ಮಾಡಿದ್ದಾರೆಯೇ ಎಂಬಿತ್ಯಾದಿ ವಿಷಯಗಳ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಮನೆಗೆ ಬೀಗ ಹಾಕಿದ ನಂತರ ಎರಡನೆ ಬಾರಿ ಶಂಕರ್ ಅವರನ್ನು ಪೊಲೀಸರು ವಿಚಾರಣೆ ನಡೆಸಿ ಹಲವು ಮಾಹಿತಿ ಪಡೆದುಕೊಂಡಿದ್ದರು.
ಅಲ್ಲದೆ, ಶಂಕರ್ ಅವರ ಅಳಿಯಂದಿರಾದ ಶ್ರೀಕಾಂತ್ ಹಾಗೂ ಪ್ರವೀಣ್ ಅವರನ್ನು ಸಹ ಪ್ರತ್ಯೇಕವಾಗಿ ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ.

ಒಟ್ಟಾರೆ ಈ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಸ್ಥಳದಲ್ಲಿ ದೊರೆತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿರುವ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

Facebook Comments

Sri Raghav

Admin