ಪ್ರಧಾನಿಗೆ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡ ಕೃಷಿಕ..!

ಈ ಸುದ್ದಿಯನ್ನು ಶೇರ್ ಮಾಡಿ

ಭೂಪಾಲ್, ಜ.1- ಕೊರೊನಾ ಸಂಕಷ್ಟದಿಂದ ಕೃಷಿ ಮತ್ತು ವ್ಯಾಪಾರ ಎರಡರಲ್ಲೂ ನಷ್ಟ ಉಂಟಾಗಿ ದುಬಾರಿ ವಿದ್ಯುತ್ ಬಿಲ್ ಪಾವತಿಸಲಾಗದೆ ವ್ಯಕ್ತಿಯೊಬ್ಬ ಪ್ರಧಾನ ಮಂತ್ರಿ ಅವರಿಗೆ ಏಳು ಪುಟಗಳ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಚಟ್ಟಾಪುರ್ ಜಿಲ್ಲೆಯ ಮಗ್ಟುನ್ವಾ ಗ್ರಾಮ ಮುನೇಂದ್ರಸಿಂಗ್ ರಜಪೂತ್ ತನ್ನ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಾವಿಗೂ ಮುನ್ನಾ ಮುನೇಂದ್ರ ಪ್ರಧಾನಿ ಅವರಿಗೆ ಪತ್ರ ಬರೆದಿದ್ದು, ನಿಮ್ಮ ಮೇಲೆ ನನಗೆ ಅಪಾರ ಪ್ರೀತಿ ಇದೆ. ಆದರೆ ಕೆಳಹಂತದಲ್ಲಿ ಯೋಜನೆಗಳ ಜಾರಿಯಲ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಹಾಗಾಗಿ ಕೆಳ ಹಂತದಲ್ಲಿ ಯೋಜನೆಗಳ ಜಾರಿ ಬಗ್ಗೆ ರಿಯಾಲಿಟಿ ಚೆಕ್ ಮಾಡಿ ಎಂದು ಮನವಿ ಮಾಡಿದ್ದಾರೆ.

ಮುನೇಂದ್ರ ಅವರ ತಂದೆ ಬಿಜೆಪಿಯ ಬೆಂಬಲಿಗರಾಗಿದ್ದಾರೆ. ಕೃಷಿಯ ಜೊತೆಗೆ ಗಿರಣಿ ನಡೆಸುತ್ತಿದ್ದರು. ವಿದ್ಯುತ್ ನಿಗಮ 87 ಸಾವಿರ ರೂ. ಬಿಲ್ ನೀಡಿತ್ತು. ಲಾಕ್‍ಡೌನ್ ಸಂದರ್ಭದಲ್ಲೂ ಸರಾಸರಿ ವಿದ್ಯುತ್ ಮೊತ್ತವನ್ನು ನಿಗದಿ ಮಾಡಿ ಬಿಲ್ ನೀಡಲಾಗಿತ್ತು. ಲಾಕ್‍ಡೌನ್ ಮತ್ತು ಅನ್‍ಲಾಕ್‍ಡೌನ್ ಸಂದರ್ಭದಲ್ಲಿ ವ್ಯಾಪಾರದಲ್ಲಿ ಅಪಾರ ನಷ್ಟವಾಗಿತ್ತು. ಕೃಷಿ ಬೆಳೆ ಕೂಡ ಕೈ ಹಿಡಿಯಲಿಲ್ಲ.

ಹೀಗಾಗಿ ಮುನೇಂದ್ರನಿಗೆ ವಿದ್ಯುತ್ ಬಿಲ್ ಪಾವತಿಸಲಾಗಲಿಲ್ಲ. ಪದೇ ಪದೇ ನೋಟಿಸ್ ನೀಡಿದ್ದ ವಿದ್ಯುತ್ ನಿಗಮ ಬಿಲ್ ಪಾವತಿಸುವಂತೆ ಕಿರುಕುಳ ನೀಡುತ್ತಿತ್ತು. ಬಿಲ್ ವಸೂಲಿಗಾಗಿ ಮುನೇಂದ್ರನ ಮೋಟಾರ್ ಸೈಕಲ್‍ನ್ನು ಜಪ್ತಿ ಮಾಡಿತ್ತು. ವಿದ್ಯುತ್ ಕಡಿತ ಮಾಡಿದ್ದರಿಂದ ಪ್ಲೊರ್ ಮಿಲ್ ಕೂಡ ಬಂದ್ ಆಗಿತ್ತು ಎಂದು ಮೃತನ ಸಹೋದರ ಆರೋಪಿಸಿದ್ದಾರೆ.

ಇದರಿಂದ ಬೇಸತ್ತಿದ್ದ ಮುನೇಂದ್ರ ಆತ್ಮಹತ್ಯೆಗೂ ಮುನ್ನಾ ಪ್ರಧಾನಿ ಅವರಿಗೆ ಪತ್ರ ಬರೆದು ತನ್ನ ಕಷ್ಟ ತೋಡಿಕೊಂಡಿದ್ದಾರೆ. ನಿಮ್ಮ ಮೇಲೆ ನನಗೆ ಅಪಾರ ವಿಶ್ವಾಸ, ಗೌರವ ಇದೆ ಎಂದಿದ್ದಾನೆ. ಕೆಳ ಹಂತದಲ್ಲಿ ಅಧಿಕಾರಿಗಳು ಜನರಿಗೆ ಸರ್ಕಾರದ ಯೋಜನೆಗಳನ್ನು ಸರಿಯಾಗಿ ತಲುಪಿಸುತ್ತಿಲ್ಲ. ನನ್ನ ಸಾವಿನ ಬಳಿಕ ನನ್ನ ಅಂಗಾಂಗಳನ್ನು ಮಾರಾಟ ಮಾಡಿ ವಿದ್ಯುತ್ ಬಿಲ್ ಪಾವತಿ ಮಾಡಿ ಎಂದು ಬರೆದಿದ್ದಾನೆ.

Facebook Comments