ಹೊಸ ಕೃಷಿ ಮಸೂದೆಗಳು ರೈತರಿಗೆ ರಕ್ಷಾ ಕವಚ: ಪ್ರಧಾನಿ

ಈ ಸುದ್ದಿಯನ್ನು ಶೇರ್ ಮಾಡಿ

ಪಾಟ್ನಾ, ಸೆ.18- ಲೋಕಸಭೆಯಲ್ಲಿ ನಿನ್ನೆ ಅಂಗೀಕಾರಗೊಂಡಿರುವ ಕೃಷಿ ವಲಯಕ್ಕೆ ಸಂಬಂಧಪಟ್ಟ ಮೂರು ಮಹತ್ವದ ವಿಧೇಯಕಗಳನ್ನು ಐತಿಹಾಸಿಕ ಎಂದು ಬಣ್ಣಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ವಿಧೇಯಕಗಳು ರೈತರಿಗೆ ರಕ್ಷಣಾ ಕವಚವಾಗಿದೆ ಎಂದು ವ್ಯಾಖ್ಯಾನಿಸಿದ್ದಾರೆ. ಬಿಹಾರದ ರಾಜಧಾನಿ ಪಾಟ್ನಾದಲ್ಲಿಂದು ಕೋಸಿ ರೈಲ್ ಮೆಘಾ ಸೇತುವೆ ಲೋಕಾರ್ಪಣೆ ಸೇರಿದಂತೆ 12 ಪ್ರಮುಖ ರೈಲು ಯೋಜನೆಗಳಿಗೆ ವೀಡಿಯೋ ಲಿಂಕ್ ಮೂಲಕ ಚಾಲನೆ ನೀಡಿ ಮೋದಿ ಮಾತನಾಡಿದರು.

ಹೊಸ ಮಸೂದೆಯು ದೇಶದ ಬೆನ್ನೆಲುಬಾದ ಅನ್ನದಾತರನ್ನು ಸಬಲೀಕರಣಗೊಳಿಸುತ್ತದೆ. ಈ ಬಗ್ಗೆ ಯಾವುದೇ ಅನುಮಾನ, ಗೊಂದಲ ಬೇಡ ಎಂದು ರೈತರಿಗೆ ಅಭಯ ನೀಡಿದರು.
2014ರ ಹಿಂದೆ ಇದ್ದ ಸರ್ಕಾರಗಳು ಅನ್ನದಾತರನ್ನು ದಿಕ್ಕು ತಪ್ಪಿಸಿದ್ದವು. ಪರಿಣಾಮಕಾರಿ ಮಸೂದೆಗಳ ಜಾರಿ ಬಗ್ಗೆ ಪೊಳ್ಳು ಆಶ್ವಾಸನೆಗಳನ್ನು ನೀಡಿದ್ದರು ಎಂದು ಅವರು ಟೀಕಿಸಿದರು.

ನಮ್ಮ ಸರ್ಕಾರ ರೈತರ ಹಿತಾಸಕ್ತಿಗೆ ಬದ್ಧ. ರೈತರು ಬೆಳೆದ ಬೆಳೆಗಳಿಗೆ ಸೂಕ್ತವಾದ ಬೆಂಬಲ ಬೆಲೆ ನೀಡುತ್ತಿದೆ. ಅವರ ಉತ್ಪನ್ನಗಳನ್ನು ಉತ್ತಮ ಬೆಲೆಗೆ ಖರೀದಿಸಿ ಮಧ್ಯವರ್ತಿಗಳು ಮತ್ತು ದಲ್ಲಾಳಿಗಳ ಹಾವಳಿಯನ್ನು ತಪ್ಪಿಸಿದೆ. ರೈತರ ಉತ್ಪನ್ನಗಳನ್ನು ಸೂಕ್ತ ಬೆಲೆಗೆ ಖರೀದಿಸುತ್ತದೆ ಎಂಬುದನ್ನು ನಮ್ಮ ಸರ್ಕಾರ ಮುಂದುವರೆಸುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಇತಿಹಾಸದಲ್ಲಿ ಇಂದು ಮಹತ್ವದ ದಿನ . 12 ಪ್ರಮುಖ ಯೋಜನೆಗಳಿಗೆ ಚಾಲನೆ ದೊರೆತಿದೆ. 2014ರ ನಂತರ ಹಿಂದೆ ಇದ್ದ ಸರ್ಕಾರ 325 ಕಿ.ಮೀ ರೈಲು ಮಾರ್ಗ ನಿರ್ಮಿಸಲು ಹಲವು ವರ್ಷಗಳನ್ನು ತೆಗೆದುಕೊಂಡಿತ್ತು. ಆದರೆ ನಾವು ಈ 2014ರ ನಂತರ ಐದು ವರ್ಷಗಳಲ್ಲೇ 700 ಕಿ.ಮೀ ರೈಲು ಮಾರ್ಗವನ್ನು ನಿರ್ಮಿಸಿ ಸಂಪರ್ಕ ಕಲ್ಪಿಸಿದ್ದೇವೆ ಎಂದು ಪ್ರಧಾನಿ ಅಂಕಿಅಂಶ ನೀಡಿದರು.

Facebook Comments