ಅಭಿಮಾನಿಯೊಬ್ಬನ ಅಭಿಮಾನದ ಕಥೆ ‘ಫ್ಯಾನ್’ ಚಿತ್ರ ಈ ವಾರ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳ್ಳಿ ಪರದೆ ಮೇಲೆ ಸದ್ದು ಮಾಡಲು ಯುವ ಪಡೆಗಳ ಬಳಗವೊಂದು ಫ್ಯಾನ್ ಚಿತ್ರದ ಮೂಲಕ ಪ್ರವೇಶ ಮಾಡುತ್ತಿದ್ದು, ರಾಜ್ಯಾದ್ಯಂತ ಸುಮಾರು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅಭಿಮಾನಿಯೊಬ್ಬನ ಅಭಿಮಾನದ ಕಥೆಯನ್ನು ಹೇಳಲು ಹೊರಟಿದ್ದಾರೆ. ಪ್ರಥಮ ಬಾರಿಗೆ ದರ್ಶಿತ್‍ಭಟ್ ನಿರ್ದೇಶನ ಮಾಡಿರುವ ಈ ಚಿತ್ರವು ಈಗಾಗಲೇ ಬಹಳಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ವಿಶೇಷವೆಂದರೆ ಈ ಚಿತ್ರವನ್ನು ಕಿರುತೆರೆಯ ಬಳಗ ಸೇರಿಕೊಂಡು ನಿರ್ಮಿಸಿದ್ದಾರೆ.

ನಿರ್ದೇಶಕ ದರ್ಶಿತ್ ಭಟ್ ಕರಾಟೆಕಿಂಗ್ ಶಂಕರ್‍ನಾಗ್ ಅವರ ಅಭಿಮಾನಿ. ಹಾಗಾಗಿಯೇ ಈ ಚಿತ್ರದ ಕಥಾಹಂದರವು ಕೂಡ ಶಂಕರ್‍ನಾಗ್ ಅವರ ಊರಿನಲ್ಲೇ ಚಿತ್ರೀಕರಣಗೊಂಡಿರುವುದು ವಿಶೇಷ. ಸುಮಾರು 80ರಷ್ಟು ಭಾಗದ ಚಿತ್ರೀಕರಣವನ್ನು ಹೊನ್ನಾವರದ ಸುತ್ತಮುತ್ತ ಹಾಗೂ ಶಂಕರ್‍ನಾಗ್ ಅವರ ಹುಟ್ಟೂರಾದ ಚಿತ್ರಾಪುರದಲ್ಲಿ ಚಿತ್ರೀಕರಿಸಲಾಗಿದೆ.

ಇದೇ ಪ್ರಥಮ ಬಾರಿಗೆ ಯುವನಟ ಆರ್ಯನ್ ಈ ಚಿತ್ರದಲ್ಲಿ ಸೀರಿಯಲ್ ಹೀರೋ ಹಾಗೂ ಶಂಕರ್‍ನಾಗ್ ಅವರ ಅಭಿಮಾನಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಆತನ ಫ್ಯಾನ್ ಹಾಗೂ ಆತನನ್ನೇ ಪ್ರೀತಿ ಮಾಡುವ ಹುಡುಗಿಯಾಗಿ ಅದ್ವಿತಿ ಶೆಟ್ಟಿ ಅಭಿನಯಿಸಿದ್ದಾರೆ. ಇವರಿಬ್ಬರೂ ಕಿರುತೆರೆಯಿಂದಲೇ ಬಂದವರು ಎನ್ನುವುದು ಇಲ್ಲಿ ವಿಶೇಷ. ಚಿತ್ರದಲ್ಲಿ ಮತ್ತೊಬ್ಬ ನಾಯಕಿ ಸಮೀಕ್ಷಾ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಉಳಿದಂತೆ ಹಿರಿಯ ಹಾಗೂ ಕಿರಿಯ ಕಲಾವಿದರಾದ ಮಂಡ್ಯ ರಮೇಶ್, ನವೀನ್ ಪಡೀಲ್, ಪ್ರಸನ್ನ ಶೆಟ್ಟಿ, ರವಿಭಟ್, ರಘು ಪಂಡೇಶ್ವರ್ ಹಾಗೂ ಸಂಗೀತಾಭಟ್ ಸೇರಿದಂತೆ ದೊಡ್ಡ ದಂಡೇ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಈ ಚಿತ್ರದ ಹಾಡುಗಳು ಹಾಗೂ ಟ್ರೈಲರ್ ಭಾರೀ ಸದ್ದು ಮಾಡಿದ್ದು, ಯುವ ಪ್ರತಿಭೆಗಳಾದ ವಿಕ್ರಂ ಹಾಗೂ ಚಂದನಾ ದಂಪತಿಗಳು ಈ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಈ ಚಿತ್ರದಲ್ಲಿ 4 ಹಾಡುಗಳಿದ್ದು, ಪ್ರತಿ ಹಾಡು ಚಿತ್ರಕಥೆಗೆ ಪೂರಕವಾಗಿದೆಯಂತೆ. ಈ ಚಿತ್ರಕ್ಕೆ ವಿ.ಪವನ್‍ಕುಮಾರ್ ಛಾಯಾಗ್ರಹಣ ಮಾಡಿದ್ದು, ಗಣಪತಿಭಟ್ ಸಂಕಲವನ್ನು ಒದಗಿಸಿದ್ದಾರೆ.

ಸವಿತಾಈಶ್ವರ್ ನಿರ್ಮಾಣದ ಈ ಯುವ ಪ್ರತಿಭೆಗಳ ಫ್ಯಾನ್ ಚಿತ್ರ ಈ ವಾರ ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆ ಮೇಲೆ ಬರುತ್ತಿದೆ.

Facebook Comments